Supreme Court, lawyers
Supreme Court, lawyers  
ಸುದ್ದಿಗಳು

“ವಕೀಲರು ಪ್ರಕರಣದ ತೀರ್ಮಾನ ನಿರ್ಧರಿಸಲು ಹೇಗೆ ಸಾಧ್ಯ?” ದುರ್ನಡತೆಗೆ ವಕೀಲರ ವಿರುದ್ಧ ʼಸುಪ್ರೀಂʼ ಸ್ವಯಂಪ್ರೇರಿತ ಕ್ರಮ

Bar & Bench

ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿವಾದಿಗಳು ಸಲ್ಲಿಸಿರುವ ಮೇಲ್ಮನವಿಯು ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ವಕೀಲರೊಬ್ಬರು ತಮ್ಮ ಕಕ್ಷಿದಾರರಿಗೆ ಸಲಹೆ ನೀಡಿರುವುದಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಾಲಯ ನಿರ್ಧರಿಸುವುದಕ್ಕೂ ಮುನ್ನ ಆ ರೀತಿ ವಕೀಲರು ಸುದ್ದಿ ಹಬ್ಬಿಸುವುದು ಎಷ್ಟು ಸರಿ ಎಂದಿರುವ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠವು ಮೇಲ್ನೋಟಕ್ಕೆ ಇದು ವೃತ್ತಿಗೆ ಸಂಬಂಧಿಸಿದ ದುರ್ನಡತೆ ಎನಿಸುತ್ತದೆ ಎಂದು ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಂದೆ ಕಕ್ಷಿದಾರರನ್ನು ಪ್ರತಿನಿಧಿಸಿರುವ ವಕೀಲರು ಈ ಕುರಿತು ಹೇಗೆ ನಿರ್ಣಯಿಸುತ್ತಾರೆ ಅಥವಾ ಈ ಸಂಬಂಧ ಊಹಾಪೋಹ ಎಬ್ಬಿಸಬಹುದೇ ಎಂಬುದು ನಮಗೆ ಅರ್ಥವಾಗುತ್ತಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದು, ಸಂಬಂಧಿತ ವಕೀಲರ ವಿವರಗಳನ್ನು ಒಳಗೊಂಡ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿದೆ. “ಈ ಪ್ರಕ್ರಿಯೆಯನ್ನು ನ್ಯಾಯಾಲಯವು ಸ್ವಯಂಪ್ರೇರಿತ ಕ್ರಮ ಎಂದು ಪರಿಗಣಿಸಲಿದೆ. ಇಂದಿನಿಂದ ಎರಡು ವಾರಗಳ ಒಳಗೆ ಅಫಿಡವಿಟ್‌ ಸಲ್ಲಿಸಬೇಕಿದ್ದು, ಫೆಬ್ರವರಿ 5ರ ಒಳಗೆ ಸ್ವಯಂಪ್ರೇರಿತ ಪ್ರಕ್ರಿಯೆಯ ಕುರಿತು ರೆಜಿಸ್ಟ್ರಿ ಅಧಿಸೂಚನೆ ಹೊರಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಮಗುವಿನ ಪೋಷಕರು ವೈವಾಹಿಕ ವಿವಾದ ಮತ್ತು ಮಗುವಿನ ವಶದ ವಿಚಾರದಲ್ಲಿ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿದ್ದಾರೆ. ಪ್ರತಿವಾದಿ ಪತ್ನಿಯು ಅರಿಜೋನಾದ ಸುಪ್ರೀಂ ಕೋರ್ಟ್‌ನಲ್ಲಿ ವಿಚ್ಛೇದನ ಪ್ರಕ್ರಿಯೆ ಆರಂಭಿಸಿದ್ದಾರೆ. ಪತಿಯು ಮಧ್ಯಪ್ರದೇಶದ ವಿಚಾರಣಾಧೀನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಅರಿಜೋನಾದ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಸದಂತೆ ಅದಕ್ಕೆ ಪ್ರತಿಬಂಧಕಾಜ್ಞೆ ನೀಡುವಂತೆ ಕೋರಿದ್ದು, ವಿದೇಶದ ನ್ಯಾಯಾಲಯಗಳಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಸದಂತೆ ಪತ್ನಿಗೆ ಸೂಚಿಸುವಂತೆ ಕೋರಿದ್ದರು.

ತಾವಿಬ್ಬರೂ ಅರಿಜೋನಾದಲ್ಲಿ ನೆಲೆಸಿರಲಿಲ್ಲ. ಇಬ್ಬರೂ ಹಿಂದೂ ಕಾನೂನಿನ ಪ್ರಕಾರ ವಿವಾಹವಾಗಿದ್ದು, ಮಗು ಕ್ಯಾಲಿಫೋರ್ನಿಯಾದಲ್ಲಿ ಜನಿಸಿದೆ ಎಂದು ಪತಿ ವಾದಿಸಿದ್ದಾರೆ. ವೈವಾಹಿಕ ಮೊಕದ್ದಮೆಗಳನ್ನು ಭಾರತದ ನ್ಯಾಯಾಲಯಗಳಲ್ಲಿ ಹೂಡಿದ್ದು, ಅರಿಜೋನಾದ ಸುಪ್ರೀಂ ಕೋರ್ಟ್‌ ಕಠಿಣ ಆದೇಶಗಳನ್ನು ನೀಡಬಹುದು ಎಂದು ಪತಿಯು ಆತಂಕ ವ್ಯಕ್ತಪಡಿಸಿದ್ದಾರೆ. ಅರಿಜೋನಾದಲ್ಲಿ ಜಾರಿಯಲ್ಲಿರುವ ಕಾನೂನಿನ ಪ್ರಕಾರ ವಿವಾದ ಬಗೆಹರಿಸಲು ಯತ್ನಿಸಲಾಗುವುದೇ ವಿನಾ ಭಾರತದ ಹಿಂದೂ ವಿವಾಹ ಕಾಯಿದೆ ಅಥವಾ ಭಾರತದ ಕಾನೂನುಗಳ ಅನ್ವಯ ಪ್ರಕರಣ ನಡೆಸುವುದಿಲ್ಲ ಎಂದು ಅಲ್ಲಿನ ನ್ಯಾಯಾಲಯ ಹೇಳಿದೆ ಎನ್ನಲಾಗಿದೆ.

ಅರಿಜೋನಾ ಸುಪ್ರೀಂ ಕೋರ್ಟ್‌ ಭಾರತದಿಂದ ಹೊರಗಿದ್ದು, ಇದಕ್ಕೆ ಪ್ರತಿಬಂಧಕಾಜ್ಞೆ ನೀಡಲಾಗದು ಎಂದು ಹೇಳಿ ವಿಚಾರಣಾಧೀನ ನ್ಯಾಯಾಲಯವು ಪತಿಯ ಮನವಿಯನ್ನು ವಜಾಗೊಳಿಸಿತ್ತು. ಅರಿಜೋನಾದ ಸುಪ್ರೀಂ ಕೋರ್ಟ್‌ ತನ್ನ ಮುಂದಿರುವ ಪ್ರಕರಣ ಇತ್ಯರ್ಥಪಡಿಸಿದ ಬಳಿಕ ಮಾತ್ರ ಭಾರತದಲ್ಲಿನ ನ್ಯಾಯಾಲಯಗಳು ಇಬ್ಬರ ವಿವಾದವನ್ನು ಬಗೆಹರಿಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಹೇಳಿತ್ತು.

“ಭೋಪಾಲ್‌ನಲ್ಲಿ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿ ಪತ್ನಿಯ ವಿರುದ್ಧ ಮನವಿದಾರ ಪತಿ ಕೋರಿದ್ದ ಮಧ್ಯಂತರ ಪರಿಹಾರವನ್ನು ವಜಾಗೊಳಿಸುವ ಮೂಲಕ ವಿಚಾರಣಾಧೀನ ನ್ಯಾಯಾಲಯ ಮತ್ತು ಹೈಕೋರ್ಟ್‌ ತಪ್ಪೆಸಗಿದ್ದು, ಕಾನೂನನ್ನು ಸರಿಯಾದ ರೀತಿಯಲ್ಲಿ ಅನ್ವಯಿಸಿಲ್ಲ” ಎಂದು ಭಾರತದ ಸುಪ್ರೀಂ ಕೋರ್ಟ್‌ ಹೇಳಿದೆ. ಅಲ್ಲದೇ ಪ್ರತಿವಾದಿ ಪತ್ನಿಯು ಅರಿಜೋನಾದ ಸುಪ್ರೀಂ ಕೋರ್ಟ್‌ನಲ್ಲಿನ ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದು, ಪ್ರತಿಬಂಧಾಕಾಜ್ಞೆ ನೀಡುವ ಮೂಲಕ ಪತಿ ಪರವಾಗಿ ಆದೇಶ ಹೊರಡಿಸಿದೆ.

ವಿಚಾರಣೆಯ ವೇಳೆ ಪತಿಯ ವಕೀಲರು ಪ್ರತಿವಾದಿಯಾದ ಪತ್ನಿಯು ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವು ಯಶಸ್ವಿಯಾಗುವುದಿಲ್ಲ ಎಂದು ಭಾರತದಲ್ಲಿರುವ ತನ್ನ ವಕೀಲರು ಹೇಳಿರುವುದಾಗಿ ತಿಳಿಸಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಪ್ರತಿವಾದಿ ಪತ್ನಿಗೆ ಪ್ರಕರಣದ ಸಂಬಂಧ ನೋಟಿಸ್‌ ಜಾರಿಗೊಳಿಸಲಾಗಿತ್ತು. ಈ ಕುರಿತಾದ ಸಂವಹನದ ವೇಳೆ ಪ್ರತಿವಾದಿಯಾದ ಪತ್ನಿಯು ಮೇಲಿನಂತೆ ತಿಳಿಸಿದ್ದರು.

ಪ್ರಕರಣದ ವಿಚಾರಣೆಗೂ ಮುನ್ನವೇ ಇಂತಹದ್ದೊಂದು ತೀರ್ಮಾನಕ್ಕೆ ಬಂದಿರುವ ಪ್ರತಿವಾದಿ ಪರ ವಕೀಲರ ನಡೆಯ ಬಗ್ಗೆ ಕೆಂಡಾಮಂಡಲವಾದ ನ್ಯಾಯಾಲಯವು, ಇದು ವೃತ್ತಿಗೆ ಸಂಬಂಧಿಸಿದ ದುರ್ನಡತೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಅಂತಹ ಸಲಹೆ ನೀಡಿರುವ ವಕೀಲರ ಕುರಿತ ವಿವರವನ್ನು ಅಫಿಡವಿಟ್‌ ಮೂಲಕ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ಸ್ವಯಂ ಪ್ರೇರಿತ ಕ್ರಮಕ್ಕೆ ಮುಂದಾಯಿತು.