ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯಕಾರಿ ಅಧ್ಯಕ್ಷರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ ವೀರಪ್ಪ ಅವರು ಮಂಗಳವಾರ ಬೆಂಗಳೂರಿನ ವಾಣಿ ವಿಲಾಸ ಮತ್ತು ನಿಮ್ಹಾನ್ಸ್ ಆಸ್ಪತ್ರೆಗೆಳಿಗೆ ಭೇಟಿ ನೀಡಿ ನಾಗರಿಕರ ದೂರು-ದುಮ್ಮಾನ ಆಲಿಸಿದರು. ಅಲ್ಲದೇ, ಕಾನೂನು ಸೇವಾ ಪ್ರಾಧಿಕಾರ ಕಾಯಿದೆ ಸೆಕ್ಷನ್ 22(ಎ)(ಬಿ)(ವಿ) ಅಡಿ ಜನರಿಗೆ ದಾವೆ ಪೂರ್ವ ರಾಜಿ ಮತ್ತು ಇತ್ಯರ್ಥದ ಕುರಿತು ಅರಿವು ಮೂಡಿಸಿದರು.
ವಾಣಿ ವಿಲಾಸ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಶ್ಲಾಘಿಸಿದ ನ್ಯಾಯಮೂರ್ತಿಗಳು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಸಿಬ್ಬಂದಿಯನ್ನೂ ಹೆಚ್ಚಿಸಬೇಕಿದೆ ಎಂದರು.
ತಾಯಿ ಎದೆ ಹಾಲು ಸಂಗ್ರಹಿಸಿ, ಅಗತ್ಯವಾದ ಹಸುಗೂಸುಗಳಿಗೆ ಅದನ್ನು ಪೂರೈಸುವುದಕ್ಕಾಗಿ ರೂಪಿಸಲಾಗಿರುವ ಸಮಗ್ರ ಸ್ತನ್ಯಪಾನ ನಿರ್ವಹಣಾ ಕೇಂದ್ರ ʼಅಮೃತಧಾರೆʼ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕಿ ಡಾ. ಸವಿತಾ ಅವರು ನ್ಯಾ. ವೀರಪ್ಪ ಮತ್ತು ಅವರ ತಂಡಕ್ಕೆ ಆಸ್ಪತ್ರೆಯಲ್ಲಿ ನಾಗರಿಕರಿಗೆ ಕಲ್ಪಿಸಿರುವ ಸೌಲಭ್ಯದ ಕುರಿತು ವಿವರಣೆ ನೀಡಿದರು.
ನಿಮ್ಹಾನ್ಸ್‌ನಲ್ಲಿ ಹೊರರೋಗಿಗಳಿಗೆ ನೀಡಲಾಗುವ ಟೋಕನ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಿದೆ. ಎಲ್ಲಾ ರೋಗಿಗಳನ್ನು ಸಮಾನವಾಗಿ ಕಾಣಬೇಕು. ರಾಜ್ಯದಲ್ಲಿ ಮನೋವಿಜ್ಞಾನಿಗಳು ಮತ್ತು ನರವಿಜ್ಞಾನ ತಜ್ಞರ ಕೊರತೆಯಿಂದಾಗಿ ಜನರು ನಿಮ್ಹಾನ್ಸ್ ಅನ್ನು ಅತೀವವಾಗಿ ಅವಲಂಬಿಸಿದ್ದಾರೆ ಎಂದರು.
ಪಾರ್ಶ್ವವಾಯು ಹಾಗೂ ಮಾನಸಿಕ ರೋಗಗಳಿಗೆ ತುರ್ತು ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲಿ ಉಪ ಕೇಂದ್ರ ಆರಂಭಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಆಸ್ಪತ್ರೆಗಳ ಭೇಟಿಯ ಸಂದರ್ಭದಲ್ಲಿನ ವರದಿಯನ್ನು ಸರ್ಕಾರದ ಸಂಬಂಧಿತ ಇಲಾಖೆಗಳ ಅವಗಾಹನೆಗೆ ತರುವ ನಿಟ್ಟಿನಲ್ಲಿ ಪತ್ರ ಬರೆಯುವಂತೆ ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗೆ ನ್ಯಾ. ವೀರಪ್ಪ ಅವರು ನಿರ್ದೇಶಿಸಿದರು.
ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಗ್ನೇಶ್ ಕುಮಾರ್ ಅವರು ನ್ಯಾ. ವೀರಪ್ಪ ಅವರ ತಂಡದಲ್ಲಿದ್ದರು.