Lamborghini stunt 
ಸುದ್ದಿಗಳು

ಅತಿವೇಗ, ಅಜಾಗರೂಕತೆಯಿಂದ ಲ್ಯಾಂಬೊರ್ಗಿನಿ ಕಾರು ಚಾಲನೆ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ, ಯಾಸೀನ್‌ಗೆ ಜಾಮೀನು ಮಂಜೂರು

ಅರ್ಜಿದಾರ/ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌, ತಲಾ ಮೂರು ಸಾವಿರ ರೂಪಾಯಿ ನಗದು ಭದ್ರತೆ ಸಲ್ಲಿಸಬೇಕು. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

Bar & Bench

ಲ್ಯಾಂಬೊರ್ಗಿನಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದ ಮೇಲೆ ದಾಖಲಾಗಿರುವ ಪ್ರಕಣದಲ್ಲಿ ಮಾಜಿ ಡಾನ್‌ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹಾಗೂ ಯಾಸೀನ್‌ ಎಂಬವರಿಗೆ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಟ್ರಾಫಿಕ್‌ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ ರಿಕ್ಕಿ ರೈ ಮತ್ತು ಯಾಸೀನ್‌ ಅವರಿಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಸಂಚಾರ ನ್ಯಾಯಾಲಯ-5) ಎಚ್‌ ಕೆ ಅಖಿಲಾ ಅವರು ಜಾಮೀನು ಮಂಜೂರು ಮಾಡಿದ್ದಾರೆ.

ಅರ್ಜಿದಾರ/ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌, ತಲಾ ಮೂರು ಸಾವಿರ ರೂಪಾಯಿ ನಗದು ಭದ್ರತೆ ಸಲ್ಲಿಸಬೇಕು. ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಹಿನ್ನೆಲೆ: 21.03.2026ರ ಬೆಳಗಿನ ಜಾವ 2-3 ಗಂಟೆಯ ವೇಳೆ ಮಹಾತ್ಮ ಗಾಂಧಿ ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದ ಸಮೀಪ ಅತಿವೇಗ ಮತ್ತು ಅಜಾಗರೂಕತೆಯಿಂದ ಲ್ಯಾಂಬೊರ್ಗಿನಿ ಕಾರು ಚಾಲನೆ ಮಾಡಿ ಗಿರಿಗಿಟ್ಲೆಯ ರೀತಿಯಲ್ಲಿ ಕಾರನ್ನು ಸುತ್ತಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದನ್ನು ಆಧರಿಸಿ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆಯ ಪೊಲೀಸರು ಭಾರತೀಯ ಮೋಟಾರು ವಾಹನಗಳ ಕಾಯಿದೆ ಸೆಕ್ಷನ್‌ 184,189 ಮತ್ತು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 281ರ ಅಡಿ ಪ್ರಕರಣ ದಾಖಲಿಸಿದ್ದಾರೆ.