KSLU 
ಸುದ್ದಿಗಳು

ಎಲ್‌ಎಲ್‌ಬಿ ಪರೀಕ್ಷೆ ನಡೆಸಬೇಡಿ ಎಂದು ಹೇಳಲು ವಿದ್ಯಾರ್ಥಿಗಳಿಗೆ ಹಕ್ಕಿಲ್ಲ: ಮಧ್ಯಂತರ ಆದೇಶ ತೆರವಿಗೆ ಹೈಕೋರ್ಟ್‌ ನಕಾರ

“ಯಾವುದೇ ಪರೀಕ್ಷೆ ಬರೆಯದೇ ನೀವು ವಕೀಲರಾಗಲು ಬಯಸುತ್ತಿದ್ದೀರಾ? ನೀವು ಹೈಕೋರ್ಟ್‌ ನ್ಯಾಯಮೂರ್ತಿಯಾಗಬಹುದು. ಏಕೆಂದರೆ ನ್ಯಾಯಮೂರ್ತಿಯಾಗಲು ಯಾವುದೇ ಪರೀಕ್ಷೆ ಬರೆಯಬೇಕಿಲ್ಲ” ಎಂದು ಲಘು ದಾಟಿಯಲ್ಲಿ ಹೇಳಿದ ಪೀಠ.

Bar & Bench

ಮೂರು ಮತ್ತು ಐದು ವರ್ಷದ ಕಾನೂನು ಪದವಿಯ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಅನುಮತಿಸಿ ನವೆಂಬರ್‌ 24ರಂದು ಹೊರಡಿಸಿದ್ದ ಆದೇಶದಲ್ಲಿ ಮಾರ್ಪಾಡು ಮಾಡಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪರೀಕ್ಷೆ ತಡೆ ನೀಡಲು ನಿರಾಕರಿಸಿದ ಪೀಠವು “ಪರೀಕ್ಷೆ ನಡೆಸಬೇಡಿ ಎಂದು ಹೇಳಲು ವಿದ್ಯಾರ್ಥಿಗಳಿಗೆ ಯಾವುದೇ ಹಕ್ಕಿಲ್ಲ” ಎಂದು ಮೌಖಿಕವಾಗಿ ಹೇಳಿತು. “ಯಾವುದೇ ಪರೀಕ್ಷೆ ಬರೆಯದೇ ನೀವು ವಕೀಲರಾಗಲು ಬಯಸುತ್ತಿದ್ದೀರಾ? ನೀವು ಹೈಕೋರ್ಟ್‌ ನ್ಯಾಯಮೂರ್ತಿಯಾಗಬಹುದು. ಏಕೆಂದರೆ ನ್ಯಾಯಮೂರ್ತಿಯಾಗಲು ಯಾವುದೇ ಪರೀಕ್ಷೆ ಬರೆಯಬೇಕಿಲ್ಲ” ಎಂದು ಲಘು ದಾಟಿಯಲ್ಲಿ ಪೀಠ ಹೇಳಿತು.

“ನವೆಂಬರ್‌ 24ರ ಮಧ್ಯಂತರ ಆದೇಶ ಹಿಂಪಡೆಯಲು ಯಾವುದೇ ಸಕಾರಣವಿಲ್ಲ. ಕಾನೂನು ಮತ್ತು ನಿಯಮಾವಳಿಗಳ ಪ್ರಕಾರ ವಿಶ್ವವಿದ್ಯಾಲಯವು ಪರೀಕ್ಷೆ ನಡೆಸಬೇಕು. ಪರೀಕ್ಷೆಯು ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನಾವು ಈಗಾಗಲೇ ಆದೇಶದಲ್ಲಿ ಸ್ಪಷ್ಟಪಡಿಸಿದ್ದೇವೆ” ಎಂದು ಪೀಠವು ಆದೇಶ ಮಾಡಿದೆ.

ನವೆಂಬರ್‌ 15ರಿಂದ ಪರೀಕ್ಷೆಗಳನ್ನು ನಡೆಸುವ ಸಂಬಂಧ ಕೆಎಸ್‌ಎಲ್‌ಯು ಹೊರಡಿಸಿದ್ದ ಸುತ್ತೋಲೆಗೆ ಏಕಸದಸ್ಯ ಪೀಠವು ನವೆಂಬರ್‌ 12ರಂದು ತಡೆ ನೀಡಿದ್ದನ್ನು ಪ್ರಶ್ನಿಸಿ ಕೆಎಸ್‌ಎಲ್‌ಯು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠವು ಪರೀಕ್ಷೆಗಳನ್ನು ನಡೆಸಲು ಅನುಮತಿಸಿತ್ತು.

ಏಕಸದಸ್ಯ ಪೀಠದ ಮಧ್ಯಂತರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದರಿಂದ ವಿಶ್ವವಿದ್ಯಾಲಯದ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಏಕೆಂದರೆ ಏಕಸದಸ್ಯ ಪೀಠದ ಮುಂದೆ ರಿಟ್‌ ಮನವಿ ಬಾಕಿ ಇದೆ ಎಂದು ವಿದ್ಯಾರ್ಥಿಗಳು ನ್ಯಾಯಾಲಯದಲ್ಲಿ ಮನವಿಗಳನ್ನು ಸಲ್ಲಿಸಿದ್ದರು.

ಏಕ ಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಮಾಡುವ ಸಂಬಂಧ ಮನವಿ ಮತ್ತು ಆಕ್ಷೇಪಣೆಯನ್ನು ಕೆಎಸ್‌ಎಲ್‌ಯು ಸಲ್ಲಿಸಬೇಕು. ಅರ್ಹತೆಯ ಆಧಾರದಲ್ಲಿ ಮನವಿಗಳನ್ನು ನಿರ್ಧರಿಸಲು ಏಕಸದಸ್ಯ ಪೀಠಕ್ಕೆ ನಿರ್ದೇಶಿಸಿಬೇಕು. ಹೀಗಾದಲ್ಲಿ ಪಕ್ಷಕಾರರನ್ನು ಅಂತಿಮವಾಗಿ ಆಲಿಸಬಹುದಾಗಿದೆ. ಈ ಮಧ್ಯೆ, ಮೇಲ್ಮನವಿದಾರ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ನಡೆಸಬಾರದು ಎಂದು ವಿದ್ಯಾರ್ಥಿಗಳ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗಣಪತಿ ಭಟ್‌ ಮತ್ತು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಪ್ರತಿನಿಧಿಸಿದ್ದ ವಕೀಲ ಶ್ರೀಧರ್‌ ಪ್ರಭು ತೀವ್ರವಾಗಿ ವಿರೋಧಿಸಿದರು.

ಬಿಎಸ್‌ಐ ಪರ ವಕೀಲ ಶ್ರೀಧರ್‌ ಪ್ರಭು ಅವರು “ಪರೀಕ್ಷೆ ನಡೆಸದೇ ನೀಡುವ ಪದವಿಯನ್ನು ಪರಿಗಣಿಸದಿರಲು ಬಿಸಿಐ ನಿರ್ಧರಿಸಿದೆ. ಈ ವಿಚಾರದಲ್ಲಿ ಬಿಸಿಐ ನಿಲುವು ಸ್ಪಷ್ಟವಾಗಿದೆ. ಪರೀಕ್ಷೆ ನಡೆಸುವುದು ವಿಶ್ವವಿದ್ಯಾಲಯಕ್ಕೆ ಬಿಟ್ಟ ವಿಚಾರ. ಪರೀಕ್ಷೆ ನಡೆಸಿ ನೀಡುವ ಪದವಿಯನ್ನು ಮಾತ್ರ ಬಿಸಿಐ ಪರಿಗಣಿಸಲಿದೆ” ಎಂದರು. ಅಂತಿಮವಾಗಿ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಹಿಂಪಡೆಯದಿರಲು ನಿರ್ಧರಿಸಿತು. ಪ್ರಕರಣವನ್ನು ವಿಲೇವಾರಿ ಮಾಡಿತು.