Patiala House court 
ಸುದ್ದಿಗಳು

ಹೋಳಿ ಆಚರಣೆ ಪ್ರಯುಕ್ತ ನ್ಯಾಯಾಲಯ ಸಂಕೀರ್ಣದಲ್ಲಿ ನವದೆಹಲಿ ವಕೀಲರ ಸಂಘದಿಂದ ಐಟಂ ಡಾನ್ಸ್ ಆಯೋಜನೆ: ಆಕ್ಷೇಪ

ಸುಪ್ರೀಂ ಕೋರ್ಟ್‌ನಿಂದ ಅನತಿ ದೂರದಲ್ಲಿರುವ ಪಟಿಯಾಲ ಹೌಸ್ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆಯಂದು ನಡೆದ ಹೋಳಿ ಹಬ್ಬ ಆಚರಣೆ ವೇಳೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಆಘಾತಕಾರಿ ಎಂದಿರುವ ವಕೀಲರು.

Bar & Bench

ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಸಂಕೀರ್ಣದಲ್ಲಿ ಬುಧವಾರ ನಡೆದ ಹೋಳಿ ಮಿಲನ್ ಆಚರಣೆ ವೇಳೆ ನರ್ತಕಿಯರನ್ನು ಕರೆಸಿ 'ಐಟಂ ಡ್ಯಾನ್ಸ್' ಪ್ರದರ್ಶಿಸಿರುವುದನ್ನು ವಿರೋಧಿಸಿ ಅನೇಕ ವಕೀಲರು, ಕಾರ್ಯಕ್ರಮ ಆಯೋಜಿಸಿದ್ದ ನವದೆಹಲಿ ವಕೀಲರ ಸಂಘ (ಎನ್‌ಡಿಬಿಎ) ಮತ್ತು ದೆಹಲಿ ವಕೀಲರ ಪರಿಷತ್ತಿಗೆ ಪತ್ರ ಬರೆದಿದ್ದಾರೆ.

ಎನ್‌ಡಿಬಿಎ ಆಯೋಜಿಸಿದ್ದ ಈ ಕಾರ್ಯಕ್ರಮ ಸಂಪೂರ್ಣವಾಗಿ ಅನುಚಿತ ಹಾಗೂ ಅಶ್ಲೀಲತೆಯಿಂದ ಕೂಡಿದೆ. ಇಂತಹ ಕಾರ್ಯಕ್ರಮ ಆಯೋಜಿಸುವುದು ಸಂಘಕ್ಕೆ ಯಾವುದೇ ರೀತಿಯಲ್ಲಿ ಸೂಕ್ತವಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

"ದುರದೃಷ್ಟವಶಾತ್ ನಿನ್ನೆ ನಾವು ಹೋಳಿ ಸಂದರ್ಭದಲ್ಲಿ ದೆಹಲಿ ವಕೀಲರ ಸಂಘ ಆಯೋಜಿಸಿದ್ದ ಆಚರಣೆಯ ಕೆಲವು ವೀಡಿಯೊ ಕ್ಲಿಪಿಂಗ್‌ಗಳನ್ನು ನೋಡಿದೆವು. ತುಂಡು ಬಟ್ಟೆ ಧರಿಸಿದ ನರ್ತಕಿಯರು   ನರ್ತಿಸಲು ಸೂಕ್ತವಲ್ಲ ಎಂದು ಸರಿಯಾಗಿ ಕರೆಯಬಹುದಾದ ಪ್ರದರ್ಶನಗಳನ್ನು ನೀಡಿದರು. ಯಾವುದೇ ವಕೀಲರ ಸಂಘದ ಅಧಿಕೃತ ಹೆಸರಿನಲ್ಲಿ ಮತ್ತು ನ್ಯಾಯಾಲಯದ ಆವರಣದಲ್ಲಿ ಇಂತಹ ಕಾರ್ಯಕ್ರಮ  ಆಯೋಜಿಸುವುದು ವಕೀಲರಿಗೆ ಯೋಗ್ಯವಲ್ಲ. ನ್ಯಾಯವಾದಿಗಳಾದ ನಾವು ಸಂವಿಧಾನವನ್ನು ಎತ್ತಿಹಿಡಿಯಬೇಕು ಮತ್ತು ಕೆಲಸದ ಸ್ಥಳದಲ್ಲಿ ಲಿಂಗ ಸಮಾನತೆಗಾಗಿ ದುಡಿಯಬೇಕು” ಎಂದು ಪತ್ರ ಕಿವಿಮಾತು ಹೇಳಿದೆ.

“ಸುಪ್ರೀಂ ಕೋರ್ಟ್‌ನಿಂದ ಕೇವಲ ಒಂದು ಕಿ ಮೀಗೂ ಕಡಿಮೆ ಅಂತರದಲ್ಲಿರುವ ಪಟಿಯಾಲ ಹೌಸ್ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆಯಂದು ನಡೆದ ಹೋಳಿ ಹಬ್ಬ ಆಚರಣೆ ವೇಳೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಆಘಾತಕಾರಿ ಮತ್ತು ದಿಗಿಲು ಹುಟ್ಟಿಸುವಂತಿದೆ” ಎಂದು ವಕೀಲರು ವಿವರಿಸಿದ್ದಾರೆ.

ತಮ್ಮ ಅಹವಾಲು ನರ್ತಕಿಯರ ವಿರುದ್ಧವಲ್ಲ ಮತ್ತು ಪತ್ರದ ಮೂಲಕ ಅವರಿಗೆ ಅಗೌರವ ತೋರುವ ಉದ್ದೇಶ ತಮಗೆ ಇಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದು ಇಂತಹ ಕ್ರಮಗಳು ನ್ಯಾಯಾಲಯಗಳ ಘನತೆಯನ್ನು ಕಡಿಮೆ ಮಾಡಿ ಹಲವರು ಕಾನೂನಾತ್ಮಕ ಲೋಪ ಎಸಗಲು ಇಂಬು ನೀಡುತ್ತವೆ ಎಂದು ಆಕ್ಷೇಪಿಸಲಾಗಿದೆ.  

[ಪತ್ರದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Re_Objectionable_Holi_Milan_celebrations_2023.pdf
Preview