ramesh sogemane
ಸುದ್ದಿಗಳು

[ಲಖಿಂಪುರ್ ಖೇರಿ] ಆಶಿಶ್‌ಗೆ ನೀಡಿರುವ ಜಾಮೀನು ಪ್ರಶ್ನಿಸಲು ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿತ್ತು: ಸುಪ್ರೀಂಗೆ ಮಾಹಿತಿ

ನ್ಯಾಯಾಧೀಶರು ಕಳುಹಿಸಿರುವ ವರದಿಯ ಕುರಿತು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.

Bar & Bench

ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಪ್ರಕರಣದ ಪ್ರಧಾನ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನೀಡಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ತನಿಖೆಯ ಮೇಲ್ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದರು ಎಂದು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಲಾಯಿತು.

ನ್ಯಾಯಾಧೀಶರು ಕಳುಹಿಸಿರುವ ವರದಿಯ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿತು.

ಇಂದು ಪ್ರಕರಣದ ವಿಚಾರಣೆ ನಡೆದಾಗ ಸಿಜೆಐ ರಮಣ ಅವರು, "ಅಲಾಹಾಬಾದ್ ಹೈಕೋರ್ಟ್ ನೀಡಿದ ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ತಾವು ಉತ್ತರಪ್ರದೇಶ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾಗಿ ಮೇಲ್ವಿಚಾರಣಾ ನ್ಯಾಯಾಧೀಶರು ಸಲ್ಲಿಸಿದ ವರದಿ ತಿಳಿಸುತ್ತದೆ" ಎಂದರು.

ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥರು ಕೂಡ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದು ಸರ್ಕಾರ ಮೇಲ್ಮನವಿ ಸಲ್ಲಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಗಮನಸೆಳೆದರು.

ಪತ್ರಗಳನ್ನು ನೋಡಿಲ್ಲದೇ ಇರುವುದರಿಂದ ಸಮಯಾವಕಾಶದ ಅಗತ್ಯವಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮಹೇಶ್ ಜೇಠ್ಮಲಾನಿ ನ್ಯಾಯಾಲಯವನ್ನು ಕೋರಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, ಉತ್ತರಪ್ರದೇಶ ಸರ್ಕಾರ ಹೈಕೋರ್ಟ್‌ನಲ್ಲಿ ಜಾಮೀನನ್ನು ವಿರೋಧಿಸಿರುವುದಾಗಿ ತಿಳಿಸಿದೆ. ಜಾಮೀನು ರದ್ದುಗೊಳಿಸಲು ಅಥವಾ ಜಾಮೀನು ಅರ್ಜಿಯನ್ನು ಬದಿಗೆ ಸರಿಸುವ ಕಾಲ ಒದಗಿ ಬಂದಿದೆ. ಹೈಕೋರ್ಟ್‌ ತೀರ್ಪು ಯುಕ್ತವಾಗಿಲ್ಲ ಎಂದರು.

ರಾಜ್ಯ ಸರ್ಕಾರದ ಗೃಹ ಹೆಚ್ಚುವರಿ ಕಾರ್ಯದರ್ಶಿ ಪತ್ರಗಳನ್ನು ಅಥವಾ ವರದಿಯನ್ನು ಸ್ವೀಕರಿಸಿಲ್ಲ ಎಂದು ಜೇಠ್ಮಲಾನಿ ಅವರು ಪೀಠಕ್ಕೆ ತಿಳಿಸಿದ ನಂತರ, ನ್ಯಾಯಾಲಯವು,"ನಾವು ಈ ವರದಿಯನ್ನು ಸರ್ಕಾರ ಮತ್ತು ಅರ್ಜಿದಾರರಿಗೆ ನೀಡುತ್ತಿದ್ದೇವೆ. ಪ್ರಕರಣವನ್ನು ನಾಳೆ ಆಲಿಸಲಾಗುವುದು" ಎಂದಿತು.