ಸೊಸೆಯೆಡೆಗಿನ ವ್ಯಂಗ್ಯ, ಮೂದಲಿಕೆ ವೈವಾಹಿಕ ಜೀವನದ ಭಾಗ: ಅತ್ತೆ-ಮಾವನಿಗೆ ನಿರೀಕ್ಷಣಾ ಜಾಮೀನು ನೀಡಿದ ಮುಂಬೈ ನ್ಯಾಯಾಲಯ

“... ಅಂತಹ ಆರೋಪಗಳಿಗಾಗಿ ಕ್ರಮವಾಗಿ 80 ಮತ್ತು 75 ರ ವಯೋಮಾನದ ಅರ್ಜಿದಾರರನ್ನು ಪೊಲೀಸರು ವಶಕ್ಕೆ ಪಡೆಯುವ ಅವಶ್ಯಕತೆ ಇಲ್ಲ,” ಎಂದ ಮುಂಬೈನ ಪೊಸ್ಕೋ ವಿಶೇಷ ನ್ಯಾಯಾಲಯ.
ಸೊಸೆಯೆಡೆಗಿನ ವ್ಯಂಗ್ಯ, ಮೂದಲಿಕೆ ವೈವಾಹಿಕ ಜೀವನದ ಭಾಗ: ಅತ್ತೆ-ಮಾವನಿಗೆ ನಿರೀಕ್ಷಣಾ ಜಾಮೀನು ನೀಡಿದ ಮುಂಬೈ ನ್ಯಾಯಾಲಯ
Mumbai sessions court

ಸೊಸೆಯನ್ನು ವ್ಯಂಗ್ಯ ಮಾಡುವುದು ಮತ್ತು ನಿಂದಿಸುವುದು ವೈವಾಹಿಕ ಜೀವನದ ಭಾಗವಾಗಿದ್ದು, ಇದು ವಯಸ್ಸಾದ ಅತ್ತೆ, ಮಾವನವರನ್ನು ವಶಕ್ಕೆ ಪಡೆಯುವಂತೆ ಕೋರಲು ಸಾಧಾರವಲ್ಲ ಎಂದಿರುವ ಮುಂಬೈ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 498ಎ ಅಡಿ ಪ್ರಕರಣ ಎದುರಿಸುತ್ತಿರುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸೊಸೆಯ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್‌ಗಳಾದ 498ಎ (ಅತ್ತೆ ಮಾವಂದಿರಿಂದ ದೌರ್ಜನ್ಯ), 420 (ವಂಚನೆ), 406 (ನಂಬಿಕೆ ದ್ರೋಹ) ಮತ್ತು 506 (ಬೆದರಿಕೆ) ಅಡಿ ತಮ್ಮ ಹಾಗೂ ತಮ್ಮ ಪುತ್ರನ ವಿರುದ್ಧ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ರಮೇಶ್‌ ಮತ್ತು ಮಾಳವಿಕಾ ದಲಾಲ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

“ಪ್ರಕರಣದ ಮೊದಲ ಮಾಹಿತಿದಾರೆಯಾದ ಸೊಸೆಯ ವಿರುದ್ಧ ವ್ಯಂಗ್ಯವಾಡಿರುವುದು, ಮೂದಲಿಸಿರುವುದು ವೈವಾಹಿಕ ಜೀವನದ ಏರಿಳಿತದ ಭಾಗವಾಗಿದ್ದು, ಪ್ರತಿಯೊಂದು ಕುಟುಂಬದಲ್ಲೂ ಇದು ನಡೆಯುತ್ತದೆ. ಈ ಆರೋಪಕ್ಕಾಗಿ ಕ್ರಮವಾಗಿ 80 ಮತ್ತು 75ರ ವಯೋಮಾನದ ಅರ್ಜಿದಾರರನ್ನು ಪೊಲೀಸರು ವಶಕ್ಕೆ ಪಡೆಯುವ ಅವಶ್ಯಕತೆ ಇಲ್ಲ” ಎಂದು ನ್ಯಾಯಾಲಯ ಹೇಳಿದೆ.

ಮೇಲ್ಕಾಣಿಸಿದ ಅಪರಾಧಗಳ ಆರೋಪದ ಆಚೆಗೆ ಎಫ್‌ಐಆರ್‌ನಲ್ಲಿ ಅರ್ಜಿದಾರರ ವಿರುದ್ಧ ದಾಖಲಿಸಿರುವ ದೂರುಗಳು ಸಾಮಾನ್ಯವಾಗಿವೆ ಎಂದು ಮುಂಬೈನ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಾಧುರಿ ಬರಲಿಯಾ ಅಭಿಪ್ರಾಯಪಟ್ಟರು.

ದೂರುದಾರೆಯಾದ ಸೊಸೆಯು ಅಲ್ಪ ಸಮಯದವರೆಗೆ ಮಾತ್ರ ಅರ್ಜಿದಾರರಾದ ಅತ್ತೆ-ಮಾವ ಅವರ ಜೊತೆ ಇದ್ದರು. ತನಿಖಾ ಸಂಸ್ಥೆಯು ಈಗಾಗಲೇ ಅರ್ಜಿದಾರರ ಖಾತೆಗಳನ್ನು ನಿಯಂತ್ರಣಕ್ಕೆ ಪಡೆದಿದ್ದು, ತನಿಖೆ ನಡೆದಿರುವುದರಿಂದ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Also Read
ಆರೋಪಿ ಅಭಿಪ್ರಾಯ ಯೂಟ್ಯೂಬ್‌ನಲ್ಲಿರುವಾಗ ವಶಕ್ಕೆ ಪಡೆಯುವ ಅಗತ್ಯವಿಲ್ಲ: ದ್ವೇಷಭಾಷೆ ಆರೋಪಿಗೆ ನಿರೀಕ್ಷಣಾ ಜಾಮೀನು

ಅರ್ಜಿದಾರರ ವಿರುದ್ಧ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟದ (ಐಸಿಐಜೆ) ತನಿಖೆ ಬಾಕಿ ಇದೆ. ಈಗಾಗಲೇ ದೂರುದಾರರ ಖಾತೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೂರುದಾರ ಸೊಸೆ ಹೇಳಿದ್ದಾರೆ. ಆದರೆ, ಪ್ರಸಕ್ತ ಎಫ್‌ಐಆರ್‌ ಪ್ರತ್ಯೇಕ ಅಪರಾಧಕ್ಕೆ ಸಂಬಂಧಪಟ್ಟಿರುವುದರಿಂದ ಈ ವಾದದಿಂದ ನ್ಯಾಯಾಲಯವು ಸಂತುಷ್ಟಗೊಳ್ಳಲಿಲ್ಲ.

ದಲಾಲ್‌ ದಂಪತಿಯು ನ್ಯಾಯಾಲಯಕ್ಕೆ ವಂಚಿಸಿ ತಮ್ಮ ಪುತ್ರ ನೆಲೆಸಿರುವ ದುಬೈಗೆ ಹಾರಬಹುದು ಎಂದು ಜಾಮೀನಿಗೆ ವಿರೋಧ ವ್ಯಕ್ತಪಡಿಸಲಾಯಿತು. ಅಂತಿಮವಾಗಿ ನ್ಯಾಯಾಲಯವು ಆರೋಪಿಗಳು ಪಾಸ್‌ಪೋರ್ಟ್‌ ಅನ್ನು ಪೊಲೀಸರಿಗೆ ನೀಡುವಂತೆ ಸೂಚಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Related Stories

No stories found.