ಅಧಿಕಾರಿಗಳು ವಶಪಡಿಸಿಕೊಂಡ ಕಾನೂನುಬಾಹಿರ ಮಾದಕವಸ್ತುವನ್ನು ನಾಶಪಡಿಸುವ ಮೊದಲು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಗೆ ಸ್ಯಾಂಪಲ್ ಮಾಡಿ ಪರಿಶೀಲಿಸಬೇಕು ಎಂಬುದನ್ನು ಹೇಳುವ ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ- 1985ರ (ಎನ್‌ಡಿಪಿಎಸ್ ಕಾಯಿದೆ) ಸೆಕ್ಷನ್ 52 ಎ ಪಾಲಿಸದಿರುವುದು ಜಾಮೀನು ನೀಡಲು ಕಾರಣವಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ [ಮಾದಕವಸ್ತು ನಿಯಂತ್ರಣ ದಳ ಮತ್ತು ಕಾಶಿಫ್ ನಡುವಣ ಪ್ರಕರಣ].
ಸೆಕ್ಷನ್ 52 ಎ ಕಾರ್ಯವಿಧಾನದ ನಿಬಂಧನೆಯಷ್ಟೇ. ಹಾಗಾಗಿ, ಈ ಪರಿಚ್ಛೇದದಲ್ಲಿ ವಿವರಿಸಿರುವ ಪ್ರಕ್ರಿಯೆ ಅನುಸರಿಸುವಲ್ಲಿ ವಿಳಂಬ ಉಂಟಾದರೆ ಅದು ವಶಪಡಿಸಿಕೊಂಡ ಮಾದಕವಸ್ತುವನ್ನು ಸಾಕ್ಷ್ಯದ ರೂಪದಲ್ಲಿ ಸ್ವೀಕಾರಾರ್ಹಗೊಳಿಸುವುದಿಲ್ಲ ಅಥವಾ ಆರೋಪಿಗೆ ಜಾಮೀನು ನೀಡುವುದನ್ನು ಖಾತರಿಪಡಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ತಿಳಿಸಿದೆ.
ಅಂತೆಯೇ ಸೆಕ್ಷನ್ 52 ಎ ಪ್ರಕಾರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ವಶಪಡಿಸಿಕೊಂಡ ಮಾದಕವಸ್ತುವಿನ ಮಾದರಿಗಳನ್ನು ಪಡೆದು ಪರಿಶೀಲಿಸಲು ಮ್ಯಾಜಿಸ್ಟ್ರೇಟ್‌ಗೆ 72 ಗಂಟೆಗಳ ಒಳಗೆ ಅರ್ಜಿ ಸಲ್ಲಿಸಬೇಕೆಂದು ಸೂಚಿಸಿದ್ದ ಮೇ 2023ರ ದೆಹಲಿ ಹೈಕೋರ್ಟ್ ತೀರ್ಪನ್ನು ಪೀಠ ಬದಿಗೆ ಸರಿಸಿದೆ.
ಅಮೇರಿಕಾಕ್ಕೆ ಮಾದಕ ದ್ರವ್ಯ ಮಾತ್ರೆಗಳನ್ನು ಕಳ್ಳಸಾಗಣೆ ಮಾಡಿದ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‌ಸಿಬಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ಪುರಸ್ಕರಿಸಿದೆ. ಆದರೆ, ಆರೋಪಿಗೆ ನೀಡಲಾದ ಜಾಮೀನನ್ನು ಅದು ರದ್ದುಗೊಳಿಸದೆ ಹೈಕೋರ್ಟ್‌ನ ಮತ್ತೊಂದು ಪೀಠ ನಾಲ್ಕು ವಾರಗಳಲ್ಲಿ ಮತ್ತೊಮ್ಮೆ ಪ್ರಕರಣದ ಕುರಿತು ತೀರ್ಪು ನೀಡುವಂತೆ ನಿರ್ದೇಶಿಸಿದೆ.
ಕೊರಿಯರ್ ಸಂಸ್ಥೆ ನವದೆಹಲಿಯ ಡಿಎಚ್‌ಎಲ್ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಅನುಮಾನಾಸ್ಪದ ಪಾರ್ಸೆಲ್ ದೊರೆತಿತ್ತು. ಪ್ರಕರಣದಲ್ಲಿ ಗಣೇಶ್ ಚೌಧರಿ ಮತ್ತು ಕಾಶಿಫ್ ಎಂಬ ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಕಾಶಿಫ್ ಅಧಿಕಾರಿಗಳು ವಶಪಡಿಸಿಕೊಂಡ ನಿಷಿದ್ಧ ವಸ್ತುಗಳನ್ನು ಪರಿಶೀಲಿಸುವಲ್ಲಿ ಕಾರ್ಯವಿಧಾನದ ಲೋಪಗಳಾಗಿವೆ. ಮಾದರಿ ಸಂಗ್ರಹಕ್ಕಾಗಿ ಅರ್ಜಿಗಳನ್ನು ಸಲ್ಲಿಸುವಲ್ಲಿ ವಿಳಂಬವಾಗಿದ್ದು ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 52 ಎ ನಲ್ಲಿ ನಮೂದಿಸಲಾದ ಸರಿಯಾದ ಮಾದರಿ ಕಾರ್ಯವಿಧಾನಗಳನ್ನು ಅನುಸರಿಸಲಾಗಿಲ್ಲ ಎಂದು ದೂರಿದ್ದರು. ಆದರೆ ಆರೋಪ ನಿರಾಕರಿಸಿದ್ದ ಎನ್‌ಸಿಬಿ ವಿಚಾರಣೆಯ ಯಾವುದೇ ಸಂದರ್ಭದಲ್ಲಿ ಅವುಗಳನ್ನು ಪರಿಹರಿಸಲು ಅವಕಾಶವಿದೆ ಎಂದಿತ್ತು.
ಎನ್‌ಡಿಪಿಎಸ್ ಕಾಯಿದೆ ಮತ್ತು ಸಾಕ್ಷ್ಯಾಧಾರಗಳನ್ನು ಹಾಳು ಮಾಡುವುದನ್ನು ತಡೆಯುವ ಸಂಬಂಧಿತ ಸ್ಥಾಯಿ ಆದೇಶಗಳ ಕಟ್ಟುನಿಟ್ಟಿನ ಪಾಲನೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಹೈಕೋರ್ಟ್ ಕಾಶಿಫ್‌ಗೆ ಜಾಮೀನು ನೀಡಿತ್ತು. ಕಾಶಿಫ್ ವಿರುದ್ಧ ಯಾವುದೇ ನೇರ ಸಾಕ್ಷ್ಯಗಳಿಲ್ಲ ಮತ್ತು ಪ್ರಕರಣದ ನಿರ್ವಹಣೆಯಲ್ಲಿ ಸೆಕ್ಷನ್ 52 ಎ ಅಡಿಯಲ್ಲಿ ಕಾರ್ಯವಿಧಾನದ ಉಲ್ಲಂಘನೆಗಳಿವೆ ಎಂದು ಅದು ತರ್ಕಿಸಿತ್ತು.
ಇದನ್ನು ಪ್ರಶ್ನಿಸಿ ಎನ್‌ಸಿಬಿ ಮೇಲ್ಮನವಿ ಸಲ್ಲಿಸಿತ್ತು. ಎನ್‌ಸಿಬಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಕಾಶಿಫ್ ಪರ ವಕೀಲ ಅಕ್ಷಯ್ ಭಂಡಾರಿ ವಾದ ಮಂಡಿಸಿದ್ದರು.