ಸುಶಿಕ್ಷಿತ ಮಹಿಳೆ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯುವ ಸಲುವಾಗಿಯಷ್ಟೇ ನಿರುದ್ಯೋಗಿಯಾಗಿ ಉಳಿಯುವುದನ್ನು ಕಾನೂನು ಬೆಂಬಲಿಸುವುದಿಲ್ಲ ಎಂದು ಒರಿಸ್ಸಾ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ಸೂಕ್ತ ಮತ್ತು ಉನ್ನತ ಅರ್ಹತೆ ಇದ್ದರೂ ಕೆಲಸ ಮಾಡದೆ ಇಲ್ಲವೇ ಕೆಲಸ ಮಾಡಲು ಯತ್ನಿಸದೆ ಗಂಡ ಜೀವನಾಂಶ ಮೊತ್ತ ಪಾವತಿಸಲೆಂದಷ್ಟೇ ನಿಷ್ಕ್ರಿಯರಾಗಿರುವ ಪತ್ನಿಯನ್ನು ಕಾನೂನು ಎಂದಿಗೂ ಮೆಚ್ಚುವುದಿಲ್ಲ ಎಂಬುದಾಗಿ ನ್ಯಾಯಮೂರ್ತಿ ಜಿ ಶತಪತಿ ತಿಳಿಸಿದರು.
ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ತನ್ನ ಪರಿತ್ಯಕ್ತ ಪತ್ನಿಗೆ ತಿಂಗಳಿಗೆ ₹8,000 ಜೀವನಾಂಶ ನೀಡುವಂತೆ ನಿರ್ದೇಶಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಇಬ್ಬರೂ ಕಕ್ಷಿದಾರರ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿತು. ಅವಲಂಬಿತ ತಾಯಿಯನ್ನು ಹೊಂದಿರುವ ಪತಿಗೆ ತಿಂಗಳಿಗೆ ₹32,541 ನಿವ್ವಳ ವೇತನ ಇರುವುದು ತಿಳಿದುಬಂದಿತ್ತು.
ಮತ್ತೊಂದೆಡೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹೊಂದಿರುವ ವಿಜ್ಞಾನ ಪದವೀಧರೆ ಪತ್ನಿ, ಈ ಹಿಂದೆ ಎನ್‌ಡಿಟಿವಿ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ತಮ್ಮ ಅರ್ಹತೆ ಮತ್ತು ಕೆಲಸದ ಅನುಭವದ ಹೊರತಾಗಿಯೂ, ತಾನು ನಿರುದ್ಯೋಗಿ ಎಂದು ಆಕೆ ಹೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ತಮ್ಮ ಬದುಕನ್ನು ನಿರ್ವಹಿಸಲು ಸಾಧ್ಯವಾಗದವರಿಗೆ ನೆರವು ನೀಡುವ ಉದ್ದೇಶಕ್ಕಾಗಿ ಜೀವನಾಂಶ ಎಂಬುದು ಇದೆ ಎಂದು ನ್ಯಾಯಾಲಯ ತಿಳಿಸಿತು.
ಜೀವನಾಂಶ ನೀಡುವ ಕಟ್ಟಳೆಯ ಹಿಂದಿನ ಸಾಮಾಜಿಕ ಉದ್ದೇಶ ಗಮನಿಸಿದರೆ ಗಂಡನ ಆದಾಯ ಮತ್ತು ಹೊಣೆಗಾರಿಕೆಯೊಂದಿಗಷ್ಟೇ ಹೆಂಡತಿಯ ಅಗತ್ಯತೆ ಮತ್ತು ಅವಶ್ಯಕತೆಗಳು ಹೊಂದಾಣಿಕೆಯಾಗಿರಬೇಕು ಎನ್ನದೆ ಆಕೆಯ ಶಿಕ್ಷಣ ಮತ್ತು ಆದಾಯ ನಿರೀಕ್ಷೆ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಪತ್ನಿಗೆ ಅರ್ಹತೆಗಳು ಮತ್ತು ಕೆಲಸ ಮಾಡುವ ಸಾಮರ್ಥ್ಯವಿದ್ದ ಕಾರಣ, ನ್ಯಾಯಾಲಯ ಜೀವನಾಂಶದ ಮೊತ್ತವನ್ನು ತಿಂಗಳಿಗೆ ₹8,000ದ ಬದಲು ₹5,000ಕ್ಕೆ ಇಳಿಸಿತು.