ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ 'ಬೆದರಿಕೆ' ಹಾಕಿರುವ ಮಹಾರಾಷ್ಟ್ರ ವಿಧಾನಸಭಾ ಸಹಾಯಕ ಕಾರ್ಯದರ್ಶಿ ಕ್ರಮವು ಗೋಸ್ವಾಮಿ ಅವರು ಸುಪ್ರೀಂ ಕೋರ್ಟ್‌ಗೆ ಬರುವುದನ್ನು ತಡೆಯುವ ಯತ್ನವಾಗಿದ ಎಂದು ಶುಕ್ರವಾರ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಹಕ್ಕು ಚ್ಯುತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಮತ್ತು ಹಕ್ಕು ಬಾಧ್ಯತಾ ಸಮಿತಿಯು ಅರ್ನಾಬ್ ಗೋಸ್ವಾಮಿ ಅವರಿಗೆ ರವಾನಿಸಿರುವ ಪ್ರಕ್ರಿಯೆಯ ವಿವರವನ್ನು ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವುದಕ್ಕೆ ಅಕ್ಟೋಬರ್ 13ರಂದು ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿಯು ಬರೆದಿರುವ ನಿಂದನಾ ಪತ್ರಕ್ಕೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಂವಿಧಾನದ 32ನೇ ವಿಧಿಯ ಅನ್ವಯ ನಾಗರಿಕರನ್ನು ತಮ್ಮ ಹಕ್ಕು ಚಲಾಯಿಸುವುದರಿಂದ ತಡೆಯುವ ಯತ್ನವು ನ್ಯಾಯದಾನ ವ್ಯವಸ್ಥೆಯ ಮೇಲಿನ ಹಸ್ತಕ್ಷೇಪಕ್ಕೆ ಸಮನಾಗಿದೆ. ಅಕ್ಟೋಬರ್ 13ರಂದು ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಕಾರ್ಯದರ್ಶಿಯು ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಏಕೆ ತಮ್ಮ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಬಾರದು ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಆದೇಶಿಸಿದೆ.
ದೆಹಲಿ-ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ (ಎನ್‌ಸಿಆರ್) ಮುಂದಿನ ದಿನಗಳಲ್ಲಿ ಧೂಳಿನ ಹೊಂಜು ಆವರಿಸದಂತೆ ತಡೆಯಲು ಕ್ರಮಕೈಗೊಳ್ಳುವಂತೆ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಇಂಥ ಪ್ರಕರಣಗಳ ವಿಚಾರದಲ್ಲಿ ನ್ಯಾಯಾಲಯಕ್ಕೆ ತನ್ನದೇ ಆದ ಮಿತಿಗಳಿವೆ ಎಂದಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೊಂಜು ಮತ್ತು ದಟ್ಟ ಹೊಗೆಯು ರಾಷ್ಟ್ರ ರಾಜಧಾನಿಗೆ ಯಾವುದೇ ತೆರನಾದ ಸಮಸ್ಯೆ ಮಾಡದಂತೆ ಖಾತರಿಪಡಿಸುವಂತೆ ಸೂಚಿಸಿದೆ. ಎನ್‌ಸಿಆರ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗ ರಚಿಸಲಾಗಿದ್ದು, ಅದು ಇಂದಿನಿಂದ ಕಾರ್ಯಾರಂಭ ಮಾಡಿದೆ ಎಂದು ಪೀಠಕ್ಕೆ ತುಷಾರ್ ಮೆಹ್ತಾ ತಿಳಿಸಿದರು.
ನಿವೃತ್ತ ವೇತನ ಪಡೆಯುತ್ತಿರುವ ಉದ್ಯೋಗಿಯು ತಾನು ನೆಲೆಸಿರುವ ಸ್ಥಳದಲ್ಲಿ ವ್ಯಾಜ್ಯ ಕಾರಣ (ಕಾಸ್ ಆಫ್ ಆಕ್ಷನ್) ಹೊಂದಿರುವಾಗ ಅವರನ್ನು ಮತ್ತೊಂದು ನ್ಯಾಯಾಲಯಕ್ಕೆ ತೆರಳುವಂತೆ ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉದ್ಯೋಗಿಯ ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ನೇತೃತ್ವದ ಪೀಠವು ತೀರ್ಪು ಪ್ರಕಟಿಸಿದೆ. ನಿವೃತ್ತ ಉದ್ಯೋಗಿಯು ತಾವಿರುವ ಸ್ಥಳದಲ್ಲಿಯೇ ವ್ಯಾಜ್ಯ ಕಾರಣವನ್ನು ಹೊಂದಿರುವಾಗ ನ್ಯಾಯಕ್ಕಾಗಿ ಅವರು ಮತ್ತೊಂದು ಸ್ಥಳದಲ್ಲಿನ ನ್ಯಾಯಾಲಯವನ್ನು ಎಡತಾಕುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಪ್ರಕರಣದಲ್ಲಿ ನಿವೃತ್ತ ಉದ್ಯೋಗಿಯು ತಾವಿರುವ ಸ್ಥಳದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿವೃತ್ತಿ ವೇತನವನ್ನು ಪಡೆಯುತ್ತಿದ್ದರು. ವೇತನ ನಿಂತಿರುವುದರಿಂದ ತೊಂದರೆಯು ನಿವೃತ್ತ ಉದ್ಯೋಗಿಗೆ ಅವರಿರುವ ಸ್ಥಳದಲ್ಲಿ ಉದ್ಭವಿಸಿದೆ. ಹೀಗಾಗಿ, ವ್ಯಾಜ್ಯ ಕಾರಣವು ಅವರಿರುವ ಸ್ಥಳದಲ್ಲಿಯೇ ಉದ್ಭವಿಸಿದ್ದು, ಅವರು ತಾವು ಕೆಲಸ ನಿರ್ವಹಿಸುತ್ತಿದ್ದ ಮತ್ತೊಂದು ರಾಜ್ಯದಲ್ಲಿ ದಾವೆ ಸಲ್ಲಿಸುವ ಅಗತ್ಯವಿಲ್ಲ, ತಾವಿರುವೆಡೆಯೇ ಸಲ್ಲಿಸಬಹುದು ಎಂದಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ (ಪೋಕ್ಸೊ) ಕಾಯಿದೆಯಡಿ ದೋಷಿಗಳು ಎಂದು ಘೋಷಿತರಾದವರಿಗೆ ಮಹಾರಾಷ್ಟ್ರ ಜೈಲುಗಳ ಮುಂಬೈ ಫರ್ಲಾ ಮತ್ತು ಪೆರೋಲ್ (ತಿದ್ದುಪಡಿ) ನಿಯಮಗಳು 2020 ರ ಅನ್ವಯ ತುರ್ತು (ಕೋವಿಡ್) ಪೆರೋಲ್ ನೀಡಲಾಗದು ಎಂದು ಬಾಂಬೆ ಹೈಕೋರ್ಟ್‌ನ ಪೂರ್ಣ ಪೀಠ ಶುಕ್ರವಾರ ತೀರ್ಪು ನೀಡಿದೆ.
ವಿವಿಧ ಹೈಕೋರ್ಟ್‌ಗಳ ಪೀಠಗಳು ಸಂಘರ್ಷಾತ್ಮಕ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಹಾಗೂ ಎಂ ಎಸ್ ಕಾರ್ನಿಕ್ ಅವರಿದ್ದ ವಿಭಾಗೀಯ ಪೀಠವು ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತ್ತು. ಇದನ್ನು ಆಧರಿಸಿ ನ್ಯಾಯಮೂರ್ತಿಗಳಾದ ಕೆ ಕೆ ತಸೇದ್, ಜಿ ಎಸ್ ಕುಲಕರ್ಣಿ, ಎನ್ ಆರ್ ಬೋರ್ಕರ್ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿತು.