ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 24-11-2020

>> ಅರ್ನಾಬ್ ವಿರುದ್ಧದ ಹಕ್ಕು ಚ್ಯುತಿ ಪ್ರಕರಣ >> ಬಾಲಿವುಡ್ ನಟಿ ಕಂಗನಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ >> ನಿವೃತ್ತ ನ್ಯಾ. ಕರ್ಣನ್‌ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಮನವಿ >> ಎಂ ಜೆ ಅಕ್ಬರ್ ಮಾನಹಾನಿ ಪ್ರಕರಣ

Siddesh M S

ಅರ್ನಾಬ್‌ ಗೋಸ್ವಾಮಿ ವರ್ಸಸ್‌ ಮಹಾರಾಷ್ಟ್ರ ವಿಧಾನಸಭೆ: ಸ್ಪೀಕರ್‌ ಸೂಚನೆ ಮೇರೆಗೆ ಕರ್ತವ್ಯ ನಿರ್ವಹಿಸಿದ್ದಾಗಿ ತಿಳಿಸಿದ ಸಹಾಯಕ ಕಾರ್ಯದರ್ಶಿ

ಮಹಾರಾಷ್ಟ್ರ ವಿಧಾನಸಭೆಯ ಹಕ್ಕು ಚ್ಯುತಿ ನೋಟಿಸ್‌ ಪ್ರಶ್ನಿಸಿ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಎರಡು ವಾರಗಳ ಕಾಲ ಮುಂದೂಡಿದೆ. ಸ್ಪೀಕರ್‌ ಸೂಚನೆಯ ಮೇರೆಗೆ ತಾವು ಕರ್ತವ್ಯ ನಿರ್ವಹಿಸಿರುವುದಾಗಿ ವಿಧಾನಸಭೆಯ ಸಹಾಯಕ ಕಾರ್ಯದರ್ಶಿ ವಿಲಾಸ್‌ ಅಠಾವಳೆ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಹಾಗಾಗಿ, ಈ ಸಂಬಂಧ ವಿಧಾನಸಭೆಯ ಸ್ಪೀಕರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಬೇಕಾಗುತ್ತದೆಯೇ ಎನ್ನುವ ಅಂಶದ ಬಗ್ಗೆ ತೀರ್ಮಾನಿಸುವ ಅಗತ್ಯವಿರುವುದನ್ನು ಪೀಠವು ಗಮನಿಸಿತು. ಈ ಹಿನ್ನೆಲೆಯಲ್ಲಿ ಅಠಾವಳೆ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಕಾಲಾವಕಾಶ ಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

Arnab Goswami, Maharashtra Assembly

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಗೋಸ್ವಾಮಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರದಂತೆ ಬೆದರಿಕೆ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ವಿಧಾನಸಭಾ ಸಹಾಯಕ ಕಾರ್ಯದರ್ಶಿ ಅಠಾವಳೆ ಅವರ ಖುದ್ದು ಹಾಜರಾತಿಗೆ ಆದೇಶಿಸಿತ್ತು.

ದೂರುಗಳಲ್ಲಿ 124A (ರಾಷ್ಟ್ರದ್ರೋಹ) ಅಳವಡಿಸುವುದು ಟ್ರೆಂಡ್‌ ಆಗಿದೆ: ಕಂಗನಾ, ರಂಗೋಲಿಗೆ ಮಧ್ಯಂತರ ರಕ್ಷಣೆ ನೀಡಿದ ಬಾಂಬೆ ಹೈಕೋರ್ಟ್‌

ದ್ವೇಷಕಾರಕ ಟ್ವೀಟ್‌ಗಳನ್ನು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಕಂಗನಾ ರನೌತ್‌ ಮತ್ತು ಆವರ ಸಹೋದರಿ ರಂಗೋಲಿ ಚಂಡೇಲ್‌ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಮಂಗಳವಾರ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆ.

Kangana Ranaut, Rangoli Chandel, Bombay HC

2021ರ ಜನವರಿ 8ರಂದು ಹಾಜರಾಗುವಂತೆ ಮುಂಬೈ ಪೊಲೀಸರು ಸಹೋದರಿಯರಿಗೆ ಸಮನ್ಸ್‌ ನೀಡಿದ್ದಕ್ಕೆ ಸಂಬಂಧಿಸಿದಂತೆ ವಕೀಲ ರಿಜ್ವಾನ್‌ ಸಿದ್ದಿಕಿ ಮೂಲಕ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ನಿಕ್‌ ಅವರಿದ್ದ ವಿಭಾಗೀಯ ಪೀಠವು ಮಧ್ಯಂತರ ರಕ್ಷಣೆ ನೀಡಿದೆ. “ದೂರಿನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 124A ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವುದು ಟ್ರೆಂಡ್‌ ಆಗಿದೆ. ಇದರ ಅವಶ್ಯಕತೆ ಏನು? ನಮ್ಮ ದೇಶವಾಸಿಗಳನ್ನು ಹೀಗೆ ನಡೆಸಿಕೊಳ್ಳುವುದೇ? ಎಂದು ಪೀಠ ಮೌಖಿಕವಾಗಿ ಪ್ರಶ್ನಿಸಿತು.

ನಿವೃತ್ತ ನ್ಯಾ. ಕರ್ಣನ್‌ ವಿರುದ್ಧ ಕ್ರಿಮಿನಲ್‌ ಕ್ರಮಕ್ಕೆ ಆಗ್ರಹಿಸಿ ಮನವಿ: ವಕೀಲರ ಪರಿಷತ್‌ನಿಂದ ಸರಿಯಾದ ಕ್ರಮ ಎಂದ ಮದ್ರಾಸ್‌ ಹೈಕೋರ್ಟ್‌

ನ್ಯಾಯಾಂಗ ಮತ್ತು ಮಹಿಳೆಯರ ಬಗ್ಗೆ ಈಚೆಗೆ ಕೀಳು ಅಭಿರುಚಿಯ ಅಭಿಪ್ರಾಯ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಅವರ ಹೇಳಿಕೆಗಳತ್ತ ಬೆರಳು ಮಾಡಿರುವ ಮದ್ರಾಸ್‌ ಹೈಕೋರ್ಟ್‌ ಕರ್ಣನ್‌ ಅವರು ಪದೇಪದೇ ನೀಡುತ್ತಿರುವ ಹೇಳಿಕೆಗಳು ನ್ಯಾಯಿಕ ಸಂಸ್ಥೆಯ ಘನತೆಯನ್ನು ಕುಂದಿಸುತ್ತಿವೆ ಎಂದು ಸೋಮವಾರ ಹೇಳಿದೆ.

Justice CS Karnan

ಬಾಕಿ ಇರುವ ರಿಟ್‌ ಮನವಿಯ ಜೊತೆಗೆ ನಿವೃತ್ತ ನ್ಯಾ. ಕರ್ಣನ್‌ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಿಮಿನಲ್‌ ಕ್ರಮಕ್ಕೆ ಆಗ್ರಹಿಸಿ ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್‌ಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. “ಈ ಸಂದರ್ಭದಲ್ಲಿ ವಕೀಲರ ವೃಂದ ಮತ್ತು ನ್ಯಾಯಪೀಠವು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ತಮಿಳುನಾಡು ಮತ್ತು ಪುದುಚೆರಿಯ ವಕೀಲರ ಪರಿಷತ್‌ಗಳು ಮೊದಲನೇ ಆರೋಪಿಯ ಪುನರಾವರ್ತಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾದ ನಿಲುವು ಕೈಗೊಂಡಿವೆ. ನ್ಯಾ. ಕರ್ಣನ್‌ ಅವರು ವಕೀಲರೂ ಭಾಗಿಯಾಗಿರುವ ನ್ಯಾಯಿಕ ಸಂಸ್ಥೆಯ ಘನತೆ, ಪ್ರತಿಷ್ಠೆ, ಗೌರವವನ್ನು ಹಾಳುಗೆಡವುತ್ತಿದ್ದಾರೆ” ಎಂದು ಪೀಠ ಹೇಳಿದ್ದು, ನವೆಂಬರ್‌ 30ಕ್ಕೆ ವಿಚಾರಣೆ ಮುಂದೂಡಿದೆ.

ಎಂ ಜೆ ಅಕ್ಬರ್‌ ಮಾನಹಾನಿ ಪ್ರಕರಣ: ದೆಹಲಿ ನ್ಯಾಯಾಲಯದಲ್ಲಿ ತನ್ನ ಹೇಳಿಕೆಗೆ ಬದ್ಧ ಎಂದ ಪ್ರಿಯಾ ರಮಣಿ

ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ತಮ್ಮ ವಿರುದ್ಧ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ರಾಜಿ ಇತ್ಯರ್ಥಕ್ಕೆ ಒಪ್ಪುವುದಿಲ್ಲ, ಬದಲಿಗೆ ತನ್ನ ಹೇಳಿಕೆಗೆ ಬದ್ಧವಾಗಿರುವುದಾಗಿ ದೆಹಲಿ ನ್ಯಾಯಾಲಯಕ್ಕೆ ಮಂಗಳವಾರ ಪತ್ರಕರ್ತೆ ಪ್ರಿಯಾ ರಮಣಿ ತಿಳಿಸಿದ್ದಾರೆ.

Priya Ramani and MJ Akbar

ಕಳೆದ ವಿಚಾರಣೆಯ ಸಂದರ್ಭದಲ್ಲಿ ಹೊಸದಾಗಿ ವರ್ಗಾವಣೆಯಾಗಿ ಬಂದಿರುವ ರೋಸ್‌ ಅವೆನ್ಯೂ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ಎಂ ಜೆ ಅಕ್ಬರ್‌ ಮತ್ತು ಪ್ರಿಯಾ ರಮಣಿ ಅವರು ರಾಜಿ ಇತ್ಯರ್ಥಕ್ಕೆ ಸಿದ್ಧವಿದ್ದಾರೆಯೇ ಎಂದು ಕೇಳಿದ್ದರು. ರಮಣಿ ಅವರು ಕ್ಷಮೆ ಕೋರಲು ಸಿದ್ಧವಾಗಿದ್ದರೆ ಅಗತ್ಯವಾದ ಸಲಹೆಗಳನ್ನು ಪಡೆಯಲಾಗುವುದು ಎಂದು ಅಕ್ಬರ್‌ ಪರ ಹಿರಿಯ ವಕೀಲೆ ಗೀತಾ ಲೂಥ್ರಾ ಹೇಳಿದರು. ರಮಣಿ ಅವರ ವಕೀಲ ಭಾವೂಕ್‌ ಚೌಹಾಣ್‌ ಅವರು “ರಮಣಿ ಅವರು ತಮ್ಮ ಹೇಳಿಕೆ ಬದ್ಧವಾಗಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.