Supreme Court of India
Supreme Court of India  
ಸುದ್ದಿಗಳು

ವಾದಿಸಲು ಸಿದ್ಧತೆ ನಡೆಸದೆ, ಪ್ರಕರಣ ಮುಂದೂಡಲು ಕೋರುವ ವಕೀಲರಿಂದ ನ್ಯಾಯದಾನಕ್ಕೆ ಅಡ್ಡಿ: ಸುಪ್ರೀಂ ಕೋರ್ಟ್

Bar & Bench

ವಾದ ಮಂಡನೆಗೆ ತಯಾರಿ ನಡೆಸದೆ ನ್ಯಾಯಾಲಯಕ್ಕೆ ಬರುವ ವಕೀಲರಿಂದಾಗಿ ಪ್ರಕರಣಗಳನ್ನು ಮುಂದೂಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ವಿಷಾದ ವ್ಯಕ್ತಪಡಿಸಿದೆ. ಇಂತಹ ನಡೆ ನ್ಯಾಯದಾನವನ್ನು ವಿಳಂಬಗೊಳಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿತು.

ವಾದ ಮಂಡಿಸಬೇಕಾದ ವಕೀಲರು ಉಪಸ್ಥಿತರಿಲ್ಲದೇ ಇರುವುದರಿಂದ ಪ್ರಕರಣ ಮುಂದೂಡುವಂತೆ ಕೋರಿ ಹನ್ನೊಂದು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ವ್ಯಕ್ತಿಯ ಪರ ವಕೀಲರೊಬ್ಬರು ಮನವಿ ಮಾಡಿದ ಬಳಿಕ ನ್ಯಾಯಾಲಯ ಈ ಮಾತುಗಳನ್ನಾಡಿತು.

"[ಪ್ರಕರಣದ] ಕಾಗದಪತ್ರಗಳನ್ನು ಓದಿ. ಕೆಲವೊಮ್ಮೆ ವಕೀಲರಿಂದಲೇ ನ್ಯಾಯದಾನಕ್ಕೆ ಅಡ್ಡಿಯಾಗುತ್ತಿದೆ. ನಾವು ಬ್ರೀಫ್‌ಗಳನ್ನು ಓದಿ ಸಂಜೆ 5 ಗಂಟೆಯವರೆಗೆ ವಿಚಾರಣೆ ನಡೆಸುತ್ತೇವೆ.  ನೀವು 5 ನಿಮಿಷಗಳಲ್ಲಿ ಓದಿ ನಿಮ್ಮ ಪ್ರಕರಣವನ್ನು ವಾದಿಸಲು ಸಾಧ್ಯವಿಲ್ಲವೇ?" ಎಂದು ನ್ಯಾ. ಚಂದ್ರಚೂಡ್ ಅಭಿಪ್ರಾಯಪಟ್ಟರು.

ಶಿಕ್ಷೆ ಹಿಂಪಡೆಯುವಂತೆ ಕೋರಿ 81ರ ಹರೆಯದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು. ʼಪದೇ ಪದೇ ಪ್ರಕರಣ ಮುಂದೂಡುವ ನ್ಯಾಯಾಲಯʼ (ತಾರೀಖ್‌ ಪೇ ತಾರೀಖ್‌) ಎಂದು ಸುಪ್ರೀಂ ಕೋರ್ಟ್‌ಗೆ ಇರುವ ಹೆಸರನ್ನು ಬದಲಿಸಲು ಎಲ್ಲಾ ಯತ್ನಗಳನ್ನು ಮಾಡಲಾಗುವುದು ಎಂದು ಮುಂದಿನ ತಿಂಗಳು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾ. ಚಂದ್ರಚೂಡ್‌  ಇತ್ತೀಚೆಗೆ ತಿಳಿಸಿದ್ದರು.

ನ್ಯಾಯಾಲಯದ ಸಮಯವು ಅಮೂಲ್ಯವಾದುದು ಎಂಬುದನ್ನು ಅರಿತು ಸುಪ್ರೀಂ ಕೋರ್ಟ್‌ ವಕೀಲರು ಕೆಲಸ ಮಾಡುವ ವಿಧಾನವನ್ನು ಬದಲಿಸಿಕೊಳ್ಳಬೇಕು ಎಂದು ಕಳೆದ ಆಗಸ್ಟ್‌ನಲ್ಲಿ ನ್ಯಾ.ಚಂದ್ರಚೂಡ್ ಕರೆ ನೀಡಿದ್ದರು. ಕೋವಿಡ್ ಅಥವಾ ಕೌಟುಂಬಿಕ ಸಾವಿನ ಕಾರಣ ಹೊರತುಪಡಿಸಿ ಪ್ರಕರಣ ಮುಂದೂಡಲು ಕೋರುವಂತಿಲ್ಲ ಎಂದು ಅವರು ಆ ಸಂದರ್ಭದಲ್ಲಿ ಎಚ್ಚರಿಸಿದ್ದರು.

ತನ್ನೆದುರು ಪಟ್ಟಿ ಮಾಡಿದ ಎಲ್ಲಾ ಪ್ರಕರಣಗಳನ್ನು ಆಲಿಸುವುದಕ್ಕಾಗಿ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ  ಸೆಪ್ಟೆಂಬರ್ 30 ರಂದು, ರಾತ್ರಿ 9.10ರವರೆಗೆ ಪ್ರಕರಣಗಳ ವಿಚಾರಣೆ ನಡೆಸಿತ್ತು. ಸುಪ್ರೀಂ ಕೋರ್ಟ್‌ನ ಸಾಮಾನ್ಯ ಕಾರ್ಯಾವಧಿ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ಇರುತ್ತದೆ.