Kiren Rijiju, Union Law Minister
Kiren Rijiju, Union Law Minister  
ಸುದ್ದಿಗಳು

ಪ್ರಕರಣಗಳ ಸಕಾಲಿಕ ವಿಲೇವಾರಿ, ತ್ವರಿತ ನ್ಯಾಯಾಲಯಗಳ ಸ್ಥಾಪನೆ ಕೋರಿ ಸಿಜೆಗಳಿಗೆ ಕಾನೂನು ಸಚಿವ ರಿಜಿಜು ಪತ್ರ

Bar & Bench

ತ್ವರಿತ ನ್ಯಾಯಾಲಯಗಳು ಮತ್ತು ತ್ವರಿತ ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು ಮತ್ತು ಅಂತಹ ನ್ಯಾಯಾಲಯಗಳ ಸ್ಥಾಪನೆಗೆ ಮೀಸಲಿಟ್ಟ ಹಣ ಬಳಕೆಯಾಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಅವರು ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆ) ಪತ್ರ ಬರೆದಿದ್ದಾರೆ.

ಮಹಿಳೆಯರು, ಮಕ್ಕಳು ಮತ್ತು ತುಳಿತಕ್ಕೊಳಗಾದ ಸಮುದಾಯಗಳಿಗೆ ಸೇರಿದ ನಾಗರಿಕರ  ಸುರಕ್ಷತೆಯ ಮೇಲೆ ಇದು ಪರಿಣಾಮ ಬೀರುವುದರಿಂದ ಅಂತಹ ನ್ಯಾಯಾಲಯಗಳ ದೃಢವಾದ ಕಾರ್ಯನಿರ್ವಹಣೆಯ ಅಗತ್ಯವನ್ನು ಪತ್ರವು ಎತ್ತಿ ತೋರಿಸಿದೆ.

ಈ ನಿಟ್ಟಿನಲ್ಲಿ, ಕಾನೂನು ಸಚಿವರು ಮುಖ್ಯ ನ್ಯಾಯಮೂರ್ತಿಗಳಿಗೆ ಈ ಕೆಳಗಿನ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸುವಂತೆ ವಿನಂತಿಸಿದ್ದಾರೆ:

  • ಪ್ರಕರಣಗಳು ದೊಡ್ಡಮಟ್ಟದಲ್ಲಿ ಬಾಕಿ ಇರುವ ದೃಷ್ಟಿಯಿಂದ 14ನೇ ಹಣಕಾಸು ಆಯೋಗದ ನಿಧಿ ಹಂಚಿಕೆ ಮೂಲಕ ಮತ್ತು ಅದರಂತೆ ಆಲೋಚಿಸಿರುವ ಪ್ರಕಾರ ನಿಮ್ಮ ನ್ಯಾಯವ್ಯಾಪ್ತಿಯಲ್ಲಿ ಸ್ಥಾಪಿಸಬೇಕಿರುವ ತ್ವರಿತ ಗತಿ ನ್ಯಾಯಾಲಯಗಳನ್ನು ರಾಜ್ಯ ಸರ್ಕಾರದೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ ಸ್ಥಾಪಿಸಬಹುದು.

  • ತ್ವರಿತ ವಿಶೇಷ ನ್ಯಾಯಾಲಯಗಳ ಕೇಂದ್ರ ಪ್ರಾಯೋಜಿತ ಯೋಜನೆಯ ಪ್ರಕಾರ ನಿಮ್ಮ ನ್ಯಾಯವ್ಯಾಪ್ತಿಯಲ್ಲಿ ಉಳಿದ ಸಂಖ್ಯೆಯ ನ್ಯಾಯಾಲಯಗಳನ್ನು ಆದ್ಯತೆಯ ಆಧಾರದ ಮೇಲೆ ಸ್ಥಾಪಿಸಬಹುದು ಮತ್ತು ಕಾರ್ಯಗತಗೊಳಿಸಬಹುದು.

  • ಪ್ರಕರಣಗಳ ತ್ವರಿತ ವಿಲೇವಾರಿ ಖಚಿತಪಡಿಸಿಕೊಳ್ಳಲು ಮತ್ತು ಅವು ಬಾಕಿ ಉಳಿಯುವುದನ್ನು ತಪ್ಪಿಸಲು, ಸಂಬಂಧಪಟ್ಟ ನ್ಯಾಯಾಲಯಗಳಿಗೆ ಅಗತ್ಯ ಸೂಚನೆ  ಮತ್ತು ಬೆಂಬಲವನ್ನು ನೀಡಬಹುದು ಮತ್ತು ತ್ವರಿತ ನ್ಯಾಯಾಲಯಗಳು/ ತ್ವರಿತ ವಿಶೇಷ ನ್ಯಾಯಾಲಯ ಪ್ರಕರಣಗಳ ಕಾಲಮಿತಿ ವಿಲೇವಾರಿಗೆ ಕಟ್ಟುನಿಟ್ಟಾದ ಮೇಲ್ವಿಚಾರಣಾ ಕಾರ್ಯವಿಧಾನ ಅಳವಡಿಸಿಕೊಳ್ಳಬಹುದು.

  • ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಅಡಿಯಲ್ಲಿ ತಿಳಿಸಿರುವಂತೆ ತ್ವರಿತ ವಿಶೇಷ ನ್ಯಾಯಾಲಯಗಳ ಸ್ಥಾಪನೆಗಾಗಿ ನಿಗದಿಪಡಿಸಿದ ಭಾರತ ಸರ್ಕಾರದ ನಿಧಿಯನ್ನು ಸಮಯೋಚಿತವಾಗಿ ಪಡೆದುಕೊಳ್ಳಲು ಅಗತ್ಯ ಪಾಲನೆಗಳನ್ನು ದಯವಿಟ್ಟು ಮಾಡತಕ್ಕದ್ದು.

ಘೋರ ಅಪರಾಧಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ರಾಜ್ಯ ಸರ್ಕಾರಗಳು ಸ್ಥಾಪಿಸಿರುವ ತ್ವರಿತ ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಸ್ಥಿತಿಯನ್ನು ಪರಿಶೀಲಿಸಿ ಈ ಪತ್ರ ಬರೆಯಲಾಗಿದೆ. ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿ ದಾಖಲಾಗುವ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ (CSS) ಅಡಿಯಲ್ಲಿ ತ್ವರಿತ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.

14ನೇ ಹಣಕಾಸು ಆಯೋಗವು ಹೆಚ್ಚಿನ ನಿಧಿ ಹಂಚಿಕೆ ಮಾಡಿ ರಾಜ್ಯ ಸರ್ಕಾರಗಳು 1,800 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಆದರೂ ದೇಶಾದ್ಯಂತ 896 ತ್ವರಿತ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು13,18,427 ಪ್ರಕರಣಗಳು ಬಾಕಿ ಉಳಿದಿವೆ. ಪ್ರತಿ ತಿಂಗಳು ಸುಮಾರು 88,000 ಹೊಸ ಪ್ರಕರಣಗಳು ದಾಖಲಾಗುತ್ತಿದ್ದರೆ, ಸುಮಾರು 35,000 ಪ್ರಕರಣಗಳು ಮಾತ್ರ ವಿಲೇವಾರಿಯಾಗುತ್ತಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.