ಸುದ್ದಿಗಳು

ಇವಿಎಂ ಬದಲು ಮತಪತ್ರ ಬಳಸಿ: ಸುಪ್ರೀಂ ಕೋರ್ಟ್‌ಗೆ ವಕೀಲ ಪ್ರಾಚಾ ಅರ್ಜಿ

Bar & Bench

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲಿಗೆ ಮತಪತ್ರವನ್ನು (ಬ್ಯಾಲೆಟ್ ಪೇಪರ್) ಮಾತ್ರವೇ ಬಳಸಿ ದೇಶದ ಎಲ್ಲಾ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಮೆಹಮೂದ್ ಪ್ರಾಚಾ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಾಚಾ ಅವರು, ಮತಪತ್ರವನ್ನಷ್ಟೇ ಬಳಸಿ ಚುನಾವಣೆ ನಡೆಸಬೇಕೆಂದು 1951ರ ಜನ ಪ್ರತಿನಿಧಿ ಕಾಯಿದೆ ಮತ್ತು 1961ರ ಚುನಾವಣಾ ನಿಯಮಾವಳಿ  ಹೇಳುತ್ತದೆ ಎಂಬುದಾಗಿ ವಾದಿಸಿದ್ದಾರೆ.

ಅಸಾಧಾರಣ ಸಂದರ್ಭಗಳಲ್ಲಿ ಮತ್ತು ಅದು ಕೂಡ ಸಮರ್ಥನೀಯ ಕಾರಣಗಳಿಗಾಗಿಯಷ್ಟೇ ಚುನಾವಣಾ ಆಯೋಗ ಪ್ರಕರಣದಿಂದ ಪ್ರಕರಣದ ಆಧಾರದಲ್ಲಿ ಇವಿಎಂಗಳನ್ನು ಬಳಸಬೇಕು ಎಂದು ತಿಳಿಸಲಾಗಿದೆ ಎಂದು ವಿವರಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣದಲ್ಲಿ ಮಧ್ಯಂತರ ಅರ್ಜಿಯಾಗಿ ಪ್ರಸ್ತುತ ಅರ್ಜಿಯನ್ನು ಸಲ್ಲಿಸಲಾಗಿದೆ.

ಎಲ್ಲಾ ಇವಿಎಂ ಮತಚೀಟಿಗಳನ್ನು ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ ಚೀಟಿಯೊಂದಿಗೆ ತಾಳೆ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ  ಪ್ರಕರಣದಲ್ಲಿ ವಾದಕಾಲೀನ ಅರ್ಜಿಯಾಗಿ ಈ ಮನವಿ ಸಲ್ಲಿಸಲಾಗಿದೆ. ವಿವಿಪ್ಯಾಟ್‌ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಳೆದ ಕೆಲವು ದಿನಗಳ ಹಿಂದೆ ಭಾರತದ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿತ್ತು.

ಜನ ಪ್ರತಿನಿಧಿ ಕಾಯಿದೆ ಪ್ರಕಾರ ಮತಪತ್ರಗಳ ಬದಲಿಗೆ ಮತಯಂತ್ರಗಳನ್ನು ಬಳಸುವಂತಿಲ್ಲ ಎಂದು ಪ್ರಾಚಾ ಗಮನ ಸೆಳೆದಿದ್ದಾರೆ.

ದೆಹಲಿ ವಿವಿಯಿಂದ ಕಾನೂನು ಪದವಿ ಪಡೆದ ಪ್ರಾಚಾ ಅವರು ದೆಹಲಿ ವಕೀಲರ ಪರಿಷತ್‌ನಲ್ಲಿ ನೋಂದಾಯಿಸಿಕೊಂಡು 1988ರಲ್ಲಿ ವಕೀಲಿಕೆ ಆರಂಭಿಸಿದರು.