Ashish Mishra, Lakhimpur Kheri Violence 
ಸುದ್ದಿಗಳು

ಸಾಕ್ಷಿಗಳಿಗೆ ಬೆದರಿಕೆ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ನಾಲ್ವರು ರೈತರು ಸಾವನ್ನಪ್ಪಿದ ಪ್ರಕರಣದ ವಿಚಾರಣೆ ಇದಾಗಿದೆ.

Bar & Bench

ಕೇಂದ್ರ ಸರ್ಕಾರ ರಾಜ್ಯ ಖಾತೆ ಮಾಜಿ ಸಚಿವ ಅಜಯ್‌ ಮಿಶ್ರಾ ಟೇನಿ ಅವರ ಪುತ್ರ ಆಶಿಶ್‌ ಮಿಶ್ರಾ ಆರೋಪಿಯಾಗಿರುವ ಲಖಿಂಪುರ್‌ ಖೇರಿ ಹತ್ಯಾಕಾಂಡ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಮಿಶ್ರಾಗೆ ಸೂಚಿಸಿದೆ [ಆಶಿಶ್‌ ಮಿಶ್ರಾ ಅಲಿಯಾಸ್‌ ಮೋನು ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಮಿಶ್ರಾ ಈ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಸಂಬಂಧ ಅಫಿಡವಿಟ್‌ ಸಲ್ಲಿಸುವಂತೆ ಅವರ ಪರ ವಕೀಲರಿಗೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸೂಚಿಸಿತು.

"ಈಗ ಕೆಲವು ಛಾಯಾಚಿತ್ರ ದೊರೆತಿವೆ. ಸಾಕ್ಷಿಗಳಿಗೆ ಬೆದರಿಕೆಯ ಆರೋಪಗಳಿವೆ," ಎಂದು ಕೋರ್ಟ್ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಮಿಶ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ, ಗುಪ್ತ ಉದ್ದೇಶದ ಹಿನ್ನೆಲೆಯಲ್ಲಿ ಫೋಟೋ ದಾಖಲೆ ನೀಡಲಾಗಿದೆ ಎಂದರು.

ಚಿತ್ರದಲ್ಲಿರುವುದು ಮಿಶ್ರಾ ಅಲ್ಲ. ಇದು ಈ ನ್ಯಾಯಾಲಯಕ್ಕೆ ಸಂಬಂಧಿಸಿದ್ದಲ್ಲ. ಇದು ಹೊರಗಿನ ವಿಚಾರಕ್ಕೆ ಸಂಬಂಧಿಸಿದ್ದು. ಪ್ರತಿ ಬಾರಿ ಪ್ರಕರಣ ಆಲಿಸಿದಾಗಲೂ ಇಂಥದ್ದು ಏನಾದರೊಂದು ಬರುತ್ತದೆ ಎಂದು ದವೆ ಹೇಳಿದರು. ಆಗ ನ್ಯಾಯಾಲಯ, ಇದನ್ನು ಮಿಶ್ರಾ ಅಫಿಡವಿಟ್‌ನಲ್ಲಿ ಹೇಳಬೇಕು. ಅಫಿಡವಿಟ್‌ ಸಲ್ಲಿಸಲಾಗುವುದು ಎಂದು ದವೆ ಹೇಳುತ್ತಿದ್ದಾರೆ. ಹೀಗಾಗಿ  4 ವಾರಗಳ ನಂತರ ಪ್ರಕರಣ ಆಲಿಸಲಾಗುವುದು ಎಂಬುದಾಗಿ ತಿಳಿಸಿತು.

ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ 2021ರಲ್ಲಿ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ಎಂಟು ಜನರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣವಾಗಿದ್ದ ಆರೋಪ ಮಿಶ್ರಾ ಮೇಲಿದೆ. ಸದ್ಯ ಅವರಿಗೆ ಜಾಮೀನು ದೊರೆತಿದೆ. ಘಟನೆಯಲ್ಲಿ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ ಆರೋಪವನ್ನು ಮಿಶ್ರಾ ಎದುರಿಸುತ್ತಿದ್ದಾರೆ.