ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ 8 ಜನರ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾನನ್ನು ಬಂಧಿಸಲಾಗಿದೆ. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನೂ ಒಳಗೊಂಡಂತೆ ಎಂಟು ಜನರ ಮೇಲೆ ಮಿಶ್ರಾಗೆ ಸೇರಿದ ನಾಲ್ಕು ಚಕ್ರದ ವಾಹನ ಹರಿದು ಹೋಗಿತ್ತು.
ಘಟನೆಗೆ ಸಂಬಂಧಿಸಿದಂತೆ ಕೊಲೆ ಮತ್ತು ಗಲಭೆ ಅಪರಾಧ ಎಸಗಿದ ಆರೋಪದ ಮೇಲೆ ಮಿಶ್ರಾ ಮತ್ತಿತತರ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆಶಿಶ್ ಮಿಶ್ರಾ ಇದ್ದ ಒಂದು ಕಾರು ಕೆಲವು ಪ್ರತಿಭಟನಾಕಾರರ ಮೇಲೆ ಹರಿದು ಹೋಯಿತು ಎಂದು ರೈತ ಮುಖಂಡರು ಹೇಳಿದ್ದರು.
ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಉತ್ತರಪ್ರದೇಶದ ವಕೀಲರಾದ ಶಿವಕುಮಾರ ತ್ರಿಪಾಠಿ ಮತ್ತು ಸಿಎಸ್ ಪಾಂಡ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರಿಗೆ ಪತ್ರ ಬರೆದಿದ್ದರು. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಮತ್ತು ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕೋರಿದ್ದರು. ಬಳಿಕ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿತ್ತು.
ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರು ಘಟನೆಯನ್ನು ನಿಭಾಯಿಸುತ್ತಿರುವ ವಿಧಾನದ ಬಗ್ಗೆ ಶುಕ್ರವಾರ ಅದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ತನಿಖೆಯ ಪ್ರಗತಿಯನ್ನು ಗಮನಿಸಿದರೆ ಅಧಿಕಾರಿಗಳು ಗಂಭೀರವಾಗಿರುವಂತೆ ತೋರುವುದಿಲ್ಲ ಎಂದು ಸಿಜೆಐ ಹೇಳಿದ್ದರು. ಆದರೂ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.