ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ಖಾಸಗಿ ಜೀವನ ಕುರಿತು ಟ್ವೀಟ್ ಮಾಡಿರುವ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ವಕೀಲ ಸುನಿಲ್ ಸಿಂಗ್ ಅವರು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು, ಆ ಬಳಿಕ ನಾಗಪುರದ ತಮ್ಮ ನಿವಾಸಕ್ಕೆ ಮರಳಲು ಮಧ್ಯಪ್ರದೇಶ ಸರ್ಕಾರ (ಸಿಎಂ ಅಧಿಕಾರ ಹೊಂದಿರುವ) ಒದಗಿಸಿದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಸಿಜೆಐ ಬೊಬ್ಡೆ ಪ್ರಯಣ ಬೆಳೆಸಿದ್ದರು. ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸುವ ಪ್ರಮುಖ ಪ್ರಕರಣವೊಂದನ್ನು ಅವರು ವಿಚಾರಣೆ ನಡೆಸಬೇಕಿದೆ. ಮಧ್ಯಪ್ರದೇಶ ಸರ್ಕಾರದ ಅಳಿವು ಉಳಿವು ಆ ಪ್ರಕರಣವನ್ನು ಅವಲಂಬಿಸಿದೆ ಎಂಬುದಾಗಿ ಪ್ರಶಾಂತ್ ಭೂಷಣ್ ಟ್ವೀಟ್ ಹೇಳಿತ್ತು.
ಈ ಟ್ವೀಟ್ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು "ಸುಪ್ರೀಂಕೋರ್ಟ್‌ಗೆ ಕಳಂಕ ತಂದಿರುವುದಲ್ಲದೆ, ಪೂರ್ವಾಗ್ರಹಪೀಡಿತಗೊಳಿಸುತ್ತದೆ. ಜೊತೆಗೆ ನ್ಯಾಯಾಂಗ ಪ್ರಕ್ರಿಯೆ ಮತ್ತು ನ್ಯಾಯಾಂಗ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ನ್ಯಾಯಾಂಗ ನಿಂದನೆ ನಿಯಮಗಳ ಪ್ರಕಾರ ಸಾಮಾನ್ಯ ಕಾನೂನು ವ್ಯಾಪ್ತಿಯಲ್ಲಿ ನ್ಯಾಯಾಂಗ ನಿಂದನೆಯ ಬಹುಮುಖ್ಯ ಪಾತ್ರವೆಂದರೆ ನ್ಯಾಯಿಕ ಪ್ರಕ್ರಿಯೆಯ ವ್ಯಾಪ್ತಿಗೆ ಸಂಬಂಧಿಸಿದ ಈ ಮುಂದಿನ ನಿಯಮಾವಳಿ ಅನ್ವಯಿಸುವುದಾಗಿದೆ: ಅದೆಂದರೆ, ಬಾಕಿ ಇರುವ ಕಾನೂನು ಪ್ರಕ್ರಿಯೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎನ್ನುವುದು. ಪ್ರಾಯೋಗಿಕವಾಗಿ, ನ್ಯಾಯಯುತ ವಿಚಾರಣೆಯ ಹಕ್ಕನ್ನು ಪೂರ್ವಗ್ರಹಪೀಡಿತವಾಗಿಸುವ ಅಥವಾ ಇನ್ನೂ ಆಡುಮಾತಿನಲ್ಲಿ ಹೇಳುವುದಾದರೆ 'ಮಾಧ್ಯಮ ವಿಚಾರಣೆ'ಗೆ ತಡೆಯೊಡ್ಡಲು ಇದನ್ನು ಬಳಸಲಾಗುತ್ತದೆ.”ವಕೀಲರ ಪತ್ರ
ಪ್ರಶಾಂತ್ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆ ಪ್ರಾರಂಭಿಸುವುದು ಸಾರ್ವಜನಿಕ ಹಿತಾಸಕ್ತಿ ವಿಷಯ ಎಂದು ವಕೀಲರು ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಬೈಕ್ ಒಂದರ ಮೇಲೆ ಕುಳಿತಿದ್ದ ಫೋಟೊ ಟ್ವೀಟ್ ಮಾಡಿ ಕಳೆದ ಆರು ವರ್ಷಗಳಲ್ಲಿ ನ್ಯಾಯಾಂಗದ ಕಾರ್ಯವಿಧಾನವನ್ನು ಭೂಷಣ್ ವಿಮರ್ಶಿಸಿದ್ದರು. ಪರಿಣಾಮ ನ್ಯಾಯಾಂಗ ನಿಂದನೆ ಶಿಕ್ಷೆಗೆ ಗುರಿಯಾಗಿದ್ದರು. ಅವರಿಗೆ ಒಂದು ರೂಪಾಯಿ ದಂಡ ವಿಧಿಸಿದ್ದ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು, ʼನ್ಯಾಯಾಂಗದಲ್ಲಿ ಸಾರ್ವಜನಿಕರು ಇರಿಸಿರುವ ನಂಬಿಕೆ ಹಾಳುಗೆಡವಲು ʼಯೋಜನೆಗಳುʼ ನಡೆಯುತ್ತಿರುವಾಗ ನಿರ್ಭೀತ ನ್ಯಾಯದಾನದ ಬಗ್ಗೆ ಆಸ್ಥೆ ಹೊಂದಿರುವವರೆಲ್ಲರೂ ದೃಢವಾಗಿ ನಿಲ್ಲಬೇಕು. ಪ್ರಚೋದನಕಾರಿ ಟ್ವೀಟ್‌ಗಳಿಂದ ಉಂಟಾಗಿರುವ ಅಗೌರವ ಮತ್ತು ಮತ್ತು ಅವಿಧೇಯತೆಯನ್ನು ನ್ಯಾಯಾಲಯ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.