ತನ್ನ ಟೈರ್ ಉತ್ಪನ್ನ ಹೊಮ್ಮಿಸುವ ಗುಲಾಬಿ ಪರಿಮಳವನ್ನು ವಾಣಿಜ್ಯ ಚಿಹ್ನೆಯಾಗಿ ಪರಿಗಣಿಸಬೇಕು ಎಂದು ಕೋರಿ ಸುಮಿಟೋಮೊ ರಬ್ಬರ್ ಇಂಡಸ್ಟ್ರೀಸ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ಪುರಸ್ಕರಿಸಿದೆ.
ಈ ವಾಣಿಜ್ಯ ಚಿಹ್ನೆ 1999ರ ವಾಣಿಜ್ಯ ಚಿಹ್ನೆ ಕಾಯಿದೆಯ ಸೆಕ್ಷನ್ 2(1)(ಜಡ್ ಬಿ)ಯ ಕಾನೂನು ಮಾನದಂಡಗಳನ್ನು ಅದರಲ್ಲಿಯೂ ವೈಶಿಷ್ಟ್ಯತೆ ಮತ್ತು ಚಿತ್ರಾತ್ಮಕ ಪ್ರಾತಿನಿಧ್ಯವನ್ನು (ಗ್ರಾಫಿಕಲ್ ರೆಪ್ರಸೆಂಟೇಷನ್) ಪೂರೈಸುತ್ತದೆ ಎಂದು ಪೇಟೆಂಟ್‌ಗಳು, ವಿನ್ಯಾಸಗಳು ಹಾಗೂ ವಾಣಿಜ್ಯ ಚಿಹ್ನೆಗಳ ಮಹಾ ನಿಯಂತ್ರಕ ಅಧಿಕಾರಿ ಪ್ರೊ. ಉನ್ನತ್ ಪಿ ಪಂಡಿತ್ ಅವರು ನವೆಂಬರ್ 21ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಇಂತಹ ಅರ್ಜಿ ಸಲ್ಲಿಸಿದಾಗ ರಿಜಿಸ್ಟ್ರಿ ಆಕ್ಷೇಪ ವ್ಯಕ್ತಪಡಿಸಿತ್ತಾದರೂ ಪ್ರಕರಣದ ನಾವೀನ್ಯತೆ ಪರಿಗಣಿಸಿ ಹಿರಿಯ ಬೌದ್ಧಿಕ ವಕೀಲರಾದ ಪ್ರವೀಣ್ ಆನಂದ್ ಅವರನ್ನು ಪ್ರಕರಣದ ಅಮಿಕಸ್ ಕ್ಯೂರಿಯಾಗಿ ರಿಜಿಸ್ಟ್ರಿ ನೇಮಿಸಿತ್ತು. ಅಲಾಹಾಬಾದ್ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸಂಶೋಧಕರು ಅಭಿವೃದ್ಧಿಪಡಿಸಿದ ಚಿತ್ರಾತ್ಮಕ ಪ್ರಾತಿನಿಧ್ಯ ಒಳಗೊಂಡಂತೆ ಅಮಿಕಸ್ ಅವರು ವಿವರವಾದ ವೈಜಾನಿಕ ಮತ್ತು ತುಲನಾತ್ಮಕ ವರದಿ ಸಲ್ಲಿಸಿದರು.
ಉತ್ಪನ್ನ ನಾವೀನ್ಯತೆ ತಂತ್ರದ ಭಾಗವಾಗಿ 1995 ರಿಂದ ತನ್ನ ತನ್ನ ಟೈರ್ಗಳಿಗೆ ಗುಲಾಬಿಯ ಪರಿಮಳ ಸೇರಿಸುತ್ತ ಬಂದಿರುವುದಾಗಿ ಸುಮಿಟೋಮೊ ಕಂಪನಿ ಹೇಳಿದೆ. ಇಂಗ್ಲೆಂಡ್‌ನಲ್ಲಿ ತನಗೆ ಈಗಾಗಲೇ ಘ್ರಾಣ ಸಂಬಂಧ ವಾಣಿಜ್ಯ ಚಿಹ್ನೆ ಒದಗಿಸಲಾಗಿದೆ. ಗುಲಾಬಿ ಪರಿಮಳ ಜಗತ್ತಿನಾದತ ಎಲ್ಲರಿಗೂ ಸುಪರಿಚಿತ. ಟೈರ್ ರೀತಿಯ ಅನ್ಯ ಉತ್ಪನ್ನಕ್ಕೆ ಅದನ್ನು ಅನ್ವಯಿಸಿದಾಗ ತಕ್ಷಣವೇ ಅದು ಬ್ರಾಂಡ್ ಮೂಲವನ್ನು ಹೇಳುತ್ತದೆ ಎಂದು ಅದು ಪ್ರತಿಪಾದಿಸಿತ್ತು.
ಅಮಿಕಸ್ ಪ್ರವೀಣ್ ಆನಂದ್ ಅವರು, ಭಾರತದಲ್ಲಿ ಘ್ರಾಣ ಸಂಬಂಧಿ ವಾಣಿಜ್ಯ ಚಿಹ್ನೆಯನ್ನು ಭಾರತೀಯ ಕಾನೂನು ಸ್ಪಷ್ಟವಾಗಿ ಮಾನ್ಯ ಮಾಡಿಲ್ಲ ಅಥವಾ ನಿಷೇಧಿಸಿಯೂ ಇಲ್ಲ. ಕಾನೂನು ಮಾನದಂಡಗಳನ್ನು ಪೂರೈಸಿದರೆ, ವಾಣಿಜ್ಯ ಚಿಹ್ನೆ ಎಂಬ ಪದದ ವಿಸ್ತೃತ ಮತ್ತು ಒಳಗೊಳ್ಳುವಿಕೆ ವ್ಯಾಖ್ಯಾನ ಘ್ರಾಣ ಸಂಬಂಧಿ ವಾಣಿಜ್ಯ ಚಿಹ್ನೆಗಳಿಗೂ ಅನ್ವಯಿಸುತ್ತದೆ. ಗುಲಾಬಿ ಪರಿಮಳ ಮತ್ತು ಟೈರ್‌ಗಳ ನಡುವೆ ಸಹಜ ನಂಟಿಲ್ಲದೆ ಇರುವುದರಿಂದ ಸ್ವಭಾವತಃ ವಿಶಿಷ್ಟವಾಗಿದೆ ಈ ಹಿನ್ನೆಲೆಯಲ್ಲಿ ಈ ಹಿಂದೆ ಪರೀಕ್ಷಾ ವರದಿಯಲ್ಲಿ ಎತ್ತಲಾಗಿದ್ದ ಆಕ್ಷೇಪಗಳನ್ನು ತೆಗೆದುಹಾಕಬಹುದು ಎಂದು ತಿಳಿಸಿದರು.
ವಾಣಿಹ್ಯ ಚಿಹ್ನೆ ನೀಡುವುದಕ್ಕೆ ಕಾನೂನಿನ ಪ್ರಕಾರ ಚಿತ್ರಾತ್ಮಕ ಪ್ರಾತನಿಧ್ಯ ಇರಬೇಕು ಎಂಬ ಸವಾಲಿಗೆ ಉತ್ತರವಾಗಿ ಅರ್ಜಿದಾರರು ಐಐಐಟಿ ಅಲಹಾಬಾದ್‌ನ ಮೂವರು ಸಂಶೋಧಕರು ಅಭಿವೃದ್ಧಿಪಡಿಸಿದ್ದ ವೈಜ್ಞಾನಿಕ ಚಿತ್ರಾತ್ಮಕ ಪ್ರಾತನಿಧ್ಯವನ್ನು ಬಳಸಿದ್ದಾರೆ. ಇದು ಗುಲಾಬಿ ಪರಿಮಳವನ್ನು ಏಳು ಆಯಾಮಗಳ ವೆಕ್ಟಾರ್ ರೂಪದಲ್ಲಿ ಚಿತ್ರಿಸುತ್ತದೆ.
ಸಾಮಾನ್ಯ ಚಿತ್ರಾತ್ಮಕ ಪ್ರಾತಿಧ್ಯಗಳು ಅಕ್ಷರ, ಲಾಂಛನ ಹಾಗೂ ಸಾಧನಗಳ ಕುರಿತು ಹೇಳುತ್ತಿದ್ದವು ಆದರೆ ಪರಿಮಳವನ್ನು ಗ್ರಾಫಿಕ್ ರೂಪದಲ್ಲಿ ಒದಗಿಸುತ್ತಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಸಲ್ಲಿಸಲಾದ ವೈಜ್ಞಾನಿಕ ಪ್ರಾತಿನಿಧ್ಯ ಪರಿಮಳದ ಸ್ಪಷ್ಟತೆ, ನಿಖರತೆ, ಮುಕ್ತತೆ ಹಾಗೂ ಪರಿಪೂರ್ಣತೆ, ಅರ್ಥವಂತಿಕೆ ವಸ್ತುನಿಷ್ಠತೆ ಹಾಗೂ ಬಾಳಿಕೆಯ ಎಲ್ಲಾ ಮಾನದಂಡಗಳನ್ನು ಪೂರೈಸುತ್ತದೆ. ಇದು ವಾಸನೆಯ ಘಟಕಾಂಶ ಮತ್ತು ಅವುಗಳ ಸಾಪೇಕ್ಷ ತೀವ್ರತೆಯನ್ನು ಸ್ಪಷ್ಟವಾಗಿ ಹೇಳುತ್ತದೆ. ಪರಿಣಾಮ ಅಧಿಕಾರಿಗಳು ಮತ್ತು ಸಾರ್ವಜರನಿಕರು ವಾಣಿಜ್ಯ ಚಿಹ್ನೆ ಯಾವ ಪರಿಮಳವನ್ನು ರಕ್ಷಿಸುತ್ತಿದೆ ಎಂಬುದನ್ನು ನಿಖರ್ವಾಗಿ ಅರ್ಥೈಸಿಕೊಳ್ಳಲು ಅನುವು ಮಡಿಕೊಡುತ್ತದೆ ಎಂದು ರಿಜಿಸ್ಟ್ರಿ ತಿಳಿಸಿದೆ.
ಹೀಗಾಗಿ ಟೈರ್‌ನ ವಾಸನೆ ಮತ್ತು ಗುಲಾಬಿಯ ಪರಿಮಳ ಎರಡೂ ಅನನ್ಯವಾಗಿದ್ದು ಈ ವ್ಯತಿರಿಕತತೆಯಿಂದಾಗಿ ಗ್ರಾಹಕರು ನೇರವಾಗಿ ಪರಿಮಳವನ್ನು ಸುಮಿಟೋಮೊ ಕಂಪೆನಿಯ ಉತ್ಪನ್ನದೊಂದಿಗೆ ನಂಟುಕಲ್ಪಿಸಿಕೊಳ್ಳಬಹುದು ಇದು ಕಾನೂನುಬದ್ಧವಾದ ವರ್ಗೀಕರಣದ ಸಾಮರ್ಥ್ಯದ ಷರತ್ತನ್ನು ಈಡೇರಿಸುತ್ತದೆ ಎಂದು ಹೇಳಿದೆ. ಸುಮಿಟೋಮೊ ಪರವಾಗಿ ಸಿರಿಲ್ ಅಮರ್‌ಚಂದ್ ಮಂಗಲ್‌ದಾಸ್ ಕಾನೂನು ಸಂಸ್ಥೆಯ ವಕೀಲರು ವಾದ ಮಂಡಿಸಿದರು.
[ಆದೇಶದ ಪ್ರತಿ]