Guns
Guns 
ಸುದ್ದಿಗಳು

ಕ್ರಿಮಿನಲ್ ಪ್ರಕರಣದಲ್ಲಿ ಹಾಜರಾಗುತ್ತೇವೆಂದ ಮಾತ್ರಕ್ಕೆ ವಕೀಲರು ಬಂದೂಕು ಪರವಾನಗಿ ಕೇಳುವಂತಿಲ್ಲ: ದೆಹಲಿ ಹೈಕೋರ್ಟ್

Bar & Bench

ಆರೋಪಿ ಅಥವಾ ಪ್ರಾಸಿಕ್ಯೂಷನ್ ಪರವಾಗಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಹಾಜರಾಗುವ ಎಲ್ಲಾ ವಕೀಲರು ಬಂದೂಕು ಪರವಾನಗಿ ಪಡೆಯಲು ಹಕ್ಕು ಚಲಾಯಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ [ವಕೀಲ ಶಿವಕುಮಾರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಎಲ್ಲಾ ಕ್ರಿಮಿನಲ್ ವಕೀಲರು ಶಸ್ತ್ರಾಸ್ತ್ರ ಪರವಾನಗಿ ಪಡೆಯುವ ಹಕ್ಕನ್ನು ಪ್ರತಿಪಾದಿಸಿದರೆ ಅದು ಶಸ್ತ್ರಾಸ್ತ್ರ ಪರವಾನಗಿಗಳನ್ನು ಮನಬಂದಂತೆ ನೀಡುವುದಕ್ಕೆ ಕಾರಣವಾಗಬಹುದು ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ಹೇಳಿದ್ದಾರೆ.

"ಶಸ್ತ್ರಾಸ್ತ್ರ ಪರವಾನಗಿ ಕಾನೂನಿನ ಸೃಷ್ಟಿಯಾಗಿದ್ದು ಪ್ರಕರಣದಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲಂಬಿಸಿ ಯಾವುದೇ ಪರವಾನಿಗೆ ನೀಡುವ ಅಥವಾ ನೀಡದೆ ಇರುವ  ವಿವೇಚನಾಧಿಕಾರ, ಪರವಾನಗಿ ಅಧಿಕಾರಿಗೆ ಇರುತ್ತದೆ. ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಗಳ ಇಲ್ಲವೇ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸುವ ಎಲ್ಲಾ ವಕೀಲರು  ಇಲ್ಲವೇ ಅಡ್ವೊಕೇಟ್‌ಗಳು ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ಶಸ್ತ್ರಾಸ್ತ್ರ ಪರವಾನಗಿಯನ್ನು ವಿವೇಚನಾರಹಿತವಾಗಿ ನೀಡಲು ಆಸ್ಪದ ಒದಗಿಸಿದಂತಾಗುತ್ತದೆ” ಎಂದು ನ್ಯಾಯಾಲಯ ನುಡಿದಿದೆ.

ಬಂದೂಕು ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಆದೇಶ ಪ್ರಶ್ನಿಸಿ ವಕೀಲ ಶಿವಕುಮಾರ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ ಪರವಾನಗಿ ಬಯಸಿದವರು ಬೆದರಿಕೆ ದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದಾರೆಯೇ ಇಲ್ಲವೇ ಅವರು ನೀಡಿರುವ ಕಾರಣಗಳು ಯಾವುವು ಎಂಬ ಆಧಾರದಲ್ಲಿ ಬಂದೂಕು ಪರವಾನಗಿ ನೀಡುವ ಅಧಿಕಾರಿ ನಿರ್ಣಯ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿತು.  

ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳ ಪರ ಹಾಜರಾಗುತ್ತಾರೆ ಎನ್ನುವ ಅಂಶವಷ್ಟೇ  ವಕೀಲರು ಶಸ್ತ್ರಾಸ್ತ ಪರವಾನಗಿ ಪಡೆಯಲು ಸಾಕಾಗುವುದಿಲ್ಲ ಎಂದು ಅದು ಹೇಳಿತು . ಹೀಗಾಗಿ ಅರ್ಜಿದಾರರು ಆಕ್ಷೇಪಕ್ಕೆ ಕಾರಣವಾಗಿರುವ ಲೆ. ಗವರ್ನರ್‌ ಅವರ ಆದೇಶ ಹಸ್ತಕ್ಷೇಪ ಮಾಡುತ್ತದೆ ಎಂಬುದಕ್ಕೆ ಸಮರ್ಥನೆ ಇಲ್ಲ ಎಂದು ತಿಳಿಸಿ ಮನವಿಯನ್ನು ತಿರಸ್ಕರಿಸಿತು.