“ವಿಚಾರಣೆಯ ನೆಪದಲ್ಲಿ ಹನ್ಸ್ ಸಮೂಹದ ಸಿಬ್ಬಂದಿಯನ್ನು ಪ್ರತಿ ದಿನ ಕಚೇರಿಗೆ ಕರೆಯುವ ಮೂಲಕ ಅವರಿಗೆ ಕಿರುಕುಳ ನೀಡಬೇಡಿ. ನಿಮಗೆ ಎಂದು ಅವರು ವಿಚಾರಣೆಗೆ ಅಗತ್ಯವಿದೆ ಎಂಬುದರ ಕುರಿತು ದಯವಿಟ್ಟು ನಿರ್ದೇಶನ ಪಡೆಯಿರಿ. ಉದಾಹರಣೆಗೆ ವಾರದಲ್ಲಿ ಎರಡು ಅಥವಾ ಮೂರು ದಿನ” ಎಂದು ಮುಂಬೈ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಸಲಹೆ ನೀಡಿತು.
ನ್ಯಾಯಾಲಯದ ಸೂಚನೆಯ ನಂತರ ವಾರದಲ್ಲಿ ಎರಡು ದಿನ ಹನ್ಸ್ ಪ್ರತಿನಿಧಿಗಳು ಮುಂದಿನ ವಿಚಾರಣೆಯವರೆಗೆ ಲಭ್ಯರಿದ್ದರೆ ಸಾಕು ಎನ್ನುವ ಹೇಳಿಕೆಯನ್ನು ಮುಂಬೈ ಪೊಲೀಸ್ ಪರ ವಕೀಲರು ಪೀಠದ ಮುಂದೆ ಸಲ್ಲಿಸಿದರು.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ವಿರುದ್ಧ ತಪ್ಪು ಹೇಳಿಕೆ ನೀಡುವಂತೆ ಹನ್ಸ್ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ನ್ಯಾಯಾಲಯ ಮಧ್ಯಪ್ರವೇಶಿಸಿ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹನ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ನಿಕ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಬಳಿಕ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಪೀಠವು, ಪ್ರತಿಕ್ರಿಯೆ ದಾಖಲಿಸಲು ಸ್ವಾತಂತ್ರ್ಯ ನೀಡಿದೆ. ಇದೇ ಸಂದರ್ಭದಲ್ಲಿ ನ್ಯಾಯಪೀಠವು ಪೊಲೀಸರ ಹೇಳಿಕೆಯನ್ನು ದಾಖಲಿಸಿಕೊಂಡಿತು.
ಸುಪ್ರೀಂ ಕೋರ್ಟ್ ನ ಆದೇಶ ಶುಕ್ರವಾರ ಸ್ಪೈಸ್‌ಜೆಟ್‌ಗೆ ನಿರಾಳತೆ ಉಂಟು ಮಾಡಿದೆ. ಸ್ಪೈಸ್ ಜೆಟ್ ಮತ್ತು ಅದರ ಮಾಜಿ ಪ್ರವರ್ತಕ ಕಲಾನಿಧಿ ಮಾರನ್ ಅವರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಏರ್‌ಲೈನ್ ಕಂಪೆನಿಗೆ ರೂ.243 ಕೋಟಿ ಠೇವಣಿ ಇರಿಸುವಂತೆ ಆದೇಶಿಸಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಏರ್‌ಲೈನ್ ಮತ್ತು ಮಾರನ್ ನಡುವಿನ ಷೇರು ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿದ್ದ ದೆಹಲಿ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸ್ಪೈಸ್ ಜೆಟ್ ಸಲ್ಲಿಸಿದ್ದ ಮೇಲ್ಮನವಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಮಾರನ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಸನ್ ಸಮೂಹದ ಅಧ್ಯಕ್ಷರ ಹೆಸರಿಗೆ 243 ಕೋಟಿ ರೂಪಾಯಿ ಹಣ ಠೇವಣಿ ಇಡುವಲ್ಲಿ ಏರ್‌ಲೈನ್ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ಪ್ರವರ್ತಕ ಅಜಯ್ ಸಿಂಗ್ ಅವರ ಷೇರುಗಳನ್ನು ವಿಕ್ರಯಕ್ಕಿಡುವಂತೆ ಕೋರಿ ಅಕ್ಟೋಬರ್ 22ರಂದು ಮಾರನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.
ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಚಾರಣಾಧೀನ ನ್ಯಾಯಾಲಯಗಳು ನಿರ್ದಿಷ್ಟ ಅರ್ಜಿ ಸಲ್ಲಿಕೆ ಇಲ್ಲದೆಯೂ ಸಾಕ್ಷಿಗಳಿಗೆ ಭದ್ರತೆ ಕಲ್ಪಿಸಲು ನಿರ್ಧಾರ ಕೈಗೊಳ್ಳಬಹುದು ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತನಿಖೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಕೋರಿ ಬಿಜೆಪಿಯ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಸೂರ್ಯ ಕಾಂತ್ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿತು. ವಿಶೇಷ ನ್ಯಾಯಾಲಯಗಳಿಂದ ಬಹುದೂರ ನೆಲೆಸಿರುವ ಸಾಕ್ಷಿಗಳಿಗೆ ಭದ್ರತೆ ಕಲ್ಪಿಸುವ ಅಗತ್ಯತೆಯ ಬಗ್ಗೆ ವಿಶ್ಲೇಷಣೆ ನಡೆಸುವಂತೆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ವಿಜತ್ ಹನ್ಸಾರಿಯಾ ಪೀಠಕ್ಕೆ ಸಲಹೆ ನೀಡಿದ್ದರು.