

ಪವನ್ ಜಂಬಗಿ ಒಡೆತನದ ದೆಹಲಿ ಮೂಲದ 'ಕರ್ನಾಟಿಕ್ ಕೆಫೆ'ಯ ನೋಂದಾಯಿತ ವಾಣಿಜ್ಯ ಚಿಹ್ನೆ ಉಲ್ಲಂಘಿಸುವುದರಿಂದ ಬೆಂಗಳೂರು ಮೂಲದ ಲೆಮನ್‌ಪೆಪ್ಪರ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ 'ಕರ್ನಾಟಿಕ್' ವಾಣಿಜ್ಯ ಚಿಹ್ನೆ ಬಳಸದಂತೆ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಶಾಶ್ವತ ನಿರ್ಬಂಧ ವಿಧಿಸಿದೆ.
ಅಕ್ಟೋಬರ್ 29 ರಂದು ಜಿಲ್ಲಾ ನ್ಯಾಯಾಧೀಶರಾದ (ವಾಣಿಜ್ಯ ವಿಭಾಗ) ನೀಲಂ ಸಿಂಗ್ ಅವರು ಈ ಆದೇಶ ಹೊರಡಿಸಿದರು.
ಪ್ರತಿವಾದಿ, ಅದರ ನಿರ್ದೇಶಕರು, ನೌಕರರು, ಏಜೆಂಟರು, ಫ್ರಾಂಚೈಸಿಗಳು, ಪ್ರತಿನಿಧಿಗಳು ಮತ್ತು ಅದರ ಪರ ಕಾರ್ಯನಿರ್ವಹಿಸುವ ಯಾರೇ ಆಗಿರಲಿ — ರೆಸ್ಟರಂಟ್ ಅಥವಾ ಅದರ ಸಂಬಂಧಿತ ಸೇವೆಗಳಿಗೆ ಕರ್ನಾಟಿಕ್ ಚಿಹ್ನೆ ಅಥವಾ ಅರ್ಜಿದಾರರ ವಾಣಿಜ್ಯ ಚಿಹ್ನೆಯಾದ ಕರ್ನಾಟಿಕ್ ಕೆಫೆಯನ್ನು ಹೋಲುವ ಇಲ್ಲವೇ ಮೋಸಗೊಳಿಸುವ ರೀತಿಯಲ್ಲಿ ಏಕರೂಪವಾಗಿರುವ ಹೆಸರು, ಲಾಂಛನ, ಚಿಹ್ನೆ ಅಥವಾ ಡೊಮೇನ್ ಹೆಸರು ಬಳಸದಂತೆ ಶಾಶ್ವತವಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.
ಏಪ್ರಿಲ್ 2019 ರಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ವರ್ಷ ನ್ಯಾಯಾಲಯ ಕರ್ನಾಟಿಕ್ ಪದ ಬಳಸದಂತೆ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ ಸೂಕ್ತ ಸಮಯಕ್ಕೆ ಬೆಂಗಳೂರಿನ ಸಂಸ್ಥೆ ಲಿಖಿತ ಹೇಳಿಕೆ ನೀಡದೆ ಇದ್ದುದರಿಂದ ಅದು ತನ್ನ ಪರವಾಗಿ ವಾದ ಮಂಡಿಸುವ ಅವಕಾಶವನ್ನು ಮಾರ್ಚ್ 5, 2020ರಂದು ಕಳೆದುಕೊಂಡಿತ್ತು. ನವೆಂಬರ್ 2022ರಲ್ಲಿ ಪ್ರತಿವಾದಿಗಳ ವಕೀಲರು ಕರ್ನಾಟಿಕ್ ಹೆಸರನ್ನು ಭವಿಷ್ಯದಲ್ಲಿ ಬಳಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸಿದರು.
ಅರ್ಜಿದಾರರ ವಾದವನ್ನು ಪ್ರಶ್ನಿಸಿಲ್ಲ ಮತ್ತು ಪ್ರತಿವಾದಿಗಳೇ ಹೇಳಿಕೊಂಡಿರುವಂತೆ ಉಲ್ಲಂಘನೆ ನಡೆದಿದೆ ಎಂದು ನ್ಯಾಯಾಲಯ ತಿಳಿಸಿತು.
ಕರ್ನಾಟಿಕ್ ಕೆಫೆಗೆ ಶಾಸನಬದ್ಧ ವಾಣಿಜ್ಯ ಚಿಹ್ನೆಯ ಹಕ್ಕು ಇರುವುದನ್ನು ಅದು ಯಶಸ್ವಿಯಾಗಿ ಸಾಬೀತುಪಡಿಸಿದ್ದು ಹಿಂದಿನಿಂದಲೂ ಆ ವಾಣಿಜ್ಯ ಚಿಹ್ನೆಯನ್ನು ಅದು ನಿರಂತರವಾಗಿ ಬಳಸಿಕೊಂಡು ಬಂದಿದ್ದು ಅದರ ಬ್ರಾಂಡ್ ಮೌಲ್ಯ ಸಾಬೀತಾಗಿದೆದೆ. ಪ್ರತಿವಾದಿಯಾದ ಬೆಂಗಳೂರಿನ ಸಂಸ್ಥೆ ಅದೇ ರೀತಿಯ ಪದ ಬಳಸಿದರೆ ಗೊಂದಲ ಉಂಟಾಗುತ್ತದೆ ಎಂಬುದನ್ನು ಅರ್ಜಿದಾರರು ಯಶಸ್ವಿಯಾಗಿ ಸಾಬೀತುಗೊಳಿಸಿದ್ದಾರೆ ಎಂದು ಅದು ವಿವರಿಸಿದೆ.
ಅಂತೆಯೇ ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ VIII ನಿಯಮ 10 ನ್ನು ಅನ್ವಯಿಸಿದ ನ್ಯಾಯಾಧೀಶರು ನಿರ್ವಿವಾದಿತ ಅರ್ಜಿಗಳು ಮತ್ತು ದಾಖಲೆಗಳ ಆಧಾರದ ಮೇಲೆ ತೀರ್ಪು ನೀಡಬಹುದು ಎಂದು ಅಭಿಪ್ರಾಯಪಟ್ಟರು.
ಹೀಗಾಗಿ 2019 ರಲ್ಲಿ ನೀಡಲಾದ ಮಧ್ಯಂತರ ತಡೆಯಾಜ್ಞೆಯನ್ನು ಅಖೈರುಗೊಳಿಸಿದ ನ್ಯಾಯಾಲಯ ನಾಲ್ಕು ವಾರಗಳಲ್ಲಿ ಅರ್ಜಿದಾರರಿಗೆ www.carnaticrestaurant.com ಡೊಮೇನ್ ಹೆಸರು ವರ್ಗಾಯಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.
ಅರ್ಜಿದಾರರ ಬ್ರಾಂಡ್ ಮೌಲ್ಯ ಮತ್ತು ಅವರ ವರ್ಚಸ್ಸಿಗೆ ಆಗಿರುವ ನಷ್ಟಕ್ಕೆ ಪರಿಹಾರವಾಗಿ ₹50,000 ಹಾಗೂ ದಂಡದ ರೂಪದಲ್ಲಿ ₹10,000 ಪಾವತಿಸುವಂತೆ ಅದು ಬೆಂಗಳೂರು ಸಂಸ್ಥೆಗೆ ನಿರ್ದೇಶಿಸಿತು.