ಕಾರಿನ ಆಸನಗಳ ಚೌಕಟ್ಟನ್ನು ತಯಾರಿಸುವ ಡೇಚಾಂಗ್ ಸೀಟ್ ಆಟೋಮೋಟಿವ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೂನ್ ಜೂನ್ ಸಿಯೋಕ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಮರುಚಾಲನೆ ನೀಡಿದೆ.
ಡೇಚಾಂಗ್ ವಿರುದ್ಧ ನಡೆದ ಆರ್ಥಿಕ ವಂಚನೆ ಪ್ರಕರಣದಲ್ಲಿ ಸಿಯೋಕ್ ಆರೋಪಿಯಾಗಿದ್ದರು. ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ಅವರ ವಿರುದ್ಧದ ವಿಚಾರಣೆ ರದ್ದುಗೊಳಿಸಿತ್ತು.
ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಸಿಯೋಕ್ ಅವರು ಖುದ್ದು ನೀಡಿರುವ ಹೇಳಿಕೆ ಇತರ ಆರೋಪಿಗಳಿಂದ ಅವರು ಹಣ ಪಡೆದಿರುವ ಸಾಧ್ಯತೆಯಿದೆ ಎಂಬುದನ್ನು ಬಹಿರಂಗಪಡಿಸಿದೆ. ಹೀಗಾಗಿ, ಅವರು ವಿಚಾರಣೆಯನ್ನು ಎದುರಿಸಲೇಬೇಕು ಎಂದು ಹೇಳಿದೆ.
ವಿದೇಶಿ ಹೂಡಿಕೆದಾರರ ಹೂಡಿಕೆಗಳನ್ನು ರಕ್ಷಿಸುವ ಜವಾಬ್ದಾರಿ ಕಾನೂನಿನ ಮೇಲಿದೆ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.
" ವಿದೇಶಿ ಹೂಡಿಕೆದಾರರ ಹೂಡಿಕೆಗಳನ್ನು ರಕ್ಷಿಸುವ ಜವಾಬ್ದಾರಿ ಕಾನೂನಾತ್ಮಕ ಆಡಳಿತಕ್ಕೆ ಇರುತ್ತದೆ. ಇದೇ ವೇಳೆ ಅಂತಹ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ಯಾವುದೇ ವ್ಯಕ್ತಿ 'ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ನಿರಪರಾಧಿ' ಎಂಬ ಪದಗುಚ್ಛದ ಶಕ್ತಿಯಿಂದ ನಿಜವಾಗಿಯೂ ಮತ್ತು ಸಂಪೂರ್ಣವಾಗಿ ರಕ್ಷಿಸಲ್ಪಡುತ್ತಾನೆ ಎಂದು ಖಚಿತಪಡಿಸಿಕೊಳ್ಳುತ್ತದೆ. ಆದ್ದರಿಂದ, ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ" ಎಂದು ಏಪ್ರಿಲ್ 8ರ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಜಿಎಸ್‌ಟಿ ಪಾವತಿಗಳ ಹೆಸರಿನಲ್ಲಿ ಸುಮಾರು ₹10 ಕೋಟಿ ವಂಚನೆ ಮತ್ತು ದುರುಪಯೋಗ ಪ್ರಕರಣದಲ್ಲಿ ಸಿಯೋಕ್ ಆರೋಪಿಯಾಗಿದ್ದು ಸಹ-ಆರೋಪಿಗಳಾದ ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ಹಣಕಾಸು ಸಲಹೆಗಾರರು ಸಹ ಆರೋಪಿಗಳಾಗಿದ್ದರು
ಪ್ರಕರಣವನ್ನು 2022ರಲ್ಲಿ ದಾಖಲಿಸಲಾಗಿತ್ತು. ಆರೋಪಪಟ್ಟಿ ಸಲ್ಲಿಸಿದ ನಂತರ, ವಿಚಾರಣಾ ನ್ಯಾಯಾಲಯ 2023 ರಲ್ಲಿ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿತ್ತು. ಅವರ ವಿರುದ್ಧದ ವಿಚಾರಣೆ ರದ್ದುಗೊಳಿಸುವಾಗ, ಸಿಯೋಕ್ ವಿರುದ್ಧ ಆರೋಪ ಹೊರಿಸಲು ಯಾವುದೇ ಪ್ರಾಥಮಿಕ ಸಾಕ್ಷ್ಯವನ್ನು ದಾಖಲಿಸಲಾಗಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಹೈಕೋರ್ಟ್ ತೀರ್ಪಿನ ವಿರುದ್ಧ ಡೇಚಾಂಗ್ ಸೀಟ್ ಆಟೋಮೋಟಿವ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಕಿಯಾ ಕಾರುಗಳ ಆಸನ ತಯಾರಕರಾದ, ಕಂಪನಿ ಡೇಚಾಂಗ್ ಸೀಟ್ ಆಟೋಮೋಟಿವ್ ಲಿಮಿಟೆಡ್‌ನ ಅಧಿಕೃತ ಪ್ರತಿನಿಧಿಯಾದ ಹ್ಯೋಕ್ಸೂ ಸನ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲುಥ್ರಾ ವಾದ ಮಂಡಿಸಿದರು. ಪ್ರತಿವಾದಿ-ಆರೋಪಿಗಳನ್ನು ಹಿರಿಯ ವಕೀಲ (ನಿವೃತ್ತ ನ್ಯಾಯಮೂರ್ತಿ) ರಾಜೀವ್ ಶಕ್ತೇರ್ ಪ್ರತಿನಿಧಿಸಿದ್ದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]