Minister N Chaluvaraya Swamy and Karnataka HC 
ಸುದ್ದಿಗಳು

ಭೂ ಕಬಳಿಕೆ ಪ್ರಕರಣ: ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ತಹಶೀಲ್ದಾರ್ ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್‌ಗೆ ನ್ಯಾಯಾಲಯ ತಡೆ ವಿಧಿಸಿದೆ.

Bar & Bench

ಕೃಷಿ ಸಚಿವ ಎನ್‌ ಚೆಲುವರಾಯಸ್ವಾಮಿ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್‌ ಹಾಗೂ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಸಚಿವ ಚೆಲುವರಾಯಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ಸಿ ಎಂ ಜೋಶಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

Justice Krishna Dixit & Justice C M Joshi

ಅರ್ಜಿದಾರರ ಪರ  ವಕೀಲ ಸಿದ್ದಾರ್ಥ್‌ ಬಿ.ಮುಚ್ಚಂಡಿ ಅವರು “ಕಳೆದ ನೂರು ವರ್ಷಗಳ ದಾಖಲೆಗಳಲ್ಲಿ ಎಲ್ಲೂ ವ್ಯಾಜ್ಯಗ್ರಸ್ತ ಜಮೀನನ್ನು ಖರಾಬು ಅಥವಾ ಕೆರೆ ಪ್ರದೇಶ ಎಂದು ಉಲ್ಲೇಖ ಮಾಡಿಲ್ಲ. ಇದೀಗ ಏಕಾಏಕಿ ಸರ್ವೇ ನಡೆಸಿ ಅದನ್ನು ಕೆರೆ ಜಾಗ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ” ಎಂದರು.

“ಮಂಜೂರಾದ ಜಮೀನನ್ನು ಸರ್ಕಾರ ರದ್ದುಗೊಳಿಸಿಲ್ಲ. ಮಂಜೂರಾತಿ ಹಾಗೆಯೇ ಇದೆ. ಆದ್ದರಿಂದ, ಇಲ್ಲಿ ಒತ್ತುವರಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಪ್ರಕರಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ–2011 ಅನ್ನು ಅನ್ವಯಿಸಿರುವುದೇ ಕಾನೂನುಬಾಹಿರ ಕ್ರಮ. ಆದ್ದರಿಂದ, ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್‌ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದರು.

ವಾದ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧ ಭೂ ಕಬಳಿಕೆ ಕುರಿತಂತೆ ವಿಶೇಷ ನ್ಯಾಯಾಲಯ 2024ರ ಮಾರ್ಚ್ 28ರಂದು ಹೊರಡಿಸಿದ್ದ ಸಮನ್ಸ್‌ ಹಾಗೂ ಮುಂದಿನ ವಿಚಾರಣಾ ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿತು. ವಿಚಾರಣೆಯನ್ನು 2025ರ ಜನವರಿಗೆ ಮುಂದೂಡಲಾಗಿದೆ.

ಪ್ರಕರಣದ ಹಿನ್ನೆಲೆ: ದಾಸನಪುರ ಹೋಬಳಿಯ ಮಾಕಳಿ ಗ್ರಾಮದ ಸರ್ವೆ ನಂಬರ್‌ 13ರಲ್ಲಿದ್ದ 3 ಎಕರೆ 13 ಗುಂಟೆ ಜಮೀನನ್ನು ಮೂಲ ಮಾಲೀಕ ಗೌಡಯ್ಯ ಅವರು 1923ರಲ್ಲಿ ಆಂಜನೇಯ ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದರು. 1982ರಲ್ಲಿ ದೇವಾಲಯದ ಹೆಸರಿನಲ್ಲಿ ಈ ಜಾಗವನ್ನು ನೋಂದಣಿ ಮಾಡಿಕೊಡುವಂತೆ ಭೂ ನ್ಯಾಯಮಂಡಳಿ ಆದೇಶಿಸಿತ್ತು.

ತದನಂತರ 2023ರ ಸೆಪ್ಟೆಂಬರ್ 23ರಂದು ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಈ ಬಗ್ಗೆ ದೂರು ದಾಖಲಿಸಿಕೊಂಡಿತ್ತು. ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರ್‌ಗೆ ನಿರ್ದೇಶಿಸಿತ್ತು. ಸರ್ವೇ ನಡೆಸಿದ್ದ ತಹಶೀಲ್ದಾರ್ ಸುಮಾರು 9 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ವಿಶೇಷ ನ್ಯಾಯಾಲಯ ಚೆಲುವರಾಯಸ್ವಾಮಿ ಅವರಿಗೆ ಸಮನ್ಸ್‌ ಜಾರಿಗೊಳಿಸಿತ್ತು.