ಕೊಲ್ಕತ್ತಾದ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯ ವರದಿ ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿದೆ.
ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ನೀಡಬಹುದು. ವರದಿ ಅಧ್ಯಯನ ಮಾಡಿ ನಂತರ ಮುಂದಿನ ಆದೇಶ ನೀಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಸ್ಮಿತಾ ದಾಸ್ ಡೇ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಮಾಧ್ಯಮಗಳು ಪ್ರಕರಣದ ವರದಿ ಮಾಡುವಾಗ ಸಂತ್ರಸ್ತೆಯ ಗುರುತು ಬಹಿರಂಗವಾಗದಂತೆ ಜಾಗ್ರತೆ ವಹಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.
ಅಧಿಕೃತ ವ್ಯಾಸಂಗ ಅವಧಿ ಮುಗಿದ ಬಳಿಕವೂ, ಕಾಲೇಜಿನ ಕಾರ್ಯಚಟುವಟಿಕೆಯ ಅವಧಿಯ ನಂತರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ವಿದ್ಯಾರ್ಥಿಯನ್ನು ಕಾಲೇಜು ಕ್ಯಾಂಪಸ್‌ಗೆ ಪ್ರವೇಶ ಕಲ್ಪಿಸಿದ್ದು ಹೇಗೆ ಎಂದು ಪೀಠ ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯನ್ನು ಪ್ರಶ್ನಿಸಿತು.
ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ವಕೀಲೆ ಸೌಮಾ ಸುಬ್ರಾ ರೇ ಅವರು ಪಿಐಎಲ್ ಸಲ್ಲಿಸಿದ್ದರು.
ವಿದ್ಯಾರ್ಥಿ ಸಂಘಗಳ ಕಚೇರಿ ಬಂದ್
ಇದೇ ವೇಳೆ ಪಶ್ಚಿಮ ಬಂಗಾಳದ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿರುವ ವಿದ್ಯಾರ್ಥಿ ಸಂಘಗಳ ಕಚೇರಿಗಳನ್ನು ಮುಚ್ಚುವಂತೆ ಅದು ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಅರ್ಜಿಯ ವಿಚಾರಣೆ ವೇಳೆ ಆದೇಶಿಸಿದೆ.
ಅತ್ಯಾಚಾರ ನಡೆದಿದ್ದು ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಸೇರಿದ ಕೋಣೆಯಲ್ಲಿ. ಅಲ್ಲದೆ 2017ರಿಂದ ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆಗಳು ನಡೆದಿಲ್ಲವಾದರೂ, ಸಂಘದ ಕಚೇರಿಗಳು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರಿ ವಕೀಲ ಸಯಾನ್ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದರು.