KSBC Chairman Vishal Raghu H L and Vice Chairman Vinay Mangalekar 
ಸುದ್ದಿಗಳು

ಕೆಎಸ್‌ಬಿಸಿ ಹಣ ದುರ್ಬಳಕೆ: ಯಾರು ತನಿಖೆ ನಡೆಸಬೇಕು ಎಂಬುದನ್ನು ಮೇ 30ಕ್ಕೆ ನಿರ್ಧರಿಸಲಾಗುವುದು ಎಂದ ಹೈಕೋರ್ಟ್‌

ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ್‌ ರಘು ಮತ್ತು ವಿನಯ್‌ ಮಂಗಳೇಕರ್‌ ಅವರಿಗೆ ಹ್ಯಾಂಡ್‌ ಸಮನ್ಸ್‌ ಮೂಲಕ ನೋಟಿಸ್‌ ತಲುಪಿಸಲು ಅರ್ಜಿದಾರರಿಗೆ ಸೂಚಿಸಿದ ನ್ಯಾಯಾಲಯ.

Bar & Bench

ಮೈಸೂರಿನಲ್ಲಿ ಕಳೆದ ವರ್ಷ ಜರುಗಿದ ರಾಜ್ಯ ವಕೀಲರ ಸಮ್ಮೇಳನದ ವೇಳೆ ಹಣಕಾಸು ದುರ್ಬಳಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ ದೂರಿನ ತನಿಖೆಗಾಗಿ ಮೂವರು ಸದಸ್ಯರ ಸಮಿತಿ ರಚಿಸಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮಾಡಿರುವ ಆದೇಶಕ್ಕೆ ನೀಡಿರುವ ತಡೆಯಾಜ್ಞೆ ಮುಂದುವರಿಸಿರುವ ಕರ್ನಾಟಕ ಹೈಕೋರ್ಟ್‌, ಈ ಪ್ರಕರಣದ ತನಿಖೆಯನ್ನು ಯಾರು ನಡೆಸಬೇಕು ಎಂಬುದನ್ನು ನಿರ್ಧರಿಸಲು ಪ್ರಕರಣವನ್ನು ಮೇ 30ಕ್ಕೆ ಪಟ್ಟಿ ಮಾಡುವಂತೆ ಆದೇಶಿಸಿದೆ.

ರಾಜ್ಯ ವಕೀಲರ ಪರಿಷತ್‌ ಸದಸ್ಯರೂ ಆಗಿರುವ ಹಿರಿಯ ವಕೀಲ ಎಸ್‌ ಬಸವರಾಜು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈಚೆಗೆ ವಿಚಾರಣೆ ನಡೆಸಿತು.

ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ್‌ ರಘು ಮತ್ತು ವಿನಯ್‌ ಮಂಗಳೇಕರ್‌ ಅವರಿಗೆ ಹ್ಯಾಂಡ್‌ ಸಮನ್ಸ್‌ ಮೂಲಕ ನೋಟಿಸ್‌ ತಲುಪಿಸಲು ಅರ್ಜಿದಾರರಿಗೆ ನ್ಯಾಯಾಲಯ ಆದೇಶಿಸಿದೆ.

ಕೆಎಸ್‌ಬಿಸಿ ಮಾಜಿ ಅಧ್ಯಕ್ಷ ಆನಂದ್‌ ಕುಮಾರ್‌ ಮಗದುಮ್‌ ಅವರು ಏಪ್ರಿಲ್‌ 5ರಂದು ನೀಡಿದ ದೂರನ್ನು ಆಧರಿಸಿ ಬಿಸಿಐ ಏಪ್ರಿಲ್‌ 12ರಂದು ಹಿರಿಯ ವಕೀಲ ಅಪೂರ್ವ ಕುಮಾರ್‌ ಶರ್ಮಾ ನೇತೃತ್ವದಲ್ಲಿ ಮೂವರ ಸಮಿತಿಯನ್ನು ರಚಿಸಿ, ಆರೋಪದ ಕುರಿತು ತನಿಖೆ ಮಾಡುವಂತೆ ಆದೇಶಿಸಿತ್ತು. ಅಮಿತ್‌ ವೇದ್‌ ಮತ್ತು ಭಕ್ತ ಭೂಷಣ್‌ ಬರೀಕ್‌ ಸಮಿತಿಯ ಮತ್ತಿಬ್ಬರು ಸದಸ್ಯರು.

ಮೈಸೂರಿನಲ್ಲಿ ನಡೆದ ವಕೀಲರ ಸಮಾವೇಶಕ್ಕೆ ಸಂಬಂಧಿಸಿದ ಖರ್ಚು-ವೆಚ್ಚದ ದಾಖಲೆಗಳನ್ನು ಸಲ್ಲಿಸುವಂತೆ ಕೆಎಸ್‌ಬಿಸಿ ಕಾರ್ಯದರ್ಶಿಗೆ ಬಿಸಿಐ ಸೂಚಿಸಿತ್ತು. ತನಿಖೆ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಸ್‌ಬಿಸಿ ಸದಸ್ಯರು ಮತ್ತು ವಕೀಲರು ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧಿಸಿ ಆದೇಶಿಸಿತ್ತು. ಇದಕ್ಕೆ ಹೈಕೋರ್ಟ್‌ ತಡೆ ನೀಡಿದೆ.