ಕೃಷಿ ವಿರೋಧಿ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಮಂದಿಯ ಸಾವಿಗೆ ಕಾರಣವಾದ ಲಖೀಂಪುರ್ ಖೇರಿ ಹಿಂಸಾಚಾರ ಘಟನೆಯ ಆರೋಪಿಗಳ ವಿರುದ್ಧ ಹೊಸದಾಗಿ ಆರೋಪ ನಿಗದಿಗೊಳಿಸುವಂತೆ ಎಸ್‌ಐಟಿಗೆ ಉತ್ತರಪ್ರದೇಶದ ನ್ಯಾಯಾಲಯವೊಂದು ಸೂಚಿಸಿದೆ. ಇದು ಆರೋಪಿಗಳ ನಿರ್ಲಕ್ಷ್ಯದಿಂದ ನಡೆದ ಕೃತ್ಯವಲ್ಲ ಬದಲಿಗೆ, ಕೊಲ್ಲಲು ಪೂರ್ವಯೋಜನೆ ರೂಪಿಸಿ ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
"ಇದುವರೆಗೆ ಹೇಳಲಾದ ಕೃತ್ಯ ಆರೋಪಿಗಳ ನಿರ್ಲಕ್ಷ್ಯದಿಂದ ಆಗಿಲ್ಲ, ಬದಲಿಗೆ, ಇದು ಉದ್ದೇಶಪೂರ್ವಕವಾಗಿ ಕೊಲ್ಲಲು ಪೂರ್ವನಿಯೋಜಿತ ಯೋಜನೆಯ ಪ್ರಕಾರ ನಡೆದಿದೆ…” ಎಂದು ಎಸ್‌ಐಟಿ ನ್ಯಾಯಾಲಯದ ಮುಂದೆ ಹೇಳಿದೆ.
ಪ್ರಕರಣದ 12 ಆರೋಪಿಗಳ ವಿರುದ್ಧ ಹೊಸದಾಗಿ ಆರೋಪಗಳನ್ನು ಹೊರಿಸಲು ಅನುಮತಿ ನೀಡುವಂತೆ ಎಸ್ಐಟಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಮುಖ್ಯ ಆರೋಪಿ ಆಶಿಶ್ ಮಿಶ್ರಾ (ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ) ಮತ್ತಿತರರ ವಿರುದ್ಧ ಹೊಸ ಆರೋಪ ಹೊರಿಸಲು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಒಪ್ಪಿದ್ದಾರೆ ಎಂದು ʼಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಮಾಡಿದೆ. ಆದರೆ ಒಂದು ಸಾಮಾನ್ಯ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂಬ ಆರೋಪ ಅನ್ವಯಿಸಲು ಅನುಮತಿಸುವಂತೆ ಎಸ್‌ಐಟಿ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೋರಿ ಸಿಜೆಐ ಎನ್ ವಿ ರಮಣ ಅವರಿಗೆ ಉತ್ತರ ಪ್ರದೇಶದ ಇಬ್ಬರು ವಕೀಲರು ಪತ್ರ ಬರೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವಂತೆ ಮತ್ತು ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೂಡ, ವಕೀಲರಾದ ಶಿವಕುಮಾರ ತ್ರಿಪಾಠಿ ಮತ್ತು ಸಿ ಎಸ್ ಪಾಂಡ ಮನವಿ ಮಾಡಿದ್ದರು.