ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ರಾಜಕೀಯ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಕಾನೂನು ಕ್ರಮಜರುಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆಯೇ ಎಂದು ಹೈಕೋರ್ಟ್ ಗುರುವಾರ ಪ್ರಶ್ನಿಸಿದೆ.
ಮಾಸ್ಕ್ ಧರಿಸದೇ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ರಾಜಕೀಯ ವಲಯದ ನಾಯಕರ ವಿರುದ್ಧ ಯಾವುದೇ ತೆರನಾದ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ಪರಿಗಣಿಸಿದ ನ್ಯಾಯಾಲಯವು ಸರ್ಕಾರಕ್ಕೆ ಮೇಲಿನ ಪ್ರಶ್ನೆ ಹಾಕಿತು. “ಇದುವರೆಗೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಕಾನೂನನ್ನು ಪ್ರಯೋಗಿಸಿಲ್ಲವೇಕೆ? ಸಂಬಂಧಿತ ವ್ಯಕ್ತಿಗಳು ದಂಡ ಪಾವತಿಸಿದ್ದಾರೆ ಎಂದರೆ ಅವರು ನಿಯಮ ಉಲ್ಲಂಘಿಸಿದ್ದಾರೆ ಎಂದೇ ಅರ್ಥ. ಅವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸದಿರುವುದು ಗಂಭೀರ ಪರಿಣಾಮ ಬೀರಲಿದೆ. ಈ ಸಂಬಂಧ ಮುಂದಿನ ವಿಚಾರಣೆಯೆ ವೇಳೆಗೆ ನಿರ್ಧಾರ ಕೈಗೊಂಡು ಪೀಠಕ್ಕೆ ಉತ್ತರಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ. ಮಾಸ್ಕ್ ಧರಿಸದಿದ್ದ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ದಂಡ ಪಾವತಿಸಿದ್ದಾರೆ ಎಂದು ಪೀಠಕ್ಕೆ ಸರ್ಕಾರ ತಿಳಿಸಿತ್ತು.
ಕೋವಿಡ್ ಸಂದರ್ಭದಲ್ಲಿ ನಷ್ಟವಾಗಿರುವ ಕರ್ತವ್ಯದ ದಿನಗಳನ್ನು ತುಂಬಿಕೊಳ್ಳುವ ದೃಷ್ಟಿಯಿಂದ ಚಳಿಗಾಲದ ರಜಾ ಅವಧಿಯನ್ನು ಕರ್ನಾಟಕ ಹೈಕೋರ್ಟ್ ಕಡಿತಗೊಳಿಸಿದೆ. ರಜಾ ಕಾಲದ ಅವಧಿಯು ಡಿಸೆಂಬರ್ 24ರಿಂದ ಮುಂದಿನ ವಷದ ಜನವರಿ 1ರ ವರೆಗೆ ಮಾತ್ರ ಇರಲಿದೆ. ಚಳಿಗಾಲದ ರಜಾ ಅವಧಿಯು ಹಿಂದೆ ಡಿಸೆಂಬರ್ 21ಕ್ಕೆ ಆರಂಭವಾಗುತ್ತಿತ್ತು.
ಕೋವಿಡ್‌ನಿಂದಾಗಿ ನ್ಯಾಯಾಲಯದ ಕರ್ತವ್ಯದ ಬಹುತೇಕ ಅವಧಿ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಂದು ಹೈಕೋರ್ಟ್‌ನ ಪೂರ್ಣ ಪೀಠವು ರಜಾ ದಿನಗಳ ಕಡಿತ ಮಾಡಲು ನಿರ್ಧರಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಹಾಗೂ ರಾಜ್ಯ ವಕೀಲರ ಪರಿಷತ್‌ಗಳು ರಜಾ ದಿನಗಳ ಕಡಿತಕ್ಕೆ ಒಪ್ಪಿಗೆ ಸೂಚಿಸಿವೆ.
ಕೊಲೆ ಆರೋಪದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಈಚೆಗೆ ಪಟನಾ ಹೈಕೋರ್ಟ್ ಖುಲಾಸೆಗೊಳಿಸಿದೆ. ಆಸ್ತಿ ಕಬಳಿಸುವ ಉದ್ದೇಶದಿಂದ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಕೊಲೆ ಮಾಡಿದ ಆರೋಪದಲ್ಲಿ ಕೆಳಹಂತದ ನ್ಯಾಯಾಲಯವು ವ್ಯಕ್ತಿಯೊಬ್ಬರನ್ನು ದೋಷಿ ಎಂದು ಘೋಷಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾ. ಎಸ್ ಕುಮಾರ್ ಅವರಿದ್ದ ಪೀಠವು “ನ್ಯಾಯಾಲಯಗಳು ಕಾರ್ಣಿಕ ನುಡಿಯುವುದಿಲ್ಲ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಹೊಗಳುವುದು ನ್ಯಾಯಾಲಯಗಳ ಕೆಲಸವಲ್ಲ. ಇದನ್ನು ಅರಿಯುವಲ್ಲಿ ಕೆಳಹಂತದ ನ್ಯಾಯಾಲಯ ವಿಫಲವಾಗಿದೆ. ನ್ಯಾಯಾಲಯಗಳು ಸಂಯಮ ವಹಿಸುವುದರ ಜೊತೆಗೆ ಸಂವಿಧಾನದ ಅಡಿ ನೀಡಲಾಗಿರುವ ವ್ಯಕ್ತಿಯ ಹಕ್ಕುಗಳನ್ನು ಸಾರ್ವಜನಿಕ ಅಭಿಪ್ರಾಯಕ್ಕಿಂತ ಉನ್ನತ ಸ್ಥಾನದಲ್ಲಿಡಬೇಕು” ಎಂದಿದೆ.
ತೆಲಂಗಾಣ ಹೈಕೋರ್ಟ್‌ನ ನವೆಂಬರ್ 12ರ ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸುವಂತೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ನ್ಯಾ. ಸಂಜಯ್ ಖನ್ನಾ ಅವರಿದ್ದ ರಜಾಕಾಲದ ಪೀಠವು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ನವೆಂಬರ್ 9ರಂದು ಹೊರಡಿಸಿರುವ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ರಾಜ್ಯದಲ್ಲಿ ಪಟಾಕಿ ಬಳಕೆ ಮತ್ತು ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ನವೆಂಬರ್ 12ರಂದು ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಕೋರಿ ತೆಲಂಗಾಣ ಪಟಾಕಿ ಮಾರಾಟಗಾರರ ಸಂಘ (ಟಿಎಫ್‌ಡಬ್ಲುಡಿಎ) ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.