Land 
ಸುದ್ದಿಗಳು

ಪರಿಹಾರ ವಿಳಂಬವಾದರೆ ಪ್ರಸ್ತುತ ಮಾರುಕಟ್ಟೆ ದರದಲ್ಲೇ ಪರಿಹಾರ ಪಡೆಯಲು ಭೂಮಾಲೀಕರು ಅರ್ಹರು: ಸುಪ್ರೀಂ ಕೋರ್ಟ್ ಆದೇಶ

ಸಂವಿಧಾನದ 300ಎ ವಿಧಿಯಡಿ ಆಸ್ತಿಯ ಹಕ್ಕು ಎಂಬುದು ಸಾಂವಿಧಾನಿಕ ಹಕ್ಕಾಗಿರುವುದರ ಜೊತೆಗೆ ಕಲ್ಯಾಣ ರಾಜ್ಯದಲ್ಲಿ ಅದು ಮಾನವ ಹಕ್ಕಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Bar & Bench

ಭೂಸ್ವಾಧೀನಕ್ಕೆ ಸರ್ಕಾರ ಪಾವತಿಸಬೇಕಾದ ಪರಿಹಾರ ವಿಳಂಬವಾದರೆ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗೆ ಪ್ರಸ್ತುತ ಮಾರುಕಟ್ಟೆ ದರದಲ್ಲೇ ಪರಿಹಾರ ಪಡೆಯಲು ಭೂಮಾಲೀಕರು ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ [ಬರ್ನಾರ್ಡ್ ಫಾರ್ನ್ಸಿಸ್ ಜೋಸೆಫ್ ವಾಜ್ ಮತ್ತಿತರರು ಹಾಗೂ ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾಯಿದೆಯಡಿ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ (ಬಿಎಂಐಸಿಪಿ) 2003ರಲ್ಲಿ ಭೂಮಿ ಕಳೆದುಕೊಂಡವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪಿತ್ತಿದೆ. 18 ವರ್ಷಗಳ ಹಿಂದೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದರೂ ಈವರೆಗೆ ಅವರಿಗೆ ಪರಿಹಾರ ದೊರೆತಿರಲಿಲ್ಲ. ಹೀಗಾಗಿ, ಭೂಮಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಪರಿಹಾರ ಮೊತ್ತಕ್ಕೆ ಅವರು ಅರ್ಹರಾಗಿದ್ದಾರೆ ಎಂದು ವಾದಿಸಲಾಯಿತು.

2003ರಲ್ಲಿ ಜಮೀನಿನ ಮಾರುಕಟ್ಟೆ ಮೌಲ್ಯದ ಪ್ರಕಾರ ಈಗ ಪರಿಹಾರ ಧನ ನೀಡಿದರೆ ಅದು ನ್ಯಾಯದ ಅಣಕವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ. ಆದ್ದರಿಂದ ಮಾರುಕಟ್ಟೆ ಮೌಲ್ಯ ನಿರ್ಧರಿಸುವ ದಿನಾಂಕ ಬದಲಿಸುವಂತೆ ಕರ್ನಾಟಕದ ಭೂಸ್ವಾಧೀನ ಅಧಿಕಾರಿಗಳಿಗೆ ಅದು ನಿರ್ದೇಶಿಸಿತು.

ಸಂವಿಧಾನದ 300ಎ ಅಡಿಯಲ್ಲಿ ಆಸ್ತಿಯ ಹಕ್ಕು ಎಂಬುದು ಸಾಂವಿಧಾನಿಕ ಹಕ್ಕಾಗಿರುವುದರ ಜೊತೆಗೆ ಕಲ್ಯಾಣ ರಾಜ್ಯದಲ್ಲಿ ಅದು ಮಾನವ ಹಕ್ಕಾಗಿದೆ ಎಂದು ಕೂಡ ನ್ಯಾಯಾಲಯ ತಿಳಿಸಿದೆ.  

ಸಂವಿಧಾನದ (ನಲವತ್ತನಾಲ್ಕನೇ ತಿದ್ದುಪಡಿ) ಕಾಯಿದೆ- 1978ರ ಮೂಲಕ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದುಹಾಕಲಾಗಿದ್ದರೂ ಕಲ್ಯಾಣ ರಾಜ್ಯದಲ್ಲಿ ಸಂವಿಧಾನದ 300ಎ ಪ್ರಕಾರ ಆಸ್ತಿಯ ಹಕ್ಕು ಎಂಬುದು ಸಾಂವಿಧಾನಿಕ ಹಕ್ಕಾಗಿರುವುದರ ಜೊತೆಗೆ ಮಾನವ ಹಕ್ಕಾಗಿದೆ.
ಸುಪ್ರೀಂ ಕೋರ್ಟ್

ಸುಮಾರು 22 ವರ್ಷಗಳಿಂದ  ನ್ಯಾಯಸಮ್ಮತವಾಗಿ ಪಡೆಯಬೇಕಾದ ಪರಿಹಾರ ಮೊತ್ತದಿಂದ ಭೂಮಾಲೀಕರು ವಂಚಿತರಾಗಿರುವುದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯ ಭೂ ಸ್ವಾಧೀನ ಸಂದರ್ಭದಲ್ಲಿ ಪರಿಹಾರ ಮೊತ್ತ ನಿರ್ಣಯಿಸುವುದನ್ನು ಮತ್ತು ಅದನ್ನು ವಿತರಿಸುವುದನ್ನು ತ್ವರಿತವಾಗಿ ಮಾಡಬೇಕು ಎಂದಿತು.

ಹೀಗಾಗಿ, ಏಪ್ರಿಲ್ 22, 2019ರನ್ವಯ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಭೂಮಾಲೀಕರಿಗೆ ನೀಡಬೇಕಾದ ಪರಿಹಾರವನ್ನು ನಿರ್ಧರಿಸುವಂತೆ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಅದು ನಿರ್ದೇಶಿಸಿತು.

ಭೂ ಮಾಲೀಕರ ಪರ ವಕೀಲ ಆರ್.ಚಂದ್ರಚೂಡ್ ವಾದ ಮಂಡಿಸಿದ್ದರು. ನಂದಿ ಮೂಲಸೌಕರ್ಯ ಕಾರಿಡಾರ್ ಮತ್ತು ನಾದ್ನಿ ಎಕನಾಮಿಕ್ ಕಾರಿಡಾರ್ ಲಿಮಿಟೆಡ್ ಅನ್ನು ಹಿರಿಯ ವಕೀಲ ಆತ್ಮರಾಮ್ ಎನ್ ಎಸ್ ನಾಡಕರ್ಣಿ ಪ್ರತಿನಿಧಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆವಿಷ್ಕಾರ್ ಸಿಂಘ್ವಿ, ಸರ್ಕಾರಕ್ಕೆ ಸಂಬಂಧಿಸಿದ ಉಳಿದ ಪ್ರತಿವಾದಿಗಳ ಪರವಾಗಿ ಪುರುಷೋತ್ತಮ ಶರ್ಮಾ ತ್ರಿಪಾಠಿ ವಾದ ಮಂಡಿಸಿದ್ದರು.