Ashish Mishra, Lakhimpur Kheri 
ಸುದ್ದಿಗಳು

ಲಖಿಂಪುರ್ ಖೇರಿ ಪ್ರಕರಣದ ಆರೋಪಿ ಮಿಶ್ರಾ ಜಾಮೀನು ಪ್ರಶ್ನಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಲಾಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯಕ್ಕೆ ಕೇಳಿತ್ತು. ಆದರೆ ಅದು ಸೂಕ್ತವೆನಿಸಲಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

Bar & Bench

ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾಗಿದ್ದ ಲಖಿಂಪುರ್‌ ಖೇರಿ ಪ್ರಕರಣದ ಮುಖ್ಯ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿದ್ದ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೃತ ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾಯ್ದಿರಿಸಿದೆ.

ತೀರ್ಪು ಕಾಯ್ದಿರಿಸುವ ಮುನ್ನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿತು.

ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರು ರಾಜ್ಯ ಸರ್ಕಾರ ಎಲ್ಲಾ 97 ಸಾಕ್ಷಿಗಳಿಗೆ ವ್ಯಾಪಕ ಭದ್ರತೆ ಒದಗಿಸಿದೆ. ಆರೋಪಿ ದೇಶ ತೊರೆಯುವ ಅಪಾಯವಿಲ್ಲ ಎಂದರು.

ಆಗ ಸಿಜೆಐ ರಮಣ ಅವರು ಜೇಠ್ಮಲಾನಿ ಅವರನ್ನುದ್ದೇಶಿ ರಾಜ್ಯ ಸರ್ಕಾರ ಜಾಮೀನನ್ನು ವಿರೋಧಿಸುತ್ತಿದೆಯೇ ಅಥವಾ ಬೆಂಬಲಿಸುತ್ತಿದೆಯೇ ಎಂಬ ಕುರಿತು ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿದರು.

ಈ ಹಂತದಲ್ಲಿ ಜೇಠ್ಮಲಾನಿ ಅವರು “ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಲಾಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯವನ್ನು ಕೇಳಿತ್ತು. ಆದರೆ ಅದು ಸರ್ಕಾರಕ್ಕೆ ಸೂಕ್ತವೆನಿಸಲಿಲ್ಲ ಎಂದು ತಿಳಿಸಿದರು.

ಸಂತ್ರಸ್ತರ ಕುಟುಂಬ ಸದಸ್ಯರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ದುಶ್ಯಂತ್‌ ದವೆ ಹೈಕೋರ್ಟ್‌ ತೀರ್ಪು ಸಮಂಜಸವಾಗಿಲ್ಲ ಎಂದರು. ಆರೋಪಿ ಮಿಶ್ರಾ ಪರ ರಂಜಿತ್‌ ಕುಮಾರ್‌ ವಾದ ಮಂಡಿಸಿದರು. ವಾದಗಳನ್ನು ಆಲಿಸಿದ ಪೀಠ ತೀರ್ಪನ್ನು ಕಾಯ್ದಿರಿಸಿತು.