ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಉದ್ಯೋಗಕ್ಕೆ ಹಾಜರಾಗದ ವಿಕಲಚೇತನ ಸಿಬ್ಬಂದಿಗೆ ಆರ್ಥಿಕ ಸವಲತ್ತು ನಿರಾಕರಿಸದೆ ಎಚ್ಚರವಹಿಸುವಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಬುಧವಾರ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಕಲಚೇತನ ಸಿಬ್ಬಂದಿಗೆ ಆರ್ಥಿಕ ಸವಲತ್ತು ತಡೆಯುವ ಬಿಎಂಸಿಯ ಕ್ರಮವು ಅಕ್ರಮವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾ. ಜಿ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಬಾಕಿ ಇರುವ ಆರ್ಥಿಕ ಸವಲತ್ತನ್ನು ಲೆಕ್ಕಾಚಾರ ಹಾಕಿ, ಎರಡು ಕಂತುಗಳಲ್ಲಿ ಬಿಡುಗಡೆ ಮಾಡುವಂತೆ ಸೂಚಿಸಿದೆ. ಮೊದಲ ಕಂತನ್ನು ದೀಪಾವಳಿಗೂ ಮುನ್ನ, ಮತ್ತೊಂದು ಕಂತನ್ನು 45 ದಿನಗಳ ಬಳಿಕ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಜನವರಿ 5ರಂದು ಕ್ಯಾಂಪಸ್‌ನಲ್ಲಿ ಬೋಧಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣವು ಈಗಾಗಲೇ ದೆಹಲಿ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.
ದಾಳಿಯಲ್ಲಿ ಗಾಯಗೊಂಡಿದ್ದ ಜೆಎನ್‌ಯು ಪ್ರೊಫೆಸರ್ ಸುಚಿತ್ರಾ ಸೇನ್ ಅವರು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156(3) ಅಡಿ ಮನವಿ ಸಲ್ಲಿಸಿದ್ದರು. ದಾಳಿಯ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಇದರಲ್ಲಿ ಅರ್ಜಿದಾರರ ಮೇಲಿನ ದಾಳಿಯೂ ಒಳಪಟ್ಟಿದೆ. ಹೀಗಿರುವಾಗ ಮತ್ತೊಂದು ಎಫ್‌ಐಆರ್ ದಾಖಲಿಸುವ ಅಗತ್ಯವಿಲ್ಲ ಎಂದು ಸಾಕೇತ್‌ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಸಿಂಗ್ ರಜಾವತ್ ಹೇಳಿದ್ದಾರೆ.
ಕೋವಿಡ್ ರೋಗಿಗಳ ಮನೆಯ ಹೊರಗೆ ಭಿತ್ತಿಪತ್ರ ಲಗತ್ತಿಸುವ ಮೂಲಕ ಅವರ ಗುರುತು ಬಹಿರಂಗಪಡಿಸುವ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯನ್ನು ನವೆಂಬರ್ 5ರಂದು ಸುಪ್ರೀಂ ಕೋರ್ಟ್ ನಡೆಸಲಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ಪೀಠವು ಸಾಲಿಸಿಟರ್ ಜನರಲ್ ಅವರಿಗೆ ಪಿಐಎಲ್ ಪ್ರತಿ ತಲುಪಿಸುವಂತೆ ಸೂಚಿಸಿದೆ. ಭಿತ್ತಿಪತ್ರವನ್ನು ಅಂಟಿಸುವ ಮೂಲಕ ರೋಗಿಗಳ ಗುರುತನ್ನು ಬಹಿರಂಗಪಡಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸರ್ಕಾರಿ ಅಭಿಯೋಜಕರ ಮೇಲೆ ಹಲ್ಲೆ ಮಾಡಿದ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಆರಂಭಿಸಲು ಅನುಮತಿ ಕೋರಿ ದೆಹಲಿಯ ಸ್ಥಾಯಿ ವಕೀಲ ರಾಹುಲ್ ಮೆಹ್ರಾ ಅವರಿಗೆ ವಕೀಲ ಅಮಿತ್ ಸಾಹ್ನಿ ಮನವಿ ಮಾಡಿದ್ದಾರೆ. ನ್ಯಾಯಾಂಗ ನಿಂದನೆ ಕಾಯಿದೆ – 1971ರ ಸೆಕ್ಷನ್ 15ರ ಅಡಿ ಮನವಿ ಸಲ್ಲಿಕೆಯಾಗಿದೆ.
ಸಿಬಿಐ ಡಿಐಜಿ ರಾಘವೇಂದ್ರ ವತ್ಸ್ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಕೋರಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಾಜಿ ಕಾರ್ಯದರ್ಶಿ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಲು ತಡಮಾಡುತ್ತಿರುವುದಕ್ಕೆ ಸಿಬಿಐ ಕೇಂದ್ರ ಕಚೇರಿಯಲ್ಲಿ ವತ್ಸ್ ಅವರು ಸಿಬಿಐ ಸಾರ್ವಜನಿಕ ಅಭಿಯೋಜಕ ಸುನಿಲ್ ಕುಮಾರ್ ವರ್ಮಾ ಅವರಿಗೆ ಗುದ್ದಿ, ಕತ್ತು ಹಿಸುಕಿ ಹಲ್ಲೆ ಮಾಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.