Ashish Mishra, Lakhimpur Kheri Violence

 
ಸುದ್ದಿಗಳು

[ಲಖಿಂಪುರ್ ಖೇರಿ ಪ್ರಕರಣ] ಆಶಿಶ್ ಮಿಶ್ರಾ ಪ್ರಧಾನ ಆರೋಪಿ: 5,000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು

ಆರೋಪಪಟ್ಟಿಯಲ್ಲಿ ಆಶಿಶ್ ಮಿಶ್ರಾ ಸಂಬಂಧಿ ವೀರೇಂದ್ರ ಶುಕ್ಲಾ ಅವರನ್ನು ಕೂಡ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿದೆ.

Bar & Bench

ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಜನರ ಮೇಲೆ ವಾಹನ ಹರಿಸಿ ಅವರ ಹತ್ಯೆಗೆ ಕಾರಣವಾದ ಲಖಿಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 5,000 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.

ವರದಿಗಳ ಪ್ರಕಾರ ಆರೋಪಪಟ್ಟಿಯಲ್ಲಿ ಆಶಿಶ್ ಮಿಶ್ರಾ ಸಂಬಂಧಿ ವೀರೇಂದ್ರ ಶುಕ್ಲಾ ಅವರನ್ನು ಕೂಡ ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿದೆ. ಸಾಕ್ಷ್ಯ ನಾಶದ ಆರೋಪದಡಿ ಐಪಿಸಿ ಸೆಕ್ಷನ್‌ 201ರ ಅಡಿ ಶುಕ್ಲಾ ವಿರುದ್ಧ ಆರೋಪ ನಿಗದಿಪಡಿಸಲಾಗಿದೆ.

"ನ್ಯಾಯಾಲಯ ಆರೋಪಪಟ್ಟಿಯನ್ನು ಒಪ್ಪಿದರೆ, ಅದು ಸೂಚಿಸುವ ದಿನದಿಂದ ಪ್ರಕರಣದ ವಿಚಾರಣೆ ಪ್ರಾರಂಭವಾಗುತ್ತದೆ" ಎಂದು ಪ್ರಾಸಿಕ್ಯೂಷನ್ ವಕೀಲ ಎಸ್‌ಪಿ ಯಾದವ್ ಹೇಳಿದ್ದಾರೆ.

ಆಶಿಶ್ ಮಿಶ್ರಾ ಮತ್ತಿತರ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್‌ 302 (ಕೊಲೆ), 120-ಬಿ (ಅಪರಾಧದ ಪಿತೂರಿ), 279 (ಅತಿವೇಗದ ವಾಹನ ಚಾಲನೆ), 338 (ನಿರ್ಲಕ್ಷ್ಯದಿಂದ ಗಂಭೀರ ಗಾಯಗೊಳಿಸುವಿಕೆ), 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು), 147 (ಮಾರಕಾಸ್ತ್ರಗಳಿಂದ ಹಲ್ಲೆ), 149 (ಕಾನೂನುಬಾಹಿರ ಸಭೆ) ಸೇರಿಸಿದ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಲಾಗಿತ್ತು. ಇಡೀ ಘಟನೆಯು ಪ್ರತಿಭಟನಾಕಾರರನ್ನು ಕೊಲ್ಲುವ ಉದ್ದೇಶದಿಂದ ನಡೆಸಿದ "ಪೂರ್ವ ಸಂಚು" ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಡಿಸೆಂಬರ್ 15ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.