KSBC Chairman Vishal Raghu H L and Vice Chairman Vinay Mangalekar 
ಸುದ್ದಿಗಳು

ಸಮ್ಮೇಳದ ಹಣ ದುರ್ಬಳಕೆ: ವಕೀಲರ ಜಗಳದಿಂದ ತನ್ನ ವಿರುದ್ಧ ಪ್ರಕರಣ ದಾಖಲು ಎಂದು ಕೆಎಸ್‌ಬಿಸಿ ಅಧ್ಯಕ್ಷರ ವಾದ

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಆಗಸ್ಟ್‌ 14ರಂದು ಆದೇಶ ಪ್ರಕಟಿಸುವುದಾಗಿ ಹೇಳಿದೆ.

Bar & Bench

ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ವೇಳೆ ಹಣಕಾಸು ದುರ್ಬಳಕೆ ನಡೆದಿದ್ದು, ₹50 ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರುಪಯೋಗ ನಡೆದಿದೆ ಎಂದು ಆರೋಪಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಅವರು ಮೂಲಭೂತವಾಗಿ ಇದು ವಕೀಲರ ನಡುವಿನ ಜಗಳವಾಗಿದ್ದು, ಆಂತರಿಕವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ತಮ್ಮ ವಿರುದ್ದದ ತನಿಖೆ ವಜಾ ಮಾಡುವಂತೆ ಕೋರಿ ಕೆಎಸ್‌ಬಿಸಿ ಅಧ್ಯಕ್ಷ ಎಚ್‌ ಎಲ್‌ ವಿಶಾಲ್‌ ರಘು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ವಕೀಲರ ನಡುವಿನ ಜಗಳಕ್ಕೆ ಸಂಬಂಧಿಸಿದ ದುರುದೃಷ್ಟಕರ ಪ್ರಕರಣ ಇದಾಗಿದೆ. ಪ್ರಕರಣವನ್ನು ಪೊಲೀಸರು ತನಿಖೆ ನಡೆಸಬೇಕೆ ಎಂಬುದು ಪೀಠದ ಮುಂದಿರುವ ಪ್ರಶ್ನೆಯಾಗಿದೆ. ನನ್ನ ಅಭಿಪ್ರಾಯದಲ್ಲಿ ಇದನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳುವುದು ಒಳಿತು ಎಂದರು.

"ದೂರುದಾರ ವಕೀಲ ಎಸ್‌ ಬಸವರಾಜು ಅವರು ಮೈಸೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಆನಂತರ ಸಮ್ಮೇಳನದ ಹಣದಲ್ಲಿ ದುರ್ಬಳಕೆ ನಡೆದಿದೆ ಎಂದು ಆರೋಪಿಸಿದ್ದಾರೆ" ಎಂದರು.

KSBC Member and Senior Advocate Basavaraju S

ಪಾರ್ಟಿ ಇನ್‌ ಪರ್ಸನ್‌ ರೂಪದಲ್ಲಿ ವಾದಿಸಿದ ವಕೀಲ ಬಸವರಾಜು ಅವರು “ವಿಶಾಲ್‌ ರಘು ಮತ್ತು ಇತರರು ನಕಲಿ ಬಿಲ್‌ ಸಲ್ಲಿಸಿ ಲಕ್ಷಾಂತರ ರೂಪಾಯಿಗಳನ್ನು ತಮ್ಮ ಖಾತೆ ವರ್ಗಾಯಿಸಿಕೊಂಡಿದ್ದಾರೆ" ಎಂದು ಪುನರುಚ್ಚರಿಸಿದರು.

ದೂರಿನ ವಿವರ: ರಾಜ್ಯ ವಕೀಲರ ಪರಿಷತ್‌ ವತಿಯಿಂದ ಮೈಸೂರಿನಲ್ಲಿ 2023ರ ಆಗಸ್ಟ್‌ 12 ಮತ್ತು 13ರಂದು ಎರಡು ದಿನಗಳ ಕಾಲ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಸಮ್ಮೇಳನದ ಪ್ರತಿನಿಧಿ ವಕೀಲರಿಂದ ತಲಾ ₹1 ಸಾವಿರದಂತೆ ಒಟ್ಟು ₹1,16,33,000 ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು. ರಾಜ್ಯ ಸರ್ಕಾರ ₹1.8 ಲಕ್ಷ ಅನುದಾನ ನೀಡಿತ್ತು ಮತ್ತು ರಾಜ್ಯ ವಕೀಲರ ಪರಿಷತ್‌ನಿಂದ ₹75 ಲಕ್ಷ ಬಿಡುಗಡೆಯಾಗಿತ್ತು. ಒಟ್ಟು ಮೊತ್ತ ₹3,30,33,000 ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್‌ ಖಾತೆಗೆ ಜಮೆ ಆಗಿದ್ದು, ಈ ಹಣದ ಬಳಕೆಯಲ್ಲಿ ದುರುಪಯೋಗ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ ₹50 ಲಕ್ಷ ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿ, ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಯನ್ನು, ನಕಲಿ ಬಿಲ್‌ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡಿದ್ದು ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿನಲ್ಲಿ ಬಸವರಾಜ್‌ ಆರೋಪಿಸಿದ್ದಾರೆ.