ಇಂಟರ್ನ್‌ ಮೇಲೆ ಹಲ್ಲೆ, ನೀರಿನ ಬಾಟಲ್‌ ಎಸೆದ ಆರೋಪ: ವಕೀಲರ ವಿರುದ್ಧದ ಪ್ರಕರಣ ವಜಾ ಮಾಡಲು ಹೈಕೋರ್ಟ್‌ ನಕಾರ

ತನಿಖೆಯ ಬಳಿಕ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 173ರ ಸೂಕ್ತ ವರದಿ ಸಲ್ಲಿಸಲಿದ್ದಾರೆ. ಈ ಹಂತದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಾಗದು ಎಂದ ಪೀಠ.
Karnataka HC and Justice V Srishananda
Karnataka HC and Justice V Srishananda

ಖಾಸಗಿ ಕಾನೂನು ಸಂಸ್ಥೆಯೊಂದರಲ್ಲಿ ತರಬೇತಿ ಅವಧಿಯಲ್ಲಿದ್ದ ಸಹಾಯಕಿ (ಇಂಟರ್ನ್‌) ಮೇಲೆ ಹಲ್ಲೆ ನಡೆಸಿರುವುದು ಮತ್ತು ಆಕೆಗೆ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ವಜಾ ಮಾಡಲು ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ (ವಸಂತ್‌ ಆದಿತ್ಯ ಜೆ ವರ್ಸಸ್‌ ಕರ್ನಾಟಕ ರಾಜ್ಯ).

ವಕೀಲ ವಸಂತ್‌ ಆದಿತ್ಯ ಜೆ ಅವರ ವಿರುದ್ಧದ ಸಂಜ್ಞೇಯ ಅಪರಾಧದ ತನಿಖೆಯು ಇನ್ನೂ ಬಾಕಿ ಇರುವುದರಿಂದ ಈ ಹಂತದಲ್ಲಿ ಅದನ್ನು ವಜಾ ಮಾಡಲಾಗದು ಎಂದು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಸಕದಸ್ಯ ಪೀಠವು ಆದೇಶ ಮಾಡಿದೆ.

“ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಪೊಲೀಸರು ಸೂಕ್ತ ವರದಿ ಸಲ್ಲಿಸಲಿದ್ದಾರೆ. ಪ್ರಕರಣದ ಅರ್ಹತೆಯ ಕುರಿತು ಈ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಪಕ್ಷಕಾರರ ಹಕ್ಕುಗಳಿಗೆ ಚ್ಯುತಿಯಾಗುತ್ತದೆ. ಅಂತಿಮವಾಗಿ, ನಿರ್ದಿಷ್ಟ ವ್ಯಕ್ತಿಯು ದೂರು ಕ್ಷುಲ್ಲಕವಾಗಿದ್ದು, ಕಾನೂನಿನ ದುರ್ಬಳಕೆಯಾಗಿದೆ ಎಂದು ಸಾಬೀತುಪಡಿಸುವವರೆಗೆ ಸಂಜ್ಞೇಯ ಅಪರಾಧದಲ್ಲಿ ನ್ಯಾಯಾಲಯವು ತನಿಖೆಗೆ ನಿರ್ಬಂಧ ವಿಧಿಸಲಾಗದು” ಎಂದು ಪೀಠ ಹೇಳಿದೆ.

“ಆಕ್ರಮಣಕಾರರು ಯಾರು, ಏನೆಲ್ಲಾ ನಡೆದಿದೆ ಎಂಬುದು ತನಿಖೆಯ ಭಾಗವಾಗಿದೆ. ತನಿಖೆಯ ಬಳಿಕ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 173ರ ಸೂಕ್ತ ವರದಿ ಸಲ್ಲಿಸಲಿದ್ದಾರೆ. ಈ ಹಂತದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Also Read
ಕರ್ನಾಟಕ ನಾಗರಿಕ ಸೇವೆಗಳ ಕಾಯಿದೆ-2022ರ ಸಿಂಧುತ್ವ ಪ್ರಶ್ನಿಸಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಕ್ರೀತಮ್‌ ಲಾ ಅಸೋಸಿಯೇಟ್ಸ್‌ನಲ್ಲಿ ದೂರುದಾರೆಯು ಇಂಟರ್ನ್‌ ಆಗಿ ಕೆಲಸ ಮಾಡುತ್ತಿದ್ದರು. ಇಂಟರ್ನ್‌ಶಿಪ್‌ ಸರ್ಟಿಫಿಕೇಟ್‌ಗಾಗಿ ಅವರು ಅರ್ಜಿದಾರರನ್ನು ಕೋರಿದ್ದರು. ಈ ವೇಳೆ ದೂರುದಾರೆ ಮತ್ತು ವಕೀಲ ವಸಂತ್‌ ನಡುವೆ ವಾಗ್ವಾದ ಉಂಟಾಗಿ ಕುಡಿಯುವ ನೀರಿನ ಬಾಟಲನ್ನು ವಸಂತ್‌ ಅವರು ದೂರುದಾರೆಯತ್ತ ಎಸೆದಿದ್ದರಿಂದ ಎದೆಯ ಭಾಗದಲ್ಲಿ ಗಾಯವಾಗಿದ್ದು, ಮೊಬೈಲ್‌ಗೆ ಹಾನಿಯಾಗಿತ್ತು ಎಂದು ಆರೋಪಿಸಲಾಗಿದೆ. ಇದಲ್ಲದೆ ದೂರುದಾರೆಯ ಮೊಬೈಲ್‌ಗೆ ಅಸಹ್ಯಕರ ಮತ್ತು ಆಕ್ಷೇಪಾರ್ಹವಾದ ಸಂದೇಶಗಳನ್ನು ಕಳುಹಿಸಲಾಗಿತ್ತು ಎಂದು ದೂರಲಾಗಿದೆ.

ಹೀಗಾಗಿ, ಸಂತ್ರಸ್ತೆಯು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67 (ವಿದ್ಯುನ್ಮಾನ ರೂಪದಲ್ಲಿ ಅಸಹ್ಯಕರ ಸಂದೇಶ ರವಾನೆ) ಮತ್ತು ಐಪಿಸಿ ಸೆಕ್ಷನ್‌ಗಳಾದ 506 (ಕ್ರಿಮಿನಲ್‌ ಬೆದರಿಕೆ), 509 (ಮಹಿಳೆಯ ಘನತೆಗೆ ಚ್ಯುತಿ), 341 (ಆಕ್ಷೇಪಾರ್ಹ ನಿಯಂತ್ರಣ), 324 (ಉದ್ದೇಶಪೂರ್ವಕವಾಗಿ ಹಾನಿ ಉಂಟು ಮಾಡುವುದು) ಮತ್ತು 354ರ (ಘನತೆಗೆ ಚ್ಯುತಿ ತರುವ ಉದ್ದೇಶ) ಅಡಿ ವಕೀಲ ವಸಂತ್‌ ವಿರುದ್ದ ಪ್ರಕರಣ ದಾಖಲಿಸಿದ್ದರು.

Related Stories

No stories found.
Kannada Bar & Bench
kannada.barandbench.com