Digital Eco-System Disabled Friendly 
ಸುದ್ದಿಗಳು

ವಿಕಲಚೇತನ ಸ್ನೇಹಿ ಆ್ಯಪ್: ವಾಟ್ಸಾಪ್ ಸಫಲ ಉಳಿದ ಒಂಬತ್ತು ವಿಫಲ ಎಂದ 'ವಿಧಿ' ವರದಿ

ಅಂಗವಿಕಲರಿಗೆ ಪರಿಹರಿಸಿಕೊಡಬೇಕಿರುವ ಹಲವು ಬ್ಲಾಕಿಂಗ್ ಸಮಸೆಗಳನ್ನು ಪೇಟಿಎಂ ಮತ್ತು ಫ್ಲಿಪ್‌ಕಾರ್ಟ್‌ ನಿರ್ದಿಷ್ಟವಾಗಿ ಹೊಂದಿವೆ ಎಂದು ವರದಿ ತಿಳಿಸಿದೆ.

Bar & Bench

ವ್ಯಾಪಕವಾಗಿ ಬಳಸಲಾಗುವ ಹತ್ತು ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್ ಮಾತ್ರ, ಅಂಗವೈಕಲ್ಯವಿರುವ ವ್ಯಕ್ತಿಗಳಿಗೆ ಹೆಚ್ಚು ಪೂರಕವಾಗಿದೆ ಎಂದು ವಿಧಿ ಕಾನೂನು ನೀತಿ ಕೇಂದ್ರದ ವರದಿ ಹೇಳಿದೆ.

ಫೋನ್‌ಪೇ, ಪೇಟಿಎಂ, ಸ್ವಿಗ್ಗಿ, ಜೊಮ್ಯಾಟೊ, ಅಮೆಜಾನ್‌, ಫ್ಲಿಪ್‌ಕಾರ್ಟ್‌, ವಾಟ್ಸಾಪ್‌, ಟೆಲಿಗ್ರಾಂ, ಉಬರ್‌ ಹಾಗೂ ಓಲಾ ಆ್ಯಪ್‌ಗಳ ಸಮೀಕ್ಷೆ ನಡೆಸಿ ವಿಧಿ ಈ ವರದಿ ತಯಾರಿಸಿದೆ.

ಐ-ಸ್ಟೆಮ್ ಮತ್ತು ಮಿಷನ್ ಆಕ್ಸೆಸಿಬಿಲಿಟಿ ಸಹಯೋಗದಲ್ಲಿ ಈ ವಿಶಿಷ್ಟ ಅಧ್ಯಯನ ನಡೆದಿದ್ದು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಹತ್ತು ಅಪ್ಲಿಕೇಷನ್‌ ಬಳಕೆಯ ಸಾಕ್ಷ್ಯಾಧರಿತ ಮೌಲ್ಯಮಾಪನವನ್ನು ಇದು ಒಳಗೊಂಡಿದೆ.

ಪೇಟಿಎಂ ಮತ್ತು ಫ್ಲಿಪ್‌ಕಾರ್ಟ್‌ ನಿರ್ದಿಷ್ಟವಾಗಿ ವಿಕಲಚೇತನರಿಗೆ ಪರಿಹರಿಸಿಕೊಡಬೇಕಿರುವ ಹಲವು ಬ್ಲಾಕಿಂಗ್‌ ಸಮಸೆಗಳನ್ನು ಹೊಂದಿವೆ ಎಂದು ವರದಿ ತಿಳಿಸಿದೆ.

ಇದಲ್ಲದೆ, ಆಂಡ್ರಾಯ್ಡ್‌ ಮತ್ತು ಐಒಎಸ್‌  ಕಾರ್ಯಾಚರಣಾ ವ್ಯವಸ್ಥೆಗಳೆರಡರಲ್ಲೂ ಬ್ಯಾಕ್‌ಗ್ರೌಂಡ್‌ (ಸ್ಕ್ರೀನ್‌ ಹಿನ್ನೆಲೆ) ಮತ್ತು ಫೋರ್‌ಗ್ರೌಂಡ್‌ (ಸ್ಕ್ರೀನ್‌ ಮುನ್ನೆಲೆ) ನಡುವಿನ ಕನಿಷ್ಠ ಬಣ್ಣದ ಕಾಂಟ್ರಾಸ್ಟ್‌ ಅನುಪಾತ 4.5:1 ಅನ್ನು ಪೂರೈಸದ ಅಂಶಗಳನ್ನು ಹಾಗೂ ಅತಾರ್ಕಿಕ ಟ್ಯಾಬ್ ಅನುಕ್ರಮಗಳು ಮತ್ತು ಬಳಕೆಯ ಹೆಸರುಗಳನ್ನು ಹೊಂದಿರದ ಅಂಶಗಳನ್ನು ಇವು ಒಳಗೊಂಡಿವೆ. ಜೊತೆಗೆ ಯಾವುದೇ ಅಪ್ಲಿಕೇಶನ್‌ಗಳನ್ನು ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಬಳಸುವ ವ್ಯವಸ್ಥೆ ಇಲ್ಲ ಎಂದು ವರದಿ ವಿವರಿಸಿದೆ.

ಸರ್ಕಾರದ್ದೇ ಇರಲಿ ಅಥವಾ ಖಾಸಗಿಯೇ ಇರಲಿ ದೇಶದ ಪ್ರತಿಯೊಬ್ಬ ಸೇವಾ ಪೂರೈಕೆದಾರರು ಅಂಗವಿಕಲರ ಹಕ್ಕುಗಳ ಕಾಯಿದೆಯಡಿಯಲ್ಲಿ ತಮ್ಮ ಸೇವೆಗಳನ್ನು ವಿಕಲಚೇತನ ಸ್ನೇಹಿಯಾಗಿ ಮಾಡಬೇಕೆಂದು ಕಡ್ಡಾಯಗೊಳಿಸಲಾಗಿದೆ ಮತ್ತು ಪ್ರಸ್ತುತ ದೈನಂದಿನ ಚಟುವಟಿಕೆಗಳಿಗೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂಬ ವಾಸ್ತವಾಂಶದ ಹೊರತಾಗಿಯೂ ಈ ಲೋಪಗಳು ಉಳಿದುಕೊಂಡಿವೆ ಎಂದು ಅದು ಹೇಳಿದೆ.

ಸಂಶೋಧಕರು ವೆಬ್ ಕಂಟೆಂಟ್ ಆಕ್ಸೆಸಿಬಿಲಿಟಿ ಗೈಡ್‌ಲೈನ್ಸ್ (ಡಬ್ಲ್ಯೂಸಿಎಜಿ) ಆಧಾರದ ಮೇಲೆ ಅಪ್ಲಿಕೇಶನ್‌ಗಳನ್ನು ಹೆಚ್ಚು ಬಳಕೆಯ ಇಲ್ಲವೇ ಮಧ್ಯಮ ಅಥವಾ ಕಡಿಮೆ ಬಳಕೆಯವು ಎಂದು ಗುರುತಿಸಿದ್ದಾರೆ.

Making the Digital Ecosystem Disabled Friendly - RatingVidhi Centre for Legal Policy

ಮೇಕಿಂಗ್ ದಿ ಡಿಜಿಟಲ್ ಇಕೋಸಿಸ್ಟಮ್ ಡಿಸೇಬಲ್ಡ್ ಫ್ರೆಂಡ್ಲಿ ಎಂಬ ಶೀರ್ಷಿಕೆಯ ವರದಿಗೆ ಎಚ್‌ಟಿ ಪರೇಖ್ ಫೌಂಡೇಶನ್ ಮತ್ತು ಜಿಎಸ್‌ಎಂಎ ಇನ್ನೋವೇಶನ್ ಫಂಡ್ ಧನಸಹಾಯ ಮಾಡಿದೆ. ಇದನ್ನು ಜನವರಿ 13, 2023 ರಂದು ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾರತ ಸರ್ಕಾರದ ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಆರಂಭಿಸಿದರು.

ಡಿಜಿಟಲ್ ವ್ಯವಸ್ಥೆಯನ್ನು ಹೆಚ್ಚು ವಿಕಲಚೇತನರ ಸ್ನೇಹಿಯನ್ನಾಗಿ ಮಾಡಲು ಮೂವತ್ತು ಸಮಾನ ಮನಸ್ಕ ವ್ಯಕ್ತಿಗಳ ಆನ್‌ಲೈನ್ ಸಮುದಾಯವನ್ನು ಸ್ಥಾಪಿಸಲಾಗಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಯೋಜನೆಯ 2ನೇ ಹಂತವನ್ನು ಆರಂಭಿಸಲಾಗುತ್ತಿದೆ.

ಈ ಸಂಶೋಧನೆಗಳ ಆಧಾರದ ಮೇಲೆ ನಿಜವಾದ ಒಳಗೊಳ್ಳುವಿಕೆಯ ಡಿಜಿಟಲ್‌ ವ್ಯವಸ್ಥೆಯನ್ನು ಸಾಕಾರಗೊಳಿಸಲು ಜಾಲತಾಣ ಮತ್ತು ಅಪ್ಲಿಕೇಷನ್‌ಗಳನ್ನು ಡಬ್ಲ್ಯೂಸಿಎಜಿ ಅಥವಾ ಬ್ಯೂರೋ ಆಪ್‌ ಇಂಡಿಯನ್‌ ಸ್ಟಾಂಡರ್ಡ್ಸ್‌ ಮಾನದಂಡಗಳಿಗೆ ಅನುಗುಣವಾಗಿ  ವಿನ್ಯಾಸಗೊಳಿಸಬೇಕು ಎಂದು ವಿಧಿ ಸಲಹೆ ನೀಡಿದೆ.