ರೀಲ್ಸ್ ಮೂಲಕ ಕಾನೂನು ಸಲಹೆ ನೀಡುವ ನೆಪದಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿದ್ದ ಮತ್ತು ವೃತ್ತಿ ಘನತೆಗೆ ಅಪಚಾರ ಎಸಗಿದ ಆರೋಪದ ಮೇಲೆ ಒಬ್ಬರು ಮಹಿಳೆ ಸೇರಿ ಐವರು ವಕೀಲರ ಸನ್ನದನ್ನು ಅಮಾನತುಗೊಳಿಸಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಈಚೆಗೆ ಹೇಳಿಕೆ ಬಿಡುಗಡೆ ಮಾಡಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ವಿರುದ್ಧ ಮತ್ತು ಹಾಲಿ ವಿಚಾರದ ಕುರಿತು ಪರ-ವಿರೋಧ ಆರೋಪ ಮಾಡಲು ಯಾವುದೇ ವಕೀಲರು ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಕೂಡದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಮತ್ತು ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಕೆಎಸ್‌ಬಿಸಿ ಅಧ್ಯಕ್ಷ ವಿ ಡಿ ಕಾಮರಡ್ಡಿ ತಿಳಿಸಿದ್ದಾರೆ.
ಅಮಾನತು ನಿರ್ಣಯ ಹೊರಡಿಸಿದ್ದು ಮತ್ತು ಅದನ್ನು ಹಿಂಪಡೆದಿರುವುದರ ಕುರಿತು ಕೆಎಸ್‌ಬಿಸಿ ಅಧ್ಯಕ್ಷ ವಿ ಡಿ ಕಾಮರಡ್ಡಿ ಅವರು ಬಾರ್ ಅಂಡ್ ಬೆಂಚ್ ಜೊತೆ ಮಾತನಾಡಿದ್ದು, “ಪರಿಶೀಲನಾ ಸಮಿತಿಯನ್ನು ಹಿಂದಿನ ಅಧ್ಯಕ್ಷರು (ಎಸ್ ಎಸ್ ಮಿಟ್ಟಲಕೋಡ್) ಇದ್ದಾಗ ನೇಮಿಸಲಾಗಿತ್ತು. ನಾನು ಅಧಿಕಾರ ಸ್ವೀಕರಿಸಿದಾಗ ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇರಲಿಲ್ಲ. ಆನಂತರ ಐವರು ವಕೀಲರಿಗೆ ಕ್ಷಮೆ ಕೋರಬೇಕು ಎಂದು ಸೂಚಿಸಲಾಗಿತ್ತು. ಈ ಪೈಕಿ ಇಬ್ಬರು ಮೌಖಿಕವಾಗಿ ಮತ್ತು ಇನ್ನಿಬ್ಬರು ಲಿಖಿತವಾಗಿ ಕ್ಷಮೆ ಕೋರಿದ್ದಾರೆ. ಹೀಗಾಗಿ, ಎಲ್ಲಾ ಐವರು ʼರೀಲ್ಸ್ʼ ವಕೀಲರ ಅಮಾನತು ನಿರ್ಣಯವನ್ನು ಹಿಂಪಡೆಯಲಾಗಿದೆ. ಜನವರಿ 10ರ ಸಭೆಯನ್ನು ಕೆಎಸ್‌ಬಿಸಿ ಮುಂದೂಡಬೇಕು ಎಂದು ಹೈಕೋರ್ಟ್ ಮಾಡಿದ್ದ ನಿರ್ದೇಶನದ ಉಲ್ಲಂಘನೆಯಾಗಿಲ್ಲ. ಪ್ರಕರಣವನ್ನು ವಿಸ್ತರಿಸುವುದು ಬೇಡ ಎಂದು ನಿರ್ಣಯ ಹಿಂಪಡೆಯಲಾಗಿದೆ” ಎಂದು ತಿಳಿಸಿದರು.
ವಕೀಲರಾದ ಬೆಂಗಳೂರಿನ ವಿನಯ್‌ಕುಮಾರ್, ಜಿ ಮಂಜುನಾಥ್ ಮತ್ತು ರೇಣುಕಾ ದೇವಿ ಅಲಿಯಾಸ್ ರೇಣುಕಾ ಹಿರೇಮಠ, ಮೈಸೂರಿನ ವಿ ರವಿಕುಮಾರ್ ಮತ್ತು ಹುಣಸೂರಿನ ಎನ್ ಪುಟ್ಟೇಗೌಡ ಅವರ ಸನ್ನದನ್ನು ಅಮಾನತುಗೊಳಿಸಲಾಗಿದೆ ಎಂದು ಕೆಎಸ್‌ಬಿಸಿ ನಿರ್ಣಯದಲ್ಲಿ ತಿಳಿಸಲಾಗಿತ್ತು. ಇದನ್ನು ಕೆಎಸ್‌ಬಿಸಿಯ ಪರಿಶೀಲನಾ/ಮಧ್ಯಸ್ಥಿಕೆ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಸ್ ಬಸವರಾಜು ಖಾತರಿಪಡಿಸಿದ್ದರು.
ಈ ನಡುವೆ, ಶಿಸ್ತುಕ್ರಮಕ್ಕೆ ಸಂಬಂಧಿಸಿದಂತೆ 2025ರ ಡಿಸೆಂಬರ್ 6ರಂದು ಕೈಗೊಂಡಿರುವ ನಿರ್ಣಯ ಅಥವಾ ಅಮಾನತು ಆದೇಶ ಒದಗಿಸಲು ಕೆಎಸ್‌ಬಿಸಿಗೆ ನಿರ್ದೇಶಿಸುವಂತೆ ಮೈಸೂರಿನ ಸೂರ್ಯ ಲಾ ಚೇಂಬರ್‌ನ ವಕೀಲ ವಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠವು ವಿಲೇವಾರಿ ಮಾಡಿತ್ತು. ವಕೀಲ ವಿ ರವಿಕುಮಾರ್ ಅವರಿಗೆ ಪರಿಶೀಲನಾ ಸಮಿತಿ ಮಾಡಿರುವ ಶಿಫಾರಸ್ಸಿನ ಪ್ರತಿ ನೀಡುವಂತೆ ಹಾಗೂ ಅಗತ್ಯಬಿದ್ದಲ್ಲಿ ಅದರ ವಿರುದ್ಧ ವಾದ ಮಂಡಿಸಲು ಸೂಕ್ತ ಕಾಲಾವಕಾಶ ನೀಡಬೇಕು ಎಂದು ಕೆಎಸ್‌ಬಿಸಿಗೆ ನ್ಯಾಯಾಲಯ ನಿರ್ದೇಶಿಸಿತ್ತು.
ಅಲ್ಲದೇ, ಇದೇ ವೇಳೆ, ಕೆಎಸ್‌ಬಿಸಿ ಅಧ್ಯಕ್ಷರು, ಸದಸ್ಯರು ಅಥವಾ ಪರಿಶೀಲನೆ/ಮಧ್ಯಸ್ಥಿಕೆ ಸಮಿತಿ ಸದಸ್ಯರ ವಿರುದ್ಧ ಯಾವುದೇ ಅಪಪ್ರಚಾರದಲ್ಲಿ ತೊಡಗಿರುವ ಆರೋಪಕ್ಕೆ ಆಸ್ಪದವೀಯದಂತೆ ವಕೀಲ ವಿ ರವಿಕುಮಾರ್ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತ್ತು.
ಅಮಾನತು ನಿರ್ಣಯ ಹೊರಡಿಸಿ, ಆನಂತರ ಅದನ್ನು ಹಿಂಪಡೆದಿರುವ ಕುರಿತು ವಕೀಲರ ಸಮುದಾಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಮಾರ್ಚ್ 11ಕ್ಕೆ ಕೆಎಸ್‌ಬಿಸಿಗೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಹಸನ ನಡೆಸಲಾಗಿದೆ ಎಂದು ಕೆಲವರು ಬೇಸರಿಸಿದ್ದಾರೆ.