ಸುದ್ದಿಗಳು

ಎರಡು ಸಾವಿರಕ್ಕೂ ಹೆಚ್ಚು ಗ್ರಾಮ, ಜೈಲುಗಳಲ್ಲಿ ಕಾನೂನು ಅರಿವು, ಜಾಗೃತಿ ಆಂದೋಲನ; ನವೆಂಬರ್‌ 14ರವರೆಗೆ ಮುಂದುವರಿಕೆ

ರಾಜ್ಯದ 30 ಜಿಲ್ಲೆಗಳಲ್ಲಿ 38 ಮೊಬೈಲ್‌ ವ್ಯಾನ್‌ಗಳ ಮೂಲಕ ಕಾನೂನು ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು, 6,008 ಗ್ರಾಮ ಪಂಚಾಯಿತಿಗಳನ್ನು ತಲುಪಲಾಗಿದೆ. ಈ ಮೂಲಕ 8.86 ಲಕ್ಷ ಮಂದಿಯನ್ನು ಸಂಪರ್ಕ ಮಾಡಲಾಗಿದೆ ಎಂದ ಕೆಎಸ್‌ಎಲ್‌ಎಸ್‌ಎ.

Siddesh M S

ರಾಜ್ಯದಾದ್ಯಂತ ಇದೇ ಪ್ರಥಮ ಬಾರಿಗೆ 2,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಕಾನೂನು ಜಾಗೃತಿ ಹಾಗೂ ಅರಿವು ಆಂದೋಲನ ಕಾರ್ಯಕ್ರಮ ನಡೆಸುವ ಮೂಲಕ ಮೈಲುಗಲ್ಲು ಸೃಷ್ಟಿಸಿದೆ.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ವತಿಯಿಂದ ದೇಶಾದ್ಯಂತ ಆರು ವಾರಗಳ ಕಾಲ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ರಾಜ್ಯದಲ್ಲೂ ಅಭಿಯಾನ ನಡೆಸಲಾಗುತ್ತಿದೆ. ಅಕ್ಟೋಬರ್‌ 2ರಂದು ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ನವದೆಹಲಿಯಲ್ಲಿ ಚಾಲನೆ ನೀಡಿದ್ದು, ನವೆಂಬರ್‌ 14ರ ವರೆಗೆ ಕಾನೂನು ಜಾಗೃತಿ ಮತ್ತು ಅರಿವು ಅಭಿಯಾನ ಮುಂದುವರಿಯಲಿದೆ.

ಕೆಎಸ್‌ಎಲ್‌ಎಸ್‌ಎ ಮೊದಲ ವಾರದಲ್ಲಿ 1,585 ಗ್ರಾಮಗಳಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದ್ದು, ಸುಮಾರು 80 ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇತರೆ ಪ್ರದೇಶಗಳಲ್ಲಿ 90 ಕಾರ್ಯಕ್ರಮ ಸಂಘಟಿಸಿದ್ದೂ ಇದರಲ್ಲಿ 12 ಸಾವಿರಕ್ಕೂ ಅಧಿಕ ಮಂದಿಗೆ ಕಾನೂನು ಅರಿವು ಮೂಡಿಸಲಾಗಿದೆ.

ವಿವಿಧ ಸಮಸ್ಯೆಗಳಲ್ಲಿ ಸಿಲುಕಿರುವವರಿಗೆ ನೆರವಾಗುವ ದೃಷ್ಟಿಯಿಂದ ರಾಜ್ಯದ 493 ಗ್ರಾಮ ಹಾಗೂ 37 ಇತರೆ ಪ್ರದೇಶಗಳಲ್ಲಿ ಕಾನೂನು ಸೇವಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರಗಳಿಂದ ಒಟ್ಟಾರೆ 24 ಸಾವಿರ ಮಂದಿಗೆ ಅನುಕೂಲವಾಗಿದೆ ಎಂದು ಎನ್‌ಎಎಲ್‌ಎಸ್‌ಎಗೆ ಕೆಎಸ್‌ಎಲ್‌ಎಸ್‌ಎ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿದೆ.

ಮಹಿಳೆಯರ ಹಕ್ಕು, ಸಬಲೀಕರಣ ಮತ್ತು ಕಾನೂನು ನೆರವಿನ ದೃಷ್ಟಿಯಿಂದ ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದೊಂದಿಗೆ ಎರಡು ಗ್ರಾಮಗಳಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಕೆಎಸ್‌ಎಲ್‌ಎಸ್‌ಎ ನಡೆಸಿದೆ.

ರಾಜ್ಯದಲ್ಲಿರುವ ವಿವಿಧ ಜೈಲುಗಳಲ್ಲಿ 48 ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, 9,520 ಕೈದಿಗಳಿಗೆ ಅವರ ಹಕ್ಕು ಮತ್ತು ಜೈಲಿನಲ್ಲಿ ಸಿಗಬೇಕಾದ ಸೌಲಭ್ಯಗಳ ಜಾಗೃತಿ ಮೂಡಿಸಲಾಗಿದೆ. 3,690 ಕೈದಿಗಳಿಗೆ ಕಾನೂನು ನೆರವನ್ನೂ ಕಲ್ಪಿಸಲಾಗಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ 38 ಮೊಬೈಲ್‌ ವ್ಯಾನ್‌ಗಳ ಮೂಲಕ ಕಾನೂನು ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದ್ದು, 6,008 ಗ್ರಾಮ ಪಂಚಾಯಿತಿಗಳನ್ನು ತಲುಪಲಾಗಿದೆ. ಈ ಮೂಲಕ 8.86 ಲಕ್ಷ ಮಂದಿಯನ್ನು ಸಂಪರ್ಕ ಮಾಡಲಾಗಿದೆ. ಡಿಜಿಟಲ್‌ ಮಾಧ್ಯಮದ ಮೂಲಕವು ಕಾನೂನು ಅರಿವು, ಜಾಗೃತಿ ಮತ್ತು ನೆರವು ಕಲ್ಪಿಸಲಾಗಿದೆ. ಫೇಸ್‌ಬುಕ್‌ನಲ್ಲಿ 91, ಯೂಟ್ಯೂಬ್‌ ಮೂಲಕ 20, ವೆಬಿನಾರ್‌ಗಳ ಮೂಲಕ 8 ಮತ್ತು ಟಿವಿ-ರೇಡಿಯೊಗಳ ಮೂಲಕ 15 ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ನ್ಯಾಯಾಲಯ ಆಧಾರಿತ ಸೇವೆಯ ಭಾಗವಾಗಿ 105 ಮಂದಿಗೆ ಪ್ಯಾನಲ್‌ ವಕೀಲರ ಸೇವೆ ಕಲ್ಪಿಸಲಾಗಿದ್ದು, 669 ಮಂದಿಗೆ ಕೌನ್ಸೆಲಿಂಗ್‌ ಮಾಡಲಾಗಿದೆ. ಇದರ ಜೊತೆಗೆ ಪೊಲೀಸ್‌ ಠಾಣೆಯಲ್ಲಿ 23 ಶಂಕಿತರಿಗೆ ಬಂಧನ ಪೂರ್ವದಲ್ಲಿ, ನ್ಯಾಯಾಲಯದ ಮುಂದೆ ಹಾಜರುಪಡಿಸುವುದಕ್ಕೂ ಮುನ್ನ 12 ಬಂಧಿತರಿಗೆ ಹಾಗೂ ರಿಮ್ಯಾಂಡ್‌ಗೆ ನೀಡಲಾಗಿರುವ 37 ಮಂದಿಗೆ ಕಾನೂನಿನ ನೆರವು ನೀಡಲಾಗಿದೆ ಎಂದು ಎನ್‌ಎಎಲ್‌ಎಸ್‌ಎಗೆ ಕೆಎಸ್‌ಎಲ್‌ಎಸ್‌ಎ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿದೆ.

“ಕೆಎಸ್‌ಎಲ್‌ಎಸ್‌ಎ ವತಿಯಿಂದ ಕರ್ನಾಟಕದಲ್ಲಿ ಬೃಹತ್‌ ಪ್ರಮಾಣದಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜನರಿಗೆ ಅವರ ಹಕ್ಕು, ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಡಲಾಗುವುದು. ಮೊದಲ ವಾರದಲ್ಲೇ 2 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. 43 ದಿನಗಳು ನಿರಂತರವಾಗಿ ಆಂದೋಲನ ನಡೆಸಲಾಗುತ್ತಿದೆ. ಮನೆ-ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸಾಕಷ್ಟು ಮಂದಿಗೆ ಕಾನೂನು ನೆರವನ್ನೂ ನೀಡಲಾಗಿದೆ” ಎಂದು ಅಧಿಕೃತ ಸೇವೆಯಲ್ಲಿರುವ (ಓಓಡಿ) ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಕೆಎಸ್‌ಎಲ್‌ಎಸ್‌ಎ ಸಾರ್ವಜನಿಕ ಸಂಪರ್ಕಾಧಿಕಾರಿ ವಿಘ್ನೇಶ್‌ ಕುಮಾರ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.