ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 11-11-2020

Bar & Bench

ಹಸಿರು ಪಟಾಕಿಗಳನ್ನೂ ನಿಷೇಧಿಸುವಂತೆ ಕೋರಿ ಪಿಐಎಲ್‌: ನಾಳೆ ಕರ್ನಾಟಕ ಹೈಕೋರ್ಟ್‌ ವಿಚಾರಣೆ

ಹಸಿರು ಪಟಾಕಿಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಸುಡುಮದ್ದುಗಳನ್ನು ನಿಷೇಧಿಸಬೇಕು ಎಂದು ಕೋರಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರೊಬ್ಬರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿರುವ ವಿಭಾಗೀಯ ಪೀಠ ಗುರುವಾರ ಪ್ರಕರಣದ ವಿಚಾರಣೆ ನಡೆಸಲಿದೆ.

ಪ್ರಕರಣದ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ವಿಷ್ಣು ಬಿ ಆಲಂಪಳ್ಳಿ ಅವರು ʼಹಸಿರು ಪಟಾಕಿಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅದು ಕೇವಲ ನಾಮ್‌ ಕೇ ವಾಸ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಟಾಕಿ ಯಾವುದೇ ಇದ್ದರೂ ಅದು ಪರಿಸರಕ್ಕೆ, ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ. ಜೊತೆಗೆ ವಿವಿಧ ರಾಜ್ಯಗಳಲ್ಲಿ ಪಟಾಕಿಗಳನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆʼ ಎಂದು ತಿಳಿಸಿದರು.

ಮನೆಯ ಎಲ್ಲಾ ಸದಸ್ಯರನ್ನು ವೈವಾಹಿಕ ವಿವಾದದಲ್ಲಿ ಸಿಲುಕಿಸುವ ಸಾಮಾನ್ಯ ಪ್ರವೃತ್ತಿಯನ್ನು ಪರಿಗಣಿಸುವ ಅಗತ್ಯವಿಲ್ಲ: ಕರ್ನಾಟಕ ಹೈಕೋರ್ಟ್

ವೈವಾಹಿಕ ವಿವಾದಗಳ ಸಂದರ್ಭದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಆರೋಪ ಹೊಂದಿರದ ಕುಟುಂಬ ಸದಸ್ಯರನ್ನು ʼಸಾಂದರ್ಭಿಕ ಉಲ್ಲೇಖʼದ ಆಧಾರದಲ್ಲಿ ಕಿರುಕುಳಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ನ್ಯಾಯಮೂರ್ತಿ ಅಶೋಕ್ ಜಿ ನಿಜಗಣ್ಣವರ್ ಅವರಿದ್ದ ಏಕ ಸದಸ್ಯ ಪೀಠ ಮನೆಯ ಎಲ್ಲಾ ಸದಸ್ಯರನ್ನು ವೈವಾಹಿಕ ವಿವಾದದಲ್ಲಿ ಸಿಲುಕಿಸುವ ಸಾಮಾನ್ಯ ಪ್ರವೃತ್ತಿಯ ಬಗ್ಗೆ ಅಸಮಾಧಾನ ಸೂಚಿಸಿದೆ.

High Court of Karnataka

ತಮ್ಮ ಅತ್ತೆ, ನಾದಿನಿ ಹಾಗೂ ಮೈದುನನ ವಿರುದ್ಧ ವರದಕ್ಷಿಣೆ ಆರೋಪ ಹೊರಿಸಿದ್ದ ಮಹಿಳೆಯೊಬ್ಬರ ಪ್ರಕರಣವನ್ನು ತಿರಸ್ಕರಿಸಿರುವ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮೇಲಿನ ಅಂಶವನ್ನು ಹೇಳಿತು. 2013ರಲ್ಲಿ ಗಂಡನ ಕಡೆಯವರಿಂದ ಚಿನ್ನಾಭರಣ ವಾಪಸ್‌ ಪಡೆಯುವ ಸಲುವಾಗಿ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪಟಾಕಿ ನಿಷೇಧ: ಕಲ್ಕತ್ತಾ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ʼಸುಪ್ರೀಂʼ

ಮುಂಬರುವ ಹಬ್ಬಗಳ ವೇಳೆ ಪಟಾಕಿ ಬಳಕೆ ನಿಷೇಧಿಸುವಂತೆ ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ. ʼಹಬ್ಬಗಳು ಮುಖ್ಯವೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಮಾನವ ಜೀವ ಅಪಾಯದಲ್ಲಿದ್ದಾಗ, ಜೀವವನ್ನು ಉಳಿಸುವ ಪ್ರಯತ್ನವನ್ನು ಮಾಡಬೇಕುʼ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ರಜಾಕಾಲದ ಪೀಠ ಅಭಿಪ್ರಾಯಪಟ್ಟಿದೆ.

firecrackers

ಕೋವಿಡ್‌ ಹಿನ್ನೆಲೆಯಲ್ಲಿ ಈ ಸಾಲಿನ ಕಾಳಿ ಪೂಜೆ ಮತ್ತು ದೀಪಾವಳಿ ವೇಳೆ ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬಳಸಬಾರದು ಎಂದು ಕಲ್ಕತ್ತಾ ಹೈಕೋರ್ಟ್‌ ಈ ತಿಂಗಳ ಆರಂಭದಲ್ಲಿ ಆದೇಶ ನೀಡಿತ್ತು. ಅಲ್ಲದೆ ಉಸಿರಾಟದ ಮೇಲೆ ದುಷ್ಪರಿಣಾಮ ಬೀರುವ ಕಾರಣಕ್ಕೆ ರಾಜ್ಯ ಸರ್ಕಾರ ಈ ವರ್ಷ ಅವುಗಳನ್ನು ಸಿಡಿಸದಂತೆ ಮನವಿ ಮಾಡಿರುವುದನ್ನು ಉಲ್ಲೇಖಿಸಿತು.

ದೀಪಾವಳಿ ಹಿನ್ನೆಲೆಯಲ್ಲಿ ಐದು ದಿನಗಳವರೆಗೆ ಎರಡು ಜೈನ ಮಂದಿರ ತೆರೆಯಲು ಅವಕಾಶ ನೀಡಿದ ಬಾಂಬೆ ಹೈಕೋರ್ಟ್‌

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಐದು ದಿನಗಳವರೆಗೆ ಭಕ್ತರ ಪ್ರವೇಶಕ್ಕೆ ನಿಯಂತ್ರಣ ಹೇರುವ ಮೂಲಕ ನಿರ್ದಿಷ್ಟ ಅವಧಿಯಲ್ಲಿ ಎರಡು ಜೈನ ಮಂದಿರಗಳನ್ನು ತೆರೆಯಲು ಸಂಬಂಧಿತ ಟ್ರಸ್ಟ್‌ಗಳಿಗೆ ಬಾಂಬೆ ಹೈಕೋರ್ಟ್‌ ಅನುಮತಿ ನೀಡಿದೆ.

Jain Temple

ನ್ಯಾಯಮೂರ್ತಿಗಳಾದ ಎಸ್‌ ಕೆ ಕಥಾವಲ್ಲಾ ಮತ್ತು ಅಭಯ್‌ ಅಹುಜಾ ಅವರಿದ್ದ ರಜಾ ಕಾಲದ ಪೀಠವು ನವೆಂಬರ್‌ 13 ರಿಂದ 17ರ ವರೆಗೆ ಬೆಳಿಗ್ಗೆ 6 ರಿಂದ 1 ಗಂಟೆ ಮತ್ತು ಸಂಜೆ 6 ರಿಂದ 9 ಗಂಟೆಯವರೆಗೆ ಮಂದಿರ ಬಾಗಿಲು ತೆರೆಯಲು ಅನುಮತಿಸಿದೆ. ರಾಜ್ಯ ಸರ್ಕಾರವು ಟಿಎಕೆಎಲ್‌ ಗ್ಯಾನ್‌ ಮಂದಿರ ಟ್ರಸ್ಟ್‌ ಮತ್ತು ಎಂಆರ್‌ಸಿ ಟ್ರಸ್ಟ್‌ ಮನವಿಗೆ ಉತ್ತರಿಸದ ಹಿನ್ನೆಲೆಯಲ್ಲಿ ಅವುಗಳು ದೀಪಾವಳಿಯ ಹಿನ್ನೆಲೆಯಲ್ಲಿ ಮಂದಿರ ತೆರೆಯಲು ಅನುಮತಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದವು.

ಸತಾನ್‌ಕುಲಂ ಲಾಕಪ್‌ ಸಾವು: ಎಸ್‌ಐ ಜಾಮೀನು ಅರ್ಜಿ ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌

ದೇಶಾದ್ಯಂತ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ತಮಿಳುನಾಡಿನ ಸತಾನ್‌ಕುಲಂ ಲಾಕಪ್‌ ಸಾವುಗಳ ಪ್ರಕರಣದಲ್ಲಿಆರೋಪಿಯಾಗಿರುವ ಸಬ್‌ ಇನ್‌ಸ್ಪೆಕ್ಟರ್‌ ಎಸ್‌ ಶ್ರೀಧರ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ಮದ್ರಾಸ್‌ ಹೈಕೋರ್ಟ್‌, ಪೊಲೀಸ್‌ ಬಂಧನದಲ್ಲಿ ಸಂಭವಿಸುವ‌ ಸಾವುಗಳನ್ನು ನಿರ್ಮೂಲನೆ ಮಾಡುವ ಸಂಬಂಧ ಪ್ರಗತಿಪರ, ಪ್ರಜಾಪ್ರಭುತ್ವ ರಾಷ್ಟ್ರವು ಸೂಕ್ಷ್ಮವಾಗಿರಬೇಕು ಎಂದು ಹೇಳಿದೆ.

Police

ನ್ಯಾಯಮೂರ್ತಿ ಎಸ್‌ ಎಂ ಸುಬ್ರಮಣಿಯಂ‌ ಅವರಿದ್ದ ಏಕ ಸದಸ್ಯ ಪೀಠವು ಆದೇಶ ಹೊರಡಿಸುವ ಸಂದರ್ಭದಲ್ಲಿ ಪೊಲೀಸ್‌ ಠಾಣೆ ಸಂಪರ್ಕಿಸುವಾಗ ನಾಗರಿಕ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪೊಲೀಸ್‌ ಠಾಣೆಗಳಲ್ಲಿ ಸಿಸಿ ಟಿವಿಗಳ ನಿರ್ವಹಣೆ ಮಾಡುವಂತೆ ಮೈಲಾಪುರ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ. ಪ್ರಕರಣ ಗಂಭೀರತೆಯನ್ನು ಪರಿಗಣಿಸಿ ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಶ್ರೀಧರ್‌ ಪ್ರಭಾವಿಸುವ ಸಾಧ್ಯತೆಯನ್ನು ಉಲ್ಲೇಖಿಸಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಲು ನಿರಾಕರಿಸಿತು.

ಪಿ. ಜಯರಾಜ್‌ ಹಾಗೂ ಅವರ ಪುತ್ರ ಜೆ ಬೆನಿಕ್ಸ್ ಎನ್ನುವ ವರ್ತಕರನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಸತಾನ್‌ಕುಲಂ ಠಾಣೆಗೆ ಎಳೆದೊಯ್ದು ಚಿತ್ರಹಿಂಸೆ ನೀಡಿ ಕೊಂದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.