ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |22-3-2021

>> ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ನೂತನ ನ್ಯಾಯಮೂರ್ತಿಗಳು >> ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್‌ >> ಕರ್ಣನ್‌ ದೂರಿಗೆ ಸ್ಪಂದಿಸದಂತೆ ಕೋರಿದ ಮದ್ರಾಸ್‌ ಹೈಕೋರ್ಟ್‌ >> ಫ್ಯೂಚರ್‌ ಬಿಯಾನಿ ಆಸ್ತಿ ಲಗತ್ತಿಸಲು ತಡೆ

Bar & Bench

ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ನೂತನ ನ್ಯಾಯಮೂರ್ತಿಗಳ ನೇಮಕ

ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನ್ಯಾಯಾಂಗ ಅಧಿಕಾರಿಗಳಾದ ರಾಜೇಂದ್ರ ಬಾದಾಮಿಕರ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ಇಬ್ಬರನ್ನೂ ಹೈಕೋರ್ಟ್‌ಗೆ ಪದೋನ್ನತಿ ನೀಡುವಂತೆ ಫೆ. 5ರಂದು ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿತ್ತು. ಬಾದಾಮಿಕರ್ ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರು ರಿಜಿಸ್ಟ್ರಾರ್ (ವಿಜಿಲೆನ್ಸ್) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪದೇ ಪದೇ ಕೋವಿಡ್ ನಿಯಮ ಉಲ್ಲಂಘಿಸಿದ ಅಭ್ಯರ್ಥಿಗಳ ಅನರ್ಹತೆ : ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದು ಪದೇ ಪದೇ ಕೋವಿಡ್‌ ನಿಯಮ ಉಲ್ಲಂಘಿಸಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದೆ.

Election Rally (For representational purposes only)Hindustan Times

ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರಿದ್ದ ಪೀಠ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿದೆ. ಅನರ್ಹತೆ ಪ್ರಶ್ನಿಸಿ ಉತ್ತರ ಪ್ರದೇಶದ ಮಾಜಿ ಮಹಾನಿರ್ದೇಶಕ (ಪೊಲೀಸ್) ಡಾ. ವಿಕ್ರಮ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಘೋಷಿಸುವಾಗ, ಚುನಾವಣಾ ಆಯೋಗ ಮುಖಗವಸು ಧರಿಸುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಈ ನಿಯಮವನ್ನು ಪಾಲಿಸದೇ ಇರುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪ. ಏಪ್ರಿಲ್‌ 30ಕ್ಕೆ ವಿಚಾರಣೆ ನಿಗದಿಯಾಗಿದೆ.

ತನಿಖೆಯ ದಿಕ್ಕುತಪ್ಪಿಸಲು ಜಾತಿಯ ಸ್ಥಾನಮಾನ ಬಳಸಿಕೊಂಡ ಸಿ ಎಸ್‌ ಕರ್ಣನ್‌: ಮದ್ರಾಸ್‌ ಹೈಕೋರ್ಟ್‌

ನಿವೃತ್ತ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಅವರು ತಮ್ಮ ಜಾತಿಯ ಸ್ಥಾನಮಾನವನ್ನು ದುರುಪಯೋಗಪಡಿಸಿಕೊಂಡಿದ್ದು ತನಿಖಾಧಿಕಾರಿಗಳ ಮೇಲೆ ಜಾತಿ ನಿಂದನೆಯ ಆರೋಪವನ್ನು ಹೊರಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದ್ದು, ಅವರು ನೀಡುವ ಯಾವುದೇ ದೂರನ್ನು ಪರಿಗಣಿಸದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯೋಗ (ಎಸ್‌ಸಿ / ಎಸ್‌ಟಿ) ಮತ್ತು ತಮಿಳುನಾಡು ಮಾನವ ಹಕ್ಕು ಆಯೋಗವನ್ನು ನಿರ್ಬಂಧಿಸಿದೆ.

ಜಾತಿಯನ್ನು ನೆಪವಾಗಿಟ್ಟುಕೊಂಡು ತನಿಖಾ ತಂಡವನ್ನು ಬೆದರಿಸುತ್ತಿದ್ದಾರೆ ಎಂದು ತಮಿಳುನಾಡು ಮತ್ತು ಪುದುಚೆರಿ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಇ ಎಂ ಸತ್ಯನಾರಾಯಣನ್‌ ಮತ್ತು ಎ ನಕ್ಕೀರನ್‌ ಅವರಿದ್ದ ಪೀಠ ತತ್ಕಾಲೀನ ಮಧ್ಯಂತರ ಆದೇಶ ಜಾರಿ ಮಾಡಿದೆ. ಮಹಿಳೆಯರು ಮತ್ತು ನ್ಯಾಯಾಂಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವೀಡಿಯೊಗಳನ್ನು ಹರಿಬಿಟ್ಟ ಆರೋಪದ ಮೇರೆಗೆ ನ್ಯಾ. ಕರ್ಣನ್‌ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು.

ಫ್ಯೂಚರ್- ಬಿಯಾನಿ ಆಸ್ತಿ ಜಪ್ತಿಗೆ ಸೂಚಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

ರಿಲಯನ್ಸ್‌ನೊಂದಿಗೆ ಫ್ಯೂಚರ್‌ ಗ್ರೂಪ್‌ ಮಾಡಿಕೊಂಡ ಒಪ್ಪಂದದ ವಿರುದ್ಧ ತುರ್ತು ತೀರ್ಪನ್ನು ಜಾರಿಗೊಳಿಸಲು ಅಮೆಜಾನ್‌ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಫ್ಯೂಚರ್ ಗ್ರೂಪ್ ಕಂಪೆನಿ ಮತ್ತು ಕಿಶೋರ್ ಬಿಯಾನಿ ಅವರ ಆಸ್ತಿ ಜಪ್ತಿಗೆ ನಿರ್ದೇಶಿಸಿದ್ದ ಹಾಗೂ ರೂ 20 ಲಕ್ಷ ದಂಡ ವಿಧಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ತಡೆ ನೀಡಿದೆ.

Amazon, Future Group, and Reliance

ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ಅವರಿದ್ದ ಪೀಠ ಮುಂದಿನ ಆದೇಶದವರೆಗೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ತಡೆ ಹಿಡಿಯುವುದಾಗಿ ತಿಳಿಸಿತು. ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು ಏಕಸದಸ್ಯ ಪೀಠದ ಆದೇಶವನ್ನು ತಡೆಹಿಡಿಯುವಂತೆ ಕೋರಿದ್ದರು. ಫ್ಯೂಚರ್‌ ಗ್ರೂಪ್‌ ಪರವಾಗಿ ಇಕ್ಬಾಲ್‌ ಚಾಗ್ಲಾ, ಅಮೆಜಾನ್‌ ಪರವಾಗಿ ಗೋಪಾಲ್‌ ಸುಬ್ರಮಣಿಯಂ, ಹಿರಿಯ ನ್ಯಾಯವಾದಿ ರಾಜೀವ್‌ ನಾಯರ್‌ ವಾದ ಮಂಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 30ಕ್ಕೆ ನಿಗದಿಯಾಗಿದೆ.