ಸುದ್ದಿಗಳು

ಭೂವ್ಯಾಜ್ಯಕ್ಕೆ ಕ್ರಿಮಿನಲ್‌ ಪ್ರಕರಣದ ಸ್ವರೂಪ: ದೂರುದಾರರಿಗೆ ₹10 ಲಕ್ಷ ದಂಡ ವಿಧಿಸಿದ ಸುಪ್ರೀಂ

ದೂರುದಾರರು ಸತ್ಯ ತಿರುಚಿದ್ದು ಪ್ರಭಾವ ಬೀರಿ ಮೇಲ್ಮನವಿದಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೀಠ ಹೇಳಿದೆ.

Bar & Bench

ಸಿವಿಲ್ ಸ್ವರೂಪದ ಭೂವ್ಯಾಜ್ಯವನ್ನು ಪ್ರತಿವಾದಿಯ ವಿರುದ್ಧ ಒತ್ತಡ ಹೇರುವ ಮಾತ್ರಕ್ಕೆ ಕ್ರಿಮಿನಲ್‌ ಪ್ರಕರಣವಾಗಿ ಬದಲಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ [ಮಾಲಾ ಚೌಧರಿ vs ತೆಲಂಗಾಣ ಸರ್ಕಾರ ನಡುವಣ ಪ್ರಕರಣ]

ತೆಲಂಗಾಣದಲ್ಲಿ ದಾಖಲಾಗಿದ್ದ  ಎಫ್ಐಆರ್ ರದ್ದುಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೌಖಿಕವಾಗಿ ಮಾಡಿಕೊಂಡ ಒಪ್ಪಂದದಂತೆ ನೋಂದಾಯಿತ ಕ್ರಯ ಪತ್ರವನ್ನು ಜಾರಿಗೊಳಿಸದ ಹಿನ್ನೆಲೆಯಲ್ಲಿ ತಲೆದೋರಿದ್ದ ವ್ಯಾಜ್ಯಕ್ಕೆ ಕ್ರಿಮಿನಲ್ ಪ್ರಕರಣದ ಮುಸುಕು ಹೊದಿಸಲಾಗಿದೆ ಎಂಬುದನ್ನು ಪ್ರಕರಣದ ಎಫ್‌ಐಆರ್‌ ಬಹಿರಂಗಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ದೂರುದಾರರು ಸತ್ಯ ತಿರುಚಿದ್ದು ಪ್ರಭಾವ ಬೀರಿ ಮೇಲ್ಮನವಿದಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೀಠ ಹೇಳಿದೆ.

"ಇದು ದೂರುದಾರರು ಪೊಲೀಸ್ ತನಿಖಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡು ಆರೋಪಿಗಳನ್ನು (ಪ್ರಕರಣದ ಮೇಲ್ಮನವಿದಾರರು) ಸಂಪೂರ್ಣವಾಗಿ ಸುಳ್ಳು ಮತ್ತು ಕ್ಷುಲ್ಲಕ ಮೊಕದ್ದಮೆಯಲ್ಲಿ ಸಿಲುಕಿಸಲು ಬಳಸಿಕೊಂಡ ಅತ್ಯುತ್ತಮ ನಿದರ್ಶನವಾಗಿದೆ " ಎಂದು ತರಾಟೆಗೆ ತೆಗೆದುಕೊಂಡ ಪೀಠ ದೂರುದಾರರಿಗೆ ₹10 ಲಕ್ಷ ದಂಡ ವಿಧಿಸಿತು.

ತೆಲಂಗಾಣದ ಗಚ್ಚಿಬೌಲಿಯಲ್ಲಿ ನಿವೇಶನವೊಂದನ್ನು ಮಾರಾಟ ಮಾಡುವ ಸಂಬಂಧ ಮೌಖಿಕವಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ದೆಹಲಿ ಮೂಲದ 70 ವರ್ಷದ ಮಹಿಳೆ ಮತ್ತು ಅವರ ಮಗಳ ವಿರುದ್ಧ ವಂಚನೆ ಎಸಗಿದ ಆರೋಪದಡಿ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದರು.

ನಂಬಿಕೆ ದ್ರೋಹ ಮತ್ತು ವಂಚನೆಗೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 406 ಮತ್ತು 420 ರ ಅಡಿ ಅವರ ವಿರುದ್ಧ ಆರೋಪ ಮಾಡಲಾಗಿತ್ತು. ತೆಲಂಗಾಣ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.

ಈ ಪ್ರಕರಣ ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಖರೀದಿದಾರನು ಪೂರ್ಣ ಮೊತ್ತವನ್ನು ಸಕಾಲದಲ್ಲಿ ಪಾವತಿಸದ ಕಾರಣ ಭೂ ವ್ಯವಹಾರ ಒಪ್ಪಂದ ಮುರಿದು ಬಿದ್ದಿತ್ತು. ಇಷ್ಟಾಗಿಯೂ 70 ವರ್ಷದ ಮೇಲ್ಮನವಿದಾರರನ್ನು ಕ್ರಿಮಿನಲ್‌ ಪ್ರಕರಣದಲ್ಲಿ ಸಿಲುಕಿಸಿ ಎಂಟು ದಿನಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿಡಲಾಗಿತ್ತು ಎಂದು ಅದು ವಿವರಿಸಿದೆ.

 ರಿಯಲ್ ಎಸ್ಟೇಟ್ ಸಂಸ್ಥೆಯ ಪ್ರತಿನಿಧಿಯಾಗಿರುವ ದೂರುದಾರರು, ಒಪ್ಪಂದಕ್ಕೆ ಮರುಜೀವ ನೀಡುವಂತೆ ಕೋರಿ ಸಿವಿಲ್ ಮೊಕದ್ದಮೆಯನ್ನೂ ಹೂಡಿದ್ದರು. ಆದರೂ, ಎಫ್‌ಐಆರ್ ಇನ್ನೂ ಮುಂದೆ ಹೋಗಿ ಮೇಲ್ಮನವಿದಾರರು ಬೆದರಿಕೆ ಹಾಕಿದ್ದಾರೆ ಎಂದಿತು. ವಿವಿಧ ಆಸ್ತಿಗಳಿಗೆ ಸಂಬಂಧಿಸಿದಂತೆ ಬೆದರಿಕೆ ಒಡ್ಡಲಾಗಿದ್ದು ನೆರೆಹೊರೆಯವರೂ ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದಿತ್ತು.

ಈ ವಿರೋಧಾಭಾಸಗಳನ್ನು ಗಮನಿಸಿದ ನ್ಯಾಯಾಲಯ "ಎಫ್‌ಐಆರ್‌ನಲ್ಲಿ ವಿವರಿಸಿರುವ ಮೌಖಿಕ ಒಪ್ಪಂದ ಹಾಗೂ ದೂರಿನಲ್ಲಿ ಸೂಚಿಸಿರುವ ಒಪ್ಪಂದಕ್ಕೆ ಸಂಬಂಧಿಸಿದಂತೆ ದೂರುದಾರರ ಆರೋಪಗಳಲ್ಲಿ ತೀವ್ರ ವ್ಯತ್ಯಾಸವಿದೆ" ಎಂದು ಹೇಳಿತು.

ಇಂತಹ ಅಸಂಗತತೆಗಳು ಕ್ರಿಮಿನಲ್ ಪ್ರಕರಣದ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತವೆ ಎಂದ ಪೀಠ ಬ್ಯಾಂಕ್ ವಹಿವಾಟಿನ ಮೂಲಕ ಪಡೆದ ₹4.05 ಕೋಟಿಯನ್ನು ಹಿಂದಿರುಗಿಸಲು ಇನ್ನೂ ಸಿದ್ಧರಿದ್ದೇವೆ ಎಂದು ಮೇಲ್ಮನವಿದಾರರು ಹೇಳಿದರೂ ದೂರುದಾರರು ನಿರಾಕರಿಸಿ ಬಡ್ಡಿ ಸಲ್ಲಿಸುವಂತೆ ಕೋರಿರುವುದನ್ನು ಗಮನಿಸಿತು.

ದೂರುದಾರರ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ದ್ವಿಸದಸ್ಯ ಪೀಠ  ₹10 ಲಕ್ಷ ದಂಡವನ್ನು ವಿಧಿಸಿ, ಮೊತ್ತವನ್ನು 30 ದಿನಗಳಲ್ಲಿ ಮೇಲ್ಮನವಿದಾರರಿಗೆ ವರ್ಗಾಯಿಸಲು ನಿರ್ದೇಶಿಸಿತು.