ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 29-10-2020
ದೀಪಕ್ ಮಿಶ್ರಾ ಸಿಜೆಐಯಾಗಿ ಬಡ್ತಿ ಹೊಂದಿದ್ದನ್ನು ಪ್ರಶ್ನಿಸಿದ್ದ ಸ್ವಾಮಿ ಓಂಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದ ಸುಪ್ರೀಂ
ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪದೋನ್ನತಿ ಪ್ರಶ್ನಿಸಿ 2017ರಲ್ಲಿ ಅರ್ಜಿ ಸಲ್ಲಿಸಿದ್ದ ಸ್ವಾಮಿ ಓಂ ಅವರಿಗೆ 5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ. ನಿವೃತ್ತ ನ್ಯಾ. ಮಿಶ್ರಾ ಅವರ ಪದೋನ್ನತಿ ಪ್ರಶ್ನಿಸಿದ್ದ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಓಂ ಅವರದ್ದು ಜನಪ್ರಿಯತೆಗಾಗಿ ಮಾಡಿದ ಯತ್ನ ಎಂದಿದ್ದ ಸುಪ್ರೀಂ ಕೋರ್ಟ್ 2017ರ ಆಗಸ್ಟ್‌ನಲ್ಲಿ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಕೋವಿಡ್‌ಗೆ ಅನುಮತಿ ಪಡೆಯದ ಔಷಧ ಬಳಕೆ: ಕೇಂದ್ರಕ್ಕೆ ನೋಟಿಸ್ ಜಾರಿ
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಮತಿ ಪಡೆಯದೇ ರೆಮ್ಡೆಸಿವಿರ್ ಮತ್ತು ಫಾವಿಪಿರಾವಿರ್ ಬಳಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮನವಿ ಆಧರಿಸಿ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕೊರೊನಾ ಸೋಂಕಿತರಿಗೆ ನೀಡಲು ಇವುಗಳನ್ನು ಅಧಿಕೃತ ಔಷಧ ಎಂದು ಅಕ್ಟೋಬರ್ 15ರ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಅಧಿಕೃತವಾಗಿ ಹೆಸರಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠಕ್ಕೆ ಅರ್ಜಿದಾರ ವಕೀಲರಾದ ಎಂ ಎಲ್ ಶರ್ಮಾ ವಿವರಿಸಿದರು. ಅರಿವು ಇರಲಿ ಎಂದು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೀಠ ಹೇಳಿದೆ.
ನೂಹ್, ಮೇವತ್‌ನಲ್ಲಿ ಹಿಂದೂಗಳ ಸ್ಥಿತಿ ಕರುಣಾಜನಕ ಎಂದು ಅರ್ಜಿ ಸಲ್ಲಿಕೆ: ಎಸ್‌ಐಟಿ ತನಿಖೆಗೆ ಮನವಿ
ಹರಿಯಾಣದ ನೂಹ್ ಜಿಲ್ಲೆಯಲ್ಲಿರುವ ಪ್ರಭಾವಿ ಮುಸ್ಲಿಂ ಸಮುದಾಯದ ಸದಸ್ಯರು ಆ ಪ್ರದೇಶದಲ್ಲಿನ ಹಿಂದೂಗಳ ಸಂಖ್ಯೆಯನ್ನು ಮೀರಿದ್ದು, ಹಿಂದೂಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ಸದರಿ ಪ್ರದೇಶದ ನಿವಾಸಿಗಳಾದ ಹಿಂದೂಗಳ ಬದುಕುವ ಹಕ್ಕು, ವೈಯಕ್ತಿಕ ಹಕ್ಕು ಮತ್ತು ಧಾರ್ಮಿಕ ಹಕ್ಕುಗಳನ್ನು ಪ್ರಭಾವಿ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದ ಸದಸ್ಯರು, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ನಾಶಪಡಿಸಿವೆ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರ ಗುಂಪು ವಕೀಲ ವಿಷ್ಣು ಶಂಕರ್ ಜೈನ್ ಅವರ ಮೂಲಕ ಮನವಿ ಸಲ್ಲಿಸಿದೆ.
ನೂತನ ಸಿಐಸಿಯಾಗಿ ಯಶವರ್ಧನ್ ಕುಮಾರ್ ಸಿನ್ಹಾ ನೇಮಕ
ಕೇಂದ್ರ ಸರ್ಕಾರವು ಮುಖ್ಯ ಮಾಹಿತಿ ಆಯುಕ್ತರನ್ನಾಗಿ (ಸಿಐಸಿ) ಯಶವರ್ಧನ್ ಕುಮಾರ್ ಸಿನ್ಹಾ ಅವರನ್ನು ನೇಮಿಸಿದೆ. ಸಿಐಸಿ ಹುದ್ದೆಗಾಗಿ 155 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ವರದಿಯಾಗಿತ್ತು.
2019ರ ಜನವರಿ 1ರಂದು ಸಿನ್ಹಾ ಅವರು ಮಾಹಿತಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಮಾಜಿ ರಾಜತಾಂತ್ರಿಕ ಅಧಿಕಾರಿಯಾದ ಸಿನ್ಹಾ ಅವರು ಇಂಗ್ಲೆಂಡ್ ಮತ್ತು ಶ್ರೀಲಂಕಾದ ಹೈ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮಾಜಿ ಸಿಐಸಿ ಬಿಮಲ್ ಜುಲ್ಕಾ ಅವರು ಆಗಸ್ಟ್ 26ರಂದು ನಿವೃತ್ತರಾಗಿದ್ದರು.