ಕೋವಿಡ್ ಸಾಂಕ್ರಾಮಿಕತೆಯ ನಡುವೆ ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭ ಮೇಳ ಆಯೋಜನೆಗೊಂಡಿರುವುದರಿಂದ ಅಪಾರ ಪ್ರಮಾಣದ ಜನತೆ ಅಲ್ಲಿ ನೆರೆಯಲ್ಲಿದ್ದು, ಸದ್ಯ ಲಭ್ಯವಿರುವ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಉತ್ತರಾಖಂಡ ಹೈಕೋರ್ಟ್ ನಿರ್ದೇಶಿಸಿದೆ.
ಫೆಬ್ರುವರಿ 27ರಿಂದ ಏಪ್ರಿಲ್ 27ರ ವರೆಗೆ ನಡೆಯಲಿರುವ ಕುಂಭ ಮೇಳಕ್ಕೆ ಸಂಬಂಧಿಸಿದಂತೆ ಹಿಂದೆ ನ್ಯಾಯಾಲಯವು ಮುಖ್ಯ ಕಾರ್ಯದರ್ಶಿ ಮತ್ತು ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಅಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿತ್ತು.
ರಾಜ್ಯ ಸರ್ಕಾರದ ಪ್ರತಿಕ್ರಿಯೆ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಮನೋಜ್ ಕುಮಾರ್ ತಿವಾರಿ ಅವರಿದ್ದ ವಿಭಾಗೀಯ ಪೀಠವು ಸರ್ಕಾರದ ಬಳಿ ಲಭ್ಯವಿರುವ ಆರೋಗ್ಯ ವ್ಯವಸ್ಥೆಯು ನಿರೀಕ್ಷಿತ ಜನಸಂದಣಿ ನಿಭಾಯಿಸಲು ಸಾಕಾಗುವುದಿಲ್ಲ ಎಂದು ಹೇಳಿತ್ತು.
“ಮುಖ್ಯ ಕಾರ್ಯದರ್ಶಿ ಮತ್ತು ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಲ್ಲಿಸಿರುವ ದತ್ತಾಂಶ ಪರಿಶೀಲಿಸಿದರೆ ವೈದ್ಯಕೀಯ ಆರೋಗ್ಯ ವ್ಯವಸ್ಥೆಯ ದಯನೀಯ ಸ್ಥಿತಿ ಅರ್ಥವಾಗುತ್ತದೆ; ತಿಂಗಳೊಳಗೆ ಹರಿದ್ವಾರದಲ್ಲಿ ಎದುರಾಗುವ ಜನಸಂಖ್ಯಾ ಸ್ಫೋಟ ನಿಯಂತ್ರಿಸಲು ರಾಜ್ಯ ಸರ್ಕಾರ ಸಿದ್ಧವಾಗಿಲ್ಲ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿದೆ.
ಹರಿದ್ವಾರದಲ್ಲಿ ಈಗಾಗಲೇ ಇಪ್ಪತ್ತು ಲಕ್ಷ ಜನಸಂಖ್ಯೆ ಇದ್ದು, ಮೇಳದ ಸಂದರ್ಭದಲ್ಲಿ ಐವತ್ತು ಲಕ್ಷ ಜನರು ಭೇಟಿ ನೀಡಲಿರುವುದರಿಂದ ಜನಸಂಖ್ಯೆಯು ಗಗನಕ್ಕೇರಲಿದೆ ಎಂದು ನ್ಯಾಯಾಲಯ ಹೇಳಿದೆ. ವೈದ್ಯಕೀಯ ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಯನ್ನು ಉಲ್ಲೇಖಿಸಿರುವ ನ್ಯಾಯಾಲಯವು 5,493 ಹಾಸಿಗೆಗಳು, ಕೇವಲ 500 ಹಾಸಿಗೆಗಳಿಗೆ 500 ವೆಂಟಿಲೇಟರ್ ಏತಕ್ಕೂ ಸಾಕಾಗುವುದಿಲ್ಲ ಎಂದಿದೆ.
ಕುಂಭಕ್ಕೆ ವ್ಯಾಪಕ ಪ್ರಮಾಣದಲ್ಲಿ ಜನ ಪ್ರವಾಹ ಹರಿದು ಬರುವುದರಿಂದ ಈಗ ನಗರ ಮತ್ತು ಜಿಲ್ಲೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮೇಲೆ ಒತ್ತಡ ಉಂಟಾಗಲಿದೆ ಎಂದಿರುವ ನ್ಯಾಯಾಲಯವು ಮೇಳಕ್ಕಾಗಿ ಹೆಚ್ಚಿನ ಜನರನ್ನು ಒಟ್ಟುಗೂಡಿಸುವುದನ್ನು ತಡೆಯುವ ಕ್ರಮವಾಗಿ ಈ ವರ್ಷ ಬಿಡಾರ(ಟೆಂಟು) ನಿರ್ಮಿಸದಿರುವ ರಾಜ್ಯದ ಪ್ರಸ್ತಾವನೆಯ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ಹೈಕೋರ್ಟ್ ಬೀರಿದೆ.
“…ಹತ್ತರಿಂದ ಐವತ್ತು ಲಕ್ಷ ಜನರ ಪ್ರವೇಶವನ್ನು ರಾಜ್ಯ ಸರ್ಕಾರ ನಿರೀಕ್ಷಿಸಿದರೂ ಅಷ್ಟು ಜನಕ್ಕೆ ಉಳಿದುಕೊಳ್ಳಲು ಬಿಡಾರ ನಿರ್ಮಿಸುವ ಯಾವುದೇ ಯೋಜನೆಯನ್ನು ಸರ್ಕಾರ ಹೊಂದದಿರುವುದು ಅತ್ಯಂತ ಆಶ್ಚರ್ಯಕರ ಸಂಗತಿ. ಭಾರಿ ಚಳಿ ಇರುವ ಈ ಕಾಲದಲ್ಲಿ ಹತ್ತು/ಐವತ್ತು ಲಕ್ಷ ಜನರನ್ನು ಎಲ್ಲಿ ಇರಿಸಬಹುದು ಎಂಬುದೇ ಅನೂಹ್ಯವಾಗಿದೆ,” ಎಂದು ನ್ಯಾಯಾಲಯ ಹೇಳಿದೆ.
ಮೇಳ ನಡೆಸುವ ಸ್ಥಳದಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಕೇಂದ್ರ ಸರ್ಕಾರದ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸಬೇಕು. ಅಗತ್ಯವಾದ ಮಾಹಿತಿ ಸಲ್ಲಿಸುವುದರಿಂದ ಕುಂಭ ಮೇಳಕ್ಕೆ ಪೂರಕವಾದ ಮಾರ್ಗಸೂಚಿಗಳನ್ನು ಹೊರಡಿಸಬಹುದು.
ಕುಂಭ ಮೇಳದ ಸಂದರ್ಭದಲ್ಲಿ ರಾಜ್ಯಕ್ಕೆ ಬರುವ ಜನರಿಗೆ ಉಳಿದುಕೊಳ್ಳಲು ಅಗತ್ಯವಾದಷ್ಟು ಬಿಡಾರಗಳನ್ನು ನಿರ್ಮಿಸುವುದನ್ನು ಪರಿಗಣಿಸಬೇಕು.
ಆರೋಗ್ಯ ದೃಷ್ಟಿಯಿಂದ ಭೌತಿಕ ಸೌಲಭ್ಯ ಮತ್ತು ಮಾನವ ಸಂಪನ್ಮೂಲ ಒಳಗೊಂಡ ವೈದ್ಯಕೀಯ ಆರೋಗ್ಯ ಸೌಲಭ್ಯ ಕಲ್ಪಿಸಲು ಗಂಭೀರವಾಗಿ ಪರಿಗಣಿಸಬೇಕು.
ಹರಿದ್ವಾರಕ್ಕೆ ಕುಂಭ ಮೇಳ ಮತ್ತಿತರ ವಿಚಾರಕ್ಕಾಗಿ ಭೇಟಿ ನೀಡುವ ಜನರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಹಾಗೂ ಆ ಮೂಲಕ ಜನಸಂದಣಿ ಕುಗ್ಗಿಸುವುದಕ್ಕಾಗಿ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಜನರಿಗೆ ಅಲ್ಲಿ ಕೈಗೊಂಡಿರುವ ಸಿದ್ಧತೆಯ ಬಗ್ಗೆ ಮಾಹಿತಿ ನೀಡಬೇಕು.
ಕೋವಿಡ್ ಹರಡುವಿಕೆ ಇಡೀ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಅಷ್ಟು ದೊಡ್ಡಪ್ರಮಾಣದ ಜನರನ್ನು ಒಟ್ಟುಗೂಡಿಸಲು ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ರಾಜ್ಯದ ಪ್ರಯತ್ನಗಳನ್ನು ಸಮನ್ವಯಗೊಳಿಸಬೇಕು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಫೆಬ್ರವರಿ 15ರ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಎಸ್ ಎನ್ ಬಾಬುಲ್ಕರ್ ಅವರಿಗೆ ಪೀಠ ಸೂಚಿಸಿದೆ.
ಹರಿದ್ವಾರದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ವ್ಯವಸ್ಥೆಯ ಲಭ್ಯತೆ ಮತ್ತು ಕಾರ್ಯಾಚರಣೆ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ನ್ಯಾಯಾಲಯವ ಆದೇಶಿಸಿದೆ. ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ಮೇಳದ ಅಧಿಕಾರಿ, ಹರಿದ್ವಾರದ ಜಿಲ್ಲಾ ನ್ಯಾಯಾಧೀಶರಿಗೆ ಫೆಬ್ರುವರಿ 22ರಂದು ನಡೆಯುವ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರವಾಗಿ ವಕೀಲರಾದ ಶಿವ್ ಭಟ್ ಮತ್ತು ಪಿಯೂಷ್ ಗಾರ್ಗ್, ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಕೇಶ್ ಥಪ್ಲಿಯಾಲ್ ವಿಚಾರಣೆ ವೇಳೆ ಭಾಗವಹಿಸಿದ್ದರು.