ಪೊಲೀಸರ ಮುಂದೆ ಆರೋಪಿಯು ತಪ್ಪೊಪ್ಪಿಕೊಂಡಿದ್ದನ್ನು ಆಧರಿಸಿ ಸುದ್ದಿಗೆ ತಲೆಬರಹ ನೀಡುವುದರಿಂದ ಅಂತರ ಕಾಯ್ದುಕೊಳ್ಳುವಂತೆ ಕೇರಳ ಹೈಕೋರ್ಟ್ ವರದಿಗಾರರಿಗೆ ಸಂದೇಶ ರವಾನಿಸಿದೆ.
ಹದಿನಾಲ್ಕು ವರ್ಷಗಳ ಅಂತರದಲ್ಲಿ ತಮ್ಮ ಕುಟುಂಬದ ಆರು ಮಂದಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಜಾಲಿ ಜೋಸೆಫ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ. ಪಿ ವಿ ಕುನ್ಹಿಕೃಷ್ಣನ್ ನಡೆಸಿದರು. ಸಂಬಂಧಿ ಅಣ್ಣಮ್ಮ ಅವರ ಸಾವಿಗೆ ಸಂಬಂಧಿಸಿದಂತೆ ಜಾಲಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಕೆಯ ವಿರುದ್ಧವಿರುವ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಮೇಲ್ನೋಟಕ್ಕೆ ಸಾಬೀತುಪಡಿಸುವಂಥವಲ್ಲ ಎಂಬ ಆಧಾರದಲ್ಲಿ ಅವರಿಗೆ ನ್ಯಾಯಮೂರ್ತಿಗಳು ಜಾಮೀನು ಮಂಜೂರು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಕಾನೂನು ಬಾಹಿರ/ತಪ್ಪೊಪ್ಪಿಗೆ ಹೇಳಿಕೆಗಳನ್ನು ತಲೆಬರಹದಲ್ಲಿ ಬಳಸುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತನಿಖೆಯ ವಿಚಾರಗಳನ್ನು ತನಿಖಾ ಸಂಸ್ಥೆಗಳು ಹಾಗೂ ಮಾಧ್ಯಮಗಳು ಸೋರಿಕೆ ಮಾಡುವ ಸಂಪ್ರದಾಯಕ್ಕೆ ಅಸಮ್ಮತಿ ಸೂಚಿಸಿರುವ ನ್ಯಾಯಾಲಯವು ಇದರಿಂದ “ಕ್ರಿಮಿನಲ್ ತನಿಖೆಯ ಮೂಲಭೂತ ವಿಚಾರಗಳಿಗೆ” ಧಕ್ಕೆಯಾಗುತ್ತದೆ ಎಂದಿದ್ದಾರೆ. ನ್ಯಾಯಾಂಗದ ಆಚೆಗಿನ ಹೇಳಿಕೆಗಳ ಬಗ್ಗೆ ನಿರ್ದಿಷ್ಟವಾಗಿ ಮಾತನಾಡಿರುವ ನ್ಯಾಯಮೂರ್ತಿಗಳು, ಸಾಕ್ಷ್ಯವಾಗಿ ಪರಿಗಣಿತವಾಗದ ವಿಚಾರವನ್ನು ಪ್ರಕಟಿಸುವುದು ಸಮಸ್ಯಾತ್ಮಕವಾಗುತ್ತದೆ. ಏಕೆಂದರೆ, ಮಾಧ್ಯಮಗಳಲ್ಲಿ ಚರ್ಚಿಸಲ್ಪಟ್ಟ ವಸ್ತುವು ನ್ಯಾಯಾಲಯದಲ್ಲಿ ಪರಿಗಣಿತವಾಗುವುದಿಲ್ಲ ಎನ್ನುವುದು ಸಾರ್ವಜನಿಕರಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ.
ಹೇಳಿಕೆಗಳನ್ನು ಆಧರಿಸಿ ಯಾವ ವ್ಯಕ್ತಿಯ ವಿರುದ್ಧ ದಾಖಲೆಗಳು ಸಿಕ್ಕಿರುತ್ತವೋ ಅವರನ್ನು ಜನಸಾಮಾನ್ಯರು ಅನುಮಾನದಿಂದ ನೋಡಲಾರಂಭಿಸುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಒಪ್ಪಿಕೊಳ್ಳಬಹುದಾದ ಸಾಕ್ಷ್ಯಗಳನ್ನಷ್ಟೇ ಆಧರಿಸಿ ನ್ಯಾಯಾಲಯ ತೀರ್ಪು ನೀಡಿದರೆ ಆಗ ಸಾಮಾನ್ಯ ಜನರು ನ್ಯಾಯಾಂಗವನ್ನೂ ಅನುಮಾನದಿಂದ ನೋಡುವ ಸಾಧ್ಯತೆ ಇರುತ್ತದೆ ಎಂದು ಪೀಠವು ವಿಮರ್ಶಿಸಿತು.
ಸಾರ್ವಜನಿಕರಲ್ಲಿ ಕುತೂಹಲ ಹುಟ್ಟಿಸಿರುವ ಪ್ರಕರಣಗಳಲ್ಲಿ ತನಿಖೆಯ ಸಂದರ್ಭದಲ್ಲಿ ನೀಡಲಾಗುವ ಹೇಳಿಕೆಗಳು ಹೇಗೋ ಮಾಧ್ಯಮಗಳಿಗೆ ಸಿಕ್ಕಿಬಿಡುತ್ತವೆ ಎಂದಿರುವ ನ್ಯಾಯಪೀಠವು ಹೀಗೆ ಹೇಳಿದೆ.
ಮುರುಗೇಶನ್ ವರ್ಸಸ್ ಕೇರಳ ರಾಜ್ಯ ಪ್ರಕರಣದಲ್ಲಿ ಹೊರಡಿಸಿದ ತೀರ್ಪನ್ನು ಆಧರಿಸಿರುವ ಪೀಠವು ಹೀಗೆ ಹೇಳಿದೆ.
“... ವ್ಯಕ್ತಿಯೊಬ್ಬರ ವಿರುದ್ಧ ಪರಿಗಣಿಸಲ್ಪಟ್ಟ ಅಪರಾಧ ದೂರನ್ನು ದಾಖಲಿಸಿ, ಈ ಸಂಬಂಧಿತ ಎಫ್‌ಐಆರ್ ಅನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಗೆ ವರ್ಗಾಯಿಸಿದ ಬಳಿಕ ಅದು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅಂತಿಮ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವವರೆಗೆ ತನಿಖೆಗೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಯಾವೊಬ್ಬ ಪೊಲೀಸ್ ಅಧಿಕಾರಿಯೂ ಸೋರಿಕೆ ಮಾಡುವ ಹಕ್ಕು ಹೊಂದಿಲ್ಲ” ಎಂದು ಪೀಠ ಹೇಳಿದೆ. ಆದ್ದರಿಂದ ಸಂಯಮವಹಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ನ್ಯಾಯಪೀಠ ಒತ್ತಿ ಹೇಳಿದೆ.
ಜಾಲಿಗೆ ಜಾಮೀನು ದೊರೆತರೂ ಇತರೆ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿಲ್ಲದಿರುವುದರಿಂದ ಅವರು ಜೈಲಿನಲ್ಲೇ ಉಳಿಯಲಿದ್ದಾರೆ. ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.