ಎನ್‌ಡಿಪಿಎಸ್‌ ಕಾಯಿದೆ: ಎಫ್ಎಸ್ಎಲ್ ವರದಿ ಇಲ್ಲದ ಆರೋಪಪಟ್ಟಿ ಅಪೂರ್ಣವೇ ಎಂಬುದನ್ನು ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್

ಭಾರತದಲ್ಲಿ ಸಾಕಷ್ಟು ಎಫ್ಎಸ್ಎಲ್‌ ಮತ್ತು ಶೇಖರಣಾ ಸೌಲಭ್ಯಗಳಿವೆಯೇ ಎಂಬುದೂ ಸೇರಿದಂತೆ ಎನ್‌ಡಿಪಿಎಸ್‌ ಕಾಯಿದೆಗೆ ಸಂಬಂಧಿಸಿದ ಪ್ರಕರಣಗಳ ನ್ಯಾಯಸಮ್ಮತತೆ ಮತ್ತು ಪರಿಣಾಮ ಕುರಿತಾದ ವಿವಿಧ ಅಂಶಗಳನ್ನು ಪರಿಶೀಲಿಸಲೂ ನ್ಯಾಯಾಲಯ ನಿರ್ಧರಿಸಿದೆ.
Supreme Court of India
Supreme Court of India
Published on

ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ವರದಿಯಿಲ್ಲದೆ ಸಲ್ಲಿಸಲಾದ ಆರೋಪಪಟ್ಟಿಯನ್ನು ಸಿಆರ್‌ಪಿಸಿ ಅಡಿ ಅಪೂರ್ಣ ವರದಿ ಎನ್ನಬಹುದೇ ಎನ್ನುವ ಕುರಿತು ಸುಪ್ರೀಂ ಕೋರ್ಟ್‌ ಪರಿಶೀಲಿಸಲಿದೆ [ಮೊಹಮದ್‌ ಅರ್ಬಾಜ್‌ ಮತ್ತಿತರರು ಹಾಗೂ ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಭಾರತದಲ್ಲಿ ಸಾಕಷ್ಟು ಎಫ್ಎಸ್ಎಲ್‌ ಪ್ರಯೋಗಾಲಯ ಮತ್ತು ನಿಷಿದ್ಧ ವಸ್ತು ಶೇಖರಣಾ ಸೌಲಭ್ಯಗಳಿವೆಯೇ ಎಂಬುದೂ ಸೇರಿದಂತೆ ಎನ್‌ಡಿಪಿಎಸ್‌ ಕಾಯಿದೆಗೆ ಸಂಬಂಧಿಸಿದ ಪ್ರಕರಣಗಳ ನ್ಯಾಯಸಮ್ಮತತೆ ಮತ್ತು ಪರಿಣಾಮ ಕುರಿತಾದ ವಿವಿಧ ಅಂಶಗಳನ್ನು ಸಹ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಸುಧಾಂಶು ಧುಲಿಯಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ತ್ರಿಸದಸ್ಯ ಪೀಠ ಪರಿಶೀಲಿಸಲಿದೆ.

ನ್ಯಾಯಾಲಯವು ಪರಿಗಣಿಸಲು ಒಪ್ಪಿಕೊಂಡ ಹೆಚ್ಚುವರಿ ಪ್ರಶ್ನೆಗಳು ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿವೆ:

Also Read
ಸಂತೋಷ್‌ ಆತ್ಮಹತ್ಯೆ ಪ್ರಕರಣ: ಮಹಜರ್‌, ಪಂಚನಾಮೆ ವಿಡಿಯೊ, ಎಫ್‌ಎಸ್‌ಎಲ್‌ ವರದಿ ಸಲ್ಲಿಸಲು ನ್ಯಾಯಾಲಯದ ಆದೇಶ

- ರಾಜ್ಯ ಸರ್ಕಾರಗಳಿಂದ ಸಾಕಷ್ಟು ವಿಧಿವಿಜ್ಞಾನ/ಪರೀಕ್ಷಕ ಪ್ರಯೋಗಾಲಯಗಳನ್ನು ಸ್ಥಾಪನೆಯ ಜೊತೆಗೆ ಅಂತಹ ಪ್ರಯೋಗಾಲಯ ನಿರ್ವಹಿಸಲು ಅಗತ್ಯವಾದ ತಾಂತ್ರಿಕ ಸಿಬ್ಬಂದಿಯ ನೇಮಕಾತಿ ಕುರಿತ ವಿಷಯ.

- ವಿಧಿ ವಿಜ್ಞಾನ/ಪರೀಕ್ಷಕರ ಪ್ರಯೋಗಾಲಯಗಳ ಪ್ರಸ್ತುತ ಸ್ಥಿತಿ;

- ನಿಗದಿತ ಅವಧಿಯೊಳಗೆ ಎಫ್‌ಎಸ್‌ಎಲ್/ಪರೀಕ್ಷಕರ ವರದಿಗಳನ್ನು ಸಲ್ಲಿಸಲು ದೃಢವಾದ ಕಾರ್ಯವಿಧಾನ ರೂಪಿಸುವಿಕೆ;

- ನಿಷಿದ್ಧ ವಸ್ತುಗಳನ್ನು ಪ್ರಯೋಗಾಲಯಗಳಲ್ಲಿ ಸಂಗ್ರಹಿಸಿಡಲು ಸಾಕಷ್ಟು ಸಂಗ್ರಹಣಾ ಸೌಲಭ್ಯ ಒದಗಿಸುವಂತೆ ಭಾರತ ಒಕ್ಕೂಟ ಮತ್ತು ಮೋಹನ್ ಲಾಲ್ ಇನ್ನಿತರರ ನಡುವಣ ಪ್ರಕರಣದಲ್ಲಿ (2016) ನೀಡಲಾದ ತೀರ್ಪು ಪಾಲಿಸಲು ರಾಜ್ಯಗಳು ತೆಗೆದುಕೊಂಡ ಕ್ರಮ.

Also Read
ಎಫ್‌ಎಸ್‌ಎಲ್‌ ವರದಿ ವಿಳಂಬಕ್ಕಾಗಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವುದು 21ನೇ ವಿಧಿಯ ಉಲ್ಲಂಘನೆ: ರಾಜ್ಯ ಹೈಕೋರ್ಟ್

ಈ ಸಂಬಂಧ ಗುರುವಾರ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ ಆಗಸ್ಟ್‌ 29ಕ್ಕೆ ವಿಚಾರಣೆ ಮುಂದೂಡಿದೆ.

ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 21 ಮತ್ತು 29ರ ಅಡಿಯಲ್ಲಿ  20 ಕೆಜಿ ಅಕ್ರಮ ವಸ್ತುಗಳನ್ನು ಸಾಗಿಸಿದ ಆರೋಪದಡಿಯಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಮೂವರಿಗೆ ಜಾಮೀನು ನೀಡಲು ನಿರಾಕರಿಸಿ 2020ರ ನವೆಂಬರ್‌ನಲ್ಲಿ ದೆಹಲಿ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಸಿಆರ್‌ಪಿಸಿ ಸೆಕ್ಷನ್ 173ರ ಅಡಿಯಲ್ಲಿ ತನಿಖಾ ಸಂಸ್ಥೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪರೀಕ್ಷಿಸಿದ ವಿಧಿ ವಿಜ್ಞಾನ ವರದಿ ಇರಲಿಲ್ಲ ಎಂದು ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

ಡಿಫಾಲ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಪರೀಕ್ಷಕರ ವರದಿಯ ಇಲ್ಲದಿದ್ದಾಗ ವರದಿ ಅಪೂರ್ಣವಾಗುತ್ತದೆ ಎಂಬ ವಾದವನ್ನುಒಪ್ಪಲು ವಿಚಾರಣಾ ನ್ಯಾಯಾಲಯ  ಈ ಹಿಂದೆ ನಿರಾಕರಿಸಿತ್ತು.

ಪರೀಕ್ಷಕರ ವರದಿಯಿಲ್ಲದೆ ಅಂತಿಮ ವರದಿಯು ಅಪೂರ್ಣವಾಗಿದೆಯೇ ಎಂಬ ಸೀಮಿತ ಅಂಶದ ಮೇಲೆ ವಿಚಾರಣಾ ನ್ಯಾಯಾಲಯದ ಶೋಧನೆಯನ್ನು ಹೈಕೋರ್ಟ್ ರದ್ದುಗೊಳಿಸಿತು. ಆದರೂ, ಅಂತಿಮ ವರದಿಯನ್ನು (ಆರೋಪಪಟ್ಟಿ) ಸಕಾಲದಲ್ಲಿ ಸಲ್ಲಿಸಿದ್ದು ಕಂಡು ಬಂದರೆ ಆಗ ಡೀಫಾಲ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸುವುದನ್ನು ಅದು ಎತ್ತಿಹಿಡಿದಿತ್ತು.

ಅಂತೆಯೇ ತಮ್ಮ ಜಾಮೀನು ಅರ್ಜಿ ತಿರಸ್ಕಾರವಾಗಿದ್ದನ್ನು ಪ್ರಶ್ನಿಸಿ ಆರೋಪಿಗಳು  ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಈಗಾಗಲೇ ಅವರು ಜೈಲುವಾಸ ಅನುಭವಿಸಿರುವ ವರದಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿತ್ತು. ಅದನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿದ್ದು ಗುರುವಾರದಂದೂ ಜಾಮೀನು ಅವಧಿ ವಿಸ್ತರಿಸಲಾಗಿದೆ.

Kannada Bar & Bench
kannada.barandbench.com