A1
A1
ಸುದ್ದಿಗಳು

ಅರ್ಜಿ ಸಾರಾಂಶ ಗಮನ ಸೆಳೆಯುವಂತೆ ಸಂಕ್ಷಿಪ್ತವಾಗಿರಲಿ, ಒಂದು ಪುಟ ಮೀರದಿರಲಿ: ವಕೀಲರಿಗೆ ಕೇರಳ ಹೈಕೋರ್ಟ್‌ ಕಿವಿಮಾತು

Bar & Bench

ನ್ಯಾಯಾಲಯದ ಗಮನ ಸೆಳೆಯಲು ಅರ್ಜಿಗಳ ಸಾರಾಂಶವನ್ನು (ಸಿನಾಪ್ಸಿಸ್‌) ಸಂಕ್ಷಿಪ್ತ ರೀತಿಯಲ್ಲಿ ರಚಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ವಕೀಲರಿಗೆ ಸಲಹೆ ನೀಡಿದೆ.

“ಉತ್ತಮ ಸಾರಾಂಶ ರಚನೆ ಎಂಬುದು ನ್ಯಾಯಾಲಯವನ್ನು ಪರಿಣಾಮಕಾರಿಯಾಗಿ ಹೇಗೆ ಸೆಳೆಯುವುದು ಮತ್ತು ವಾದ ಮಂಡಿಸುವುದು ಎಂಬುದನ್ನು ಕಲಿಸುವ ಕಲೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅಭಿಪ್ರಾಯಪಟ್ಟರು.

"ನಿಮಗೆ ಉತ್ತಮ ಸಾರಾಂಶವನ್ನು ಬರೆಯಲು ಸಾಧ್ಯವಾದರೆ ನೀವು ಉತ್ತಮವೂ, ಸಂಕ್ಷಿಪ್ತವೂ, ಸಂಗ್ರಾಹ್ಯವೂ ಆದ ವಾದವನ್ನು ಮಂಡಿಸಲು ಸಾಧ್ಯ. ಇದಕ್ಕೆ ಕೊಂಚ ಆಲೋಚಿಸಬೇಕಾಗುತ್ತದೆ. ನಿಮ್ಮ ಪ್ರಕರಣವೇನು? ಅದರತ್ತ ನ್ಯಾಯಾಲಯದ ಗಮನ ಸೆಳೆಯುವುದು ಹೇಗೆ? ಎನ್ನುವುದರೆಡೆಗೆ ಗಮನಹರಿಸಬೇಕಾಗುತ್ತದೆ" ಎಂದು ಅವರು ಕಿವಿಮಾತು ಹೇಳಿದರು.

ನ್ಯಾಯಾಧೀಶರು ಮೊದಲು ಸಾರಾಂಶ ಗಮನಿಸುತ್ತಾರೆ. ವಕೀಲರು ಈ ಹಂತದಲ್ಲಿ ಸ್ಪಷ್ಟವಾಗಿ ಬರೆಯುವ ಮೂಲಕ ಉತ್ತಮ ಅನಿಸಿಕೆ ಮೂಡಿಸುವುದು ಮುಖ್ಯ ಎಂದು ಅವರು ತಿಳಿಸಿದರು.

“ಮುಂದಿನ ದಿನಗಳಲ್ಲಿ ಒಂದು ಪುಟ ಮೀರದಂತೆ ಸಿನಾಪ್ಸಿಸ್‌ ಬರೆಯಲು ಯತ್ನಿಸಿ. ತೀರಾ ಆಗದೇ ಇರುವ ಸಂದರ್ಭದಲ್ಲಿ ಒಂದೂ ಕಾಲು ಪುಟಕ್ಕೆ ವಿಸ್ತರಿಸಬಹುದು. ಅದಕ್ಕಿಂತ ಹೆಚ್ಚು ಬೇಡ” ಎಂದು ಅವರು ಸಲಹೆ ನೀಡಿದರು.

ನಿರೀಕ್ಷಣಾ ಜಾಮೀನು ಅರ್ಜಿಯೊಂದರ ಸಾರಾಂಶ, ಅರ್ಜಿಯ ವಿವರದಷ್ಟೇ ಉದ್ದವಾಗಿರುವುದನ್ನು ಗಮನಿಸಿದ ನ್ಯಾಯಾಲಯ ಈ ಅಭಿಪ್ರಾಯವ್ಯಕ್ತಪಡಿಸಿತು.