Karnataka High Court 
ಸುದ್ದಿಗಳು

ಇಂಟರ್ನ್‌ ಮೇಲೆ ಹಲ್ಲೆ, ನೀರಿನ ಬಾಟಲ್‌ ಎಸೆದ ಆರೋಪ: ವಕೀಲರ ವಿರುದ್ಧದ ಪ್ರಕರಣ ವಜಾ ಮಾಡಿದ ಹೈಕೋರ್ಟ್‌

ವಕೀಲ ಜೆ ವಸಂತ್‌ ಆದಿತ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ತನಿಖೆಯು ಪ್ರಗತಿಯಲ್ಲಿರುವುದರಿಂದ ಪ್ರಕರಣ ವಜಾ ಮಾಡಲಾಗದು ಎಂದು ಏಪ್ರಿಲ್‌ನಲ್ಲಿ ಹೈಕೋರ್ಟ್‌ ಹೇಳಿತ್ತು.

Bar & Bench

ಖಾಸಗಿ ಕಾನೂನು ಸಂಸ್ಥೆಯೊಂದರಲ್ಲಿ ತರಬೇತಿ ಅವಧಿಯಲ್ಲಿದ್ದ ಸಹಾಯಕಿ (ಇಂಟರ್ನ್‌) ಮೇಲೆ ಹಲ್ಲೆ ನಡೆಸಿರುವುದು ಮತ್ತು ಆಕೆಗೆ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರ ವಿರುದ್ಧದ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ವಕೀಲ ಜೆ ವಸಂತ್‌ ಆದಿತ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ. ತನಿಖೆಯು ಪ್ರಗತಿಯಲ್ಲಿರುವುದರಿಂದ ಪ್ರಕರಣ ವಜಾ ಮಾಡಲಾಗದು ಎಂದು ಏಪ್ರಿಲ್‌ನಲ್ಲಿ ಹೈಕೋರ್ಟ್‌ ಹೇಳಿತ್ತು.

ಅರ್ಜಿದಾರ ವಕೀಲ ಮತ್ತು ದೂರುದಾರೆ ಕಾನೂನು ವಿದ್ಯಾರ್ಥಿನಿಯು ಪ್ರಕರಣ ಬಾಕಿ ಇದ್ದಾಗ ರಾಜೀ ಮಾಡಿಕೊಂಡಿದ್ದಾರೆ. ಕರ್ನಾಟಕ ವಕೀಲರ ಪರಿಷತ್‌ನಲ್ಲಿ ವಕೀಲರ ವಿರುದ್ಧ ದಾಖಲಿಸಿದ್ದ ದೂರನ್ನು ವಿದ್ಯಾರ್ಥಿನಿಯು ಹಿಂಪಡೆದಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಉಭಯ ಪಕ್ಷಕಾರರು ಸಂಧಾನ ಮಾಡಿಕೊಂಡಿರುವುದರಿಂದ ಆರೋಪಿ ವಕೀಲರು ನವೆಂಬರ್‌ ೩ರಂದು ವಿದ್ಯಾರ್ಥಿನಿಗೆ ಇಂಟರ್ನ್‌ಶಿಪ್‌ ಸರ್ಟಿಫಿಕೇಟ್‌ ನೀಡಿದ್ದಾರೆ. ಪ್ರಕರಣ ಸಂಧಾನದಲ್ಲಿ ಅಂತ್ಯ ಕಾಣಿಸಲು ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕಾನೂನು ವಿದ್ಯಾರ್ಥಿನಿಯು ತಿಳಿಸಿದ್ದಾರೆ. ಹೀಗಾಗಿ, ಬೆಂಗಳೂರಿನ ಹಲಸೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್‌ ವಜಾ ಮಾಡಿದೆ.

ಪ್ರಕರಣದ ಹಿನ್ನೆಲೆ: ಕ್ರೀತಮ್‌ ಲಾ ಅಸೋಸಿಯೇಟ್ಸ್‌ನಲ್ಲಿ ದೂರುದಾರೆಯು ಇಂಟರ್ನ್‌ ಆಗಿ ಕೆಲಸ ಮಾಡುತ್ತಿದ್ದರು. ಇಂಟರ್ನ್‌ಶಿಪ್‌ ಸರ್ಟಿಫಿಕೇಟ್‌ಗಾಗಿ ಅವರು ಅರ್ಜಿದಾರರನ್ನು ಕೋರಿದ್ದರು. ಈ ವೇಳೆ ದೂರುದಾರೆ ಮತ್ತು ವಕೀಲ ವಸಂತ್‌ ನಡುವೆ ವಾಗ್ವಾದ ಉಂಟಾಗಿ ಕುಡಿಯುವ ನೀರಿನ ಬಾಟಲನ್ನು ವಸಂತ್‌ ಅವರು ದೂರುದಾರೆಯತ್ತ ಎಸೆದಿದ್ದರಿಂದ ಎದೆಯ ಭಾಗದಲ್ಲಿ ಗಾಯವಾಗಿದ್ದು, ಮೊಬೈಲ್‌ಗೆ ಹಾನಿಯಾಗಿತ್ತು ಎಂದು ಆರೋಪಿಸಲಾಗಿದೆ. ಇದಲ್ಲದೆ ದೂರುದಾರೆಯ ಮೊಬೈಲ್‌ಗೆ ಅಸಹ್ಯಕರ ಮತ್ತು ಆಕ್ಷೇಪಾರ್ಹವಾದ ಸಂದೇಶಗಳನ್ನು ಕಳುಹಿಸಲಾಗಿತ್ತು ಎಂದು ದೂರಲಾಗಿದೆ.

ಹೀಗಾಗಿ, ಸಂತ್ರಸ್ತೆಯು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67 (ವಿದ್ಯುನ್ಮಾನ ರೂಪದಲ್ಲಿ ಅಸಹ್ಯಕರ ಸಂದೇಶ ರವಾನೆ) ಮತ್ತು ಐಪಿಸಿ ಸೆಕ್ಷನ್‌ಗಳಾದ 506 (ಕ್ರಿಮಿನಲ್‌ ಬೆದರಿಕೆ), 509 (ಮಹಿಳೆಯ ಘನತೆಗೆ ಚ್ಯುತಿ), 341 (ಆಕ್ಷೇಪಾರ್ಹ ನಿಯಂತ್ರಣ), 324 (ಉದ್ದೇಶಪೂರ್ವಕವಾಗಿ ಹಾನಿ ಉಂಟು ಮಾಡುವುದು) ಮತ್ತು 354ರ (ಘನತೆಗೆ ಚ್ಯುತಿ ತರುವ ಉದ್ದೇಶ) ಅಡಿ ವಕೀಲ ವಸಂತ್‌ ವಿರುದ್ದ ಪ್ರಕರಣ ದಾಖಲಿಸಿದ್ದರು.