S S Mittalakod Chairman, KSBC 
ಸುದ್ದಿಗಳು

ಕೆಎಸ್‌ಬಿಸಿ ಅಧ್ಯಕ್ಷ ಮಿತ್ತಲಕೋಡ್‌ ನಾಮನಿರ್ದೇಶನಕ್ಕೆ ಆಕ್ಷೇಪ: ಬಿಸಿಐ, ಕೆಎಸ್‌ಬಿಸಿಗೆ ಹೈಕೋರ್ಟ್‌ ನೋಟಿಸ್‌

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 2024ರ ಜುಲೈ 23ರಂದು ಚುನಾವಣೆ ದಿನಾಂಕ ನಿಗದಿ ಮಾಡಿ 2024ರ ಮೇ 31ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರ ನಡುವೆಯೇ ಬಿಸಿಐ ಈ ನೇಮಕ ನಡೆಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಆಕ್ಷೇಪಿಸಲಾಗಿದೆ.

Bar & Bench

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷರಾಗಿ ಎಸ್‌ ಎಸ್‌ ಮಿತ್ತಲಕೋಡ್‌ರನ್ನು ನಾಮನಿರ್ದೇಶನ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಭಾರತೀಯ ವಕೀಲರ ಪರಿಷತ್‌ಗೆ(ಬಿಸಿಐ) ನೋಟಿಸ್‌ ಜಾರಿಗೊಳಿಸಿದೆ.

ಭಾರತೀಯ ವಕೀಲ ಪರಿಷತ್ ಆದೇಶ ರದ್ದತಿ ಕೋರಿ ಕೆ ಕೋಟೇಶ್ವರ ರಾವ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಸ್‌ ಎಸ್‌ ಯಡ್ರಾಮಿ ವಾದಿಸಿದ್ದರು. ಕೆಎಸ್‌ಬಿಸಿ ಮತ್ತು ಮಿತ್ತಲಕೋಡ್‌ ಪರವಾಗಿ ವಕೀಲ ಟಿ ವಿ ವಿವೇಕಾನಂದ ಅವರಿಗೆ ನೋಟಿಸ್‌ ಪಡೆಯಲು ನ್ಯಾಯಾಲಯ ನಿರ್ದೇಶಿಸಿದೆ. ಭಾರತೀಯ ವಕೀಲರ ಪರಿಷತ್‌ ಪರವಾಗಿ ಅನುಭಾ ಶ್ರೀವಾಸ್ತವ ನೋಟಿಸ್‌ ಪಡೆದಿದ್ದು, ಆಕ್ಷೇಪಣೆ ಸಲ್ಲಿಸಲು ಹತ್ತು ದಿನ ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್‌ 7ಕ್ಕೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ಯಡ್ರಾಮಿ ಅವರು “2024ರ ಮೇ ತಿಂಗಳಲ್ಲಿ ಕೆಎಸ್‌ಬಿಸಿಯ ಅಧ್ಯಕ್ಷರಾಗಿದ್ದ ವಿಶಾಲ್‌ ರಘು ಮತ್ತು ಉಪಾಧ್ಯಕ್ಷರಾದ ವಿನಯ್‌ ಮಂಗಳೇಕರ್‌ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಆನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 2024ರ ಜುಲೈ 23ರಂದು ಚುನಾವಣೆ ದಿನಾಂಕ ನಿಗದಿ ಮಾಡಿ 2024ರ ಮೇ 31ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರ ನಡುವೆಯೇ ಬಿಸಿಐ ಈ ನೇಮಕ ನಡೆಸಿರುವುದು ಕಾನೂನು ಬಾಹಿರ ಕ್ರಮವಾಗಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.

“ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ ಪ್ರಕ್ರಿಯೆ ನಡೆಯುವ ಹಂತದಲ್ಲಿ ಬಿಸಿಐ ಕ್ರಮ ಏಕಪಕ್ಷೀಯ ಮತ್ತು ಕಾನೂನು ಬಾಹಿರವಾಗಿದೆ. ಹೀಗಾಗಿ, ಕೂಡಲೇ ಭಾರತೀಯ ವಕೀಲರ ಪರಿಷತ್‌ ಆದೇಶವನ್ನು ರದ್ದುಗೊಳಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಕೂಡಲೇ ಚುನಾವಣೆಗಳನ್ನು ನಡೆಸಲು ನಿರ್ದೇಶನ ನೀಡಬೇಕು. ವಕೀಲರ ಕಾಯಿದೆ ಸೆಕ್ಷನ್‌ 8ಎ ಪ್ರಕಾರ ಸಮಿತಿ ರಚನೆಗೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕಾಲಾವಧಿ ವಿಸ್ತರಿಸಿದ ಹೊರತಾಗಿಯೂ ಕೆಎಸ್‌ಬಿಸಿಯು ಇಲ್ಲಿಯವರೆಗೆ ಪ್ರಾಕ್ಟೀಸ್‌ ಮಾಡದ ವಕೀಲರು ಅಥವಾ ಅವರ ಸರ್ಟಿಫಿಕೇಟ್‌ಗಳನ್ನು ಪರಿಶೀಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಎಸ್‌ ಎಸ್‌ ಮಿತ್ತಲಕೋಡ್‌ ಅವರನ್ನು ನೂತನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.