CJI BR Gavai  
ಸುದ್ದಿಗಳು

ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ: ಇದೆಲ್ಲಾ ಪರಿಣಾಮ ಬೀರದು ಎಂದು ನ್ಯಾ. ಗವಾಯಿ ಪ್ರತಿಕ್ರಿಯೆ

ಮೂಲಗಳ ಪ್ರಕಾರ, ವಕೀಲ ಶೂ ತೆಗೆದು ಸಿಜೆಐ ಗವಾಯಿ ಅವರ ಮೇಲೆ ಎಸೆಯಲು ಮುಂದಾದ.

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್‌ ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಮುಂದಾದ ಪ್ರಸಂಗ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.

ನ್ಯಾಯಾಲಯ ಕಲಾಪದಲ್ಲಿ ಸಿಜೆಐ ಅವರು ತೊಡಗಿದ್ದ ವೇಳೆ ಈ ದಾಳಿ ನಡೆದಿದೆ.  ಮೂಲಗಳ ಪ್ರಕಾರ, ವಕೀಲ ನ್ಯಾಯಮೂರ್ತಿಗಳ ವೇದಿಕೆ ಬಳಿಗೆ ಹೋಗಿ ತನ್ನ ಶೂ ತೆಗೆದು ನ್ಯಾಯಮೂರ್ತಿಗಳ ಮೇಲೆ ಎಸೆಯಲು ಯತ್ನಿಸಿದ. ಆದರೆ, ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಕಾಲಕ್ಕೆ ಮಧ್ಯಪ್ರವೇಶಿಸಿ ವಕೀಲನನ್ನು ಹೊರಗೆ ಕರೆದೊಯ್ದರು. ಹಾಗೆ ಕರೆದೊಯ್ಯುವ ವೇಳೆ ಆತ "ಸನಾತನ್‌ ಕಾ ಅಪಮಾನ್‌ ನಹೀ ಸಹೇಂಗೆ" (ಸನಾತನಕ್ಕೆ ಮಾಡುವ ಅಪಮಾನವನ್ನು ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದ ಎಂದು ತಿಳಿದುಬಂದಿದೆ.

ಘಟನೆಯಿಂದ ವಿಚಲಿತರಾಗದ ಸಿಜೆಐಅವರು ವಾದ ಮುಂದುವರೆಸುವಂತೆ ವಕೀಲರಿಗೆ ಸೂಚಿಸಿದರು.

 "ಇದೆಲ್ಲದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಇಂತಹ ಘಟನೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ಸಿಜೆಐ ಅವರು ನೀಡಿದ್ದ ಹೇಳಿಕೆ ಇಂದಿನ ಘಟನೆಗೆ ಕಾರಣವಾಗಿರಬಹುದು.

ಪರಿಹಾರಕ್ಕಾಗಿ ದೇವರನ್ನೇ ಪ್ರಾರ್ಥಿಸಿ ಎಂದು ದಾವೆದಾರರಿಗೆ ಸಿಜೆಐ ಅವರು ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಕೆಲವರು ಬಿಂಬಿಸಿದ್ದರು. ಆದರೆ ತಾನು ಅಗೌರವ ತೋರಿಲ್ಲ ಎಂದು ಸಿಜೆಐ ನಂತರ ತಿಳಿಸಿದ್ದರು. "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ... ಇದು (ಅಪಪ್ರಚಾರ) ಸಾಮಾಜಿಕ ಮಾಧ್ಯಮದಲ್ಲಿ ನಡೆದಿದೆ"  ಎಂದು ಅವರು ಹೇಳಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಘಟನೆಗಳಿಗೆ ಅತಿರೇಕದ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದರು.

“ಇಂಥದ್ದನ್ನು ಗಮನಿಸಿದ್ದೇವೆ. ಕ್ರಿಯೆಗೆ ಸಮನಾದ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ ಎನ್ನುತದೆ ವಿಜ್ಞಾನಿ ಐಸಾಕ್‌ ನ್ಯೂಟನ್‌ನ ಮೂರನೇ ನಿಯಮ. ಆದರೆ ಈಗ ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಮಾಧ್ಯಮದಲ್ಲಿ ಅಸಮಾನ ಪ್ರತಿಕ್ರಿಯೆ ದೊರೆಯುತ್ತಿದೆ” ಎಂದಿದ್ದರು.