ಪತ್ನಿಯ ವ್ಯಭಿಚಾರದ ಬಗ್ಗೆ ಪತಿ ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಂಡ ಸಾಕ್ಷ್ಯವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಹೇಳಿದೆ.
ತನ್ನ ನ್ಯಾಯಾಂಗ ವಿವೇಚನಾಧಿಕಾರದ ಮೂಲಕ ತನ್ನ ಮುಂದೆ ಇರುವ ಪ್ರಕರಣ ನಿರ್ಣಯಿಸಲು ಅತ್ಯಗತ್ಯವಾಗಿರುವ ಯಾವುದೇ ಪುರಾವೆಯನ್ನು ಪರಿಶೀಲಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಸೂಕ್ತ ಅಧಿಕಾರ ವ್ಯಾಪ್ತಿ ಇರುತ್ತದೆ ಎಂದು ನ್ಯಾ. ಸುಮೀತ್ ಗೋಯೆಲ್ ನೆನಪಿಸಿದ್ದಾರೆ.
"ಪತ್ನಿಯ ವ್ಯಭಿಚಾರ ಸಾಬೀತುಪಡಿಸಲು ಪತಿ ಕಲೆಹಾಕಿದ ಸಾಮಾಜಿಕ ಮಾಧ್ಯಮ ಇತ್ಯಾದಿಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯ ಮಧ್ಯಂತರ ಜೀವನಾಂಶ ಮತ್ತು ವಿಚಾರಣೆಯ ವೆಚ್ಚದ (ವ್ಯಾಜ್ಯ ವೆಚ್ಚಗಳು) ಕುರಿತಾದ ನ್ಯಾಯ ನಿರ್ಣಯದ ಹಂತದಲ್ಲಿ ಪರಿಶೀಲಿಸಬಹುದು," ಎಂದು ತೀರ್ಪು ತಿಳಿಸಿದೆ.
ಅಂತಹ ಸಾಕ್ಷ್ಯ ಭಾರತೀಯ ಸಾಕ್ಷ್ಯ ಕಾಯಿದೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮದ ನಿಯಮಾವಳಿಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಲೆಕ್ಕಿಸದೆಯೇ ಅದು ಅಸ್ತಿತ್ವದಲ್ಲಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾ. ಗೋಯಲ್ ಅವರು ತಮ್ಮ ಅದೇಶದಲ್ಲಿ, ಪ್ರಸಕ್ತ ಕಾಲಮಾನದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್‌ಬುಕ್, ಟ್ವಿಟರ್, ಇನ್ಸ್‌ಟಾಗ್ರಾಮ್, ವಾಟ್ಸ್‌ಆಪ್ ನಂತಹ ವೇದಿಕೆಗಳಲ್ಲಿ ಮುಕ್ತ ಹಾಗೂ ವ್ಯಾಪಕವಾಗಿ ತೊಡಗಿಕೊಳ್ಳುವುದನ್ನು ಸಾಮಾಜಿಕ ಬದುಕು ಹೊಂದಿರುತ್ತದೆ. ಹಾಗಾಗಿ ಸಾಕ್ಷ್ಯದ ಕಾರಣಕ್ಕಾಗಿ ಈ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಟೋಗಳು, ಸಂದೇಶಗಳು ಮುಂತಾದ ವ್ಯಕ್ತಿಯ ಹೆಜ್ಜೆಯ ಗುರುತುಗಳ ಸುಯೋಜಿತ ದಾಖಲೆಗಳನ್ನು ಬಳಸಬಹುದು, ಇದನ್ನು ನ್ಯಾಯಾಲಯಗಳು ಪರಿಗಣಿಸಬಹುದು ಎಂದು ಹೇಳಿದರು.
ತನ್ನ ಪತ್ನಿಗೆ ತಿಂಗಳಿಗೆ ₹ 3,000 ಮಧ್ಯಂತರ ಜೀವನಾಂಶ ನೀಡುವಂತೆ ಮತ್ತು ಒಂದು ಬಾರಿ ₹ 10,000 ವ್ಯಾಜ್ಯ ವೆಚ್ಚವನ್ನು ಪಾವತಿಸಲು ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಪತ್ನಿಯನ್ನು ಪ್ರತಿನಿಧಿಸಿದ್ದ ವಕೀಲರು ವ್ಯಭಿಚಾರದ ಮನವಿಯನ್ನು ಮಧ್ಯಂತರ ಜೀವನಾಂಶದ ಹಂತದಲ್ಲಿ ಪ್ರಸ್ತಾಪಿಸುವಂತಿಲ್ಲ ಎಂದು ವಾದಿಸಿದ್ದರು. ವ್ಯಭಿಚಾರದ ಆರೋಪವನ್ನು ಸಾಬೀತುಪಡಿಸಲು ಪತಿಗೆ ಯಾವುದೇ ಸಾಕ್ಷ್ಯವಿಲ್ಲ ಎನ್ನಲಾಗಿತ್ತು.
ವಾದ ಆಲಿಸಿದ ನ್ಯಾಯಾಲಯ ಮಧ್ಯಂತರ ಜೀವನಾಂಶ ಮತ್ತು ವ್ಯಾಜ್ಯ ವೆಚ್ಚ ಭರಿಸುವಂತೆ ಪತ್ನಿ ಸಲ್ಲಿಸುವ ಅರ್ಜಿಯನ್ನು ವಿರೋಧಿಸಲು ಪತಿ, ಪತ್ನಿಯ ವ್ಯಭಿಚಾರದ ವಿಚಾರವನ್ನು ಪ್ರಸ್ತಾಪಿಸಬಹುದು ಎಂದಿತು.
ಇದೇ ವೇಳೆ ಇಬ್ಬರೂ ಸಂಗಾತಿಗಳು ಪರಸ್ಪರರ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದ್ದು ಇಬ್ಬರಿಗೂ ಸಮಾನ ಹಕ್ಕುಗಳಿವೆ ಎಂತಲೂ ನ್ಯಾಯಾಲಯ ಹೇಳಿದೆ.
ಹೇಗೆ ಹೆಂಡತಿಯು ತನ್ನ ಸಂಗಾತಿಯ ಅನುಗ್ರಹ ಮತ್ತು ಅನುಕಂಪಗಳಿಗಷ್ಟೇ ಸೀಮಿತಳಾದ ಅಸಹಾಯಕ ವ್ಯಕ್ತಿಯಲ್ಲವೋ, ಅದೇ ರೀತಿ ಪತಿಯು ಸಹ ಕೇವಲ ಪುರುಷ ಎಂಬ ಒಂದೇ ಕಾರಣಕ್ಕಾಗಿ ನಿರ್ದಿಷ್ಟ ಅಥವಾ ಎಲ್ಲಾ ಸಂದರ್ಭಗಳಲ್ಲಿಯೂ ಆರ್ಥಿಕ ಕರ್ತವ್ಯದ ಹೊರೆ ಹೊರುವವನು ಎಂದು ಭಾವಿಸಲಾಗದು ಎಂದು ನ್ಯಾಯಾಲಯ ಹೇಳಿತು.
ಹೇಗೆ ಹೆಂಡತಿಯು ತನ್ನ ಸಂಗಾತಿಯ ಅನುಗ್ರಹ ಮತ್ತು ಅನುಕಂಪಗಳಿಗಷ್ಟೇ ಸೀಮಿತಳಾದ ಅಸಹಾಯಕ ವ್ಯಕ್ತಿಯಲ್ಲವೋ, ಅದೇ ರೀತಿ ಪತಿಯು ಸಹ ಕೇವಲ ಪುರುಷ ಎಂಬ ಒಂದೇ ಕಾರಣಕ್ಕಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಆರ್ಥಿಕ ಕರ್ತವ್ಯದ ಹೊರೆ ಹೊರುವವನು ಎಂದು ಭಾವಿಸಲಾಗದು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
ಪ್ರಸ್ತುತ ಪ್ರಕರಣದಲ್ಲಿ, ಪತಿ ಸಾಕ್ಷ್ಯವಾಗಿ ಸಲ್ಲಿಸಿದ ಛಾಯಾಚಿತ್ರಗಳನ್ನು ನೋಡಿದ ನ್ಯಾಯಾಲಯ ಅವರ ಪತ್ನಿ ಪರ ಪುರುಷನ ಜೊತೆ ಒಂದು ರೀತಿಯ ಸಂಬಂಧ ಹೊಂದಿರುವುದನ್ನು ಇದು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.
ಆ ವ್ಯಕ್ತಿಯೊಂದಿಗೆ ವಾಸಿಸುತ್ತಿರುವುದನ್ನು ಆಕೆ ಖುದ್ದು ಒಪ್ಪಿಕೊಂಡಿರುವುದನ್ನೂ ಗಮನಿಸಿದ ನ್ಯಾಯಾಲಯ ಆತನೊಂದಿಗೆ ಯಾವ ನೆಲೆಯಲ್ಲಿ ವಾಸಿಸುತ್ತಿದ್ದಾಳೆ ಎಂಬುದಕ್ಕೆ ಆಕೆಯ ಬಳಿ ಸಮರ್ಥನೆ ಇಲ್ಲ ಎಂದಿತು.
ಅಂತೆಯೇ ಪತಿಯಿಂದ ಮಧ್ಯಂತರ ಜೀವನಾಂಶ ಮತ್ತು ವ್ಯಾಜ್ಯ ವೆಚ್ಚ ಪಡೆಯಲು ಆಕೆ ಅರ್ಹಳಲ್ಲ ಎಂದು ತೀರ್ಪು ನೀಡಿತು. ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ಅದು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿತು.