CJI DY Chandrachud
CJI DY Chandrachud 
ಸುದ್ದಿಗಳು

ಪುರುಷ ಪ್ರಧಾನ, ಜಾತಿ ಆಧಾರಿತವಾಗಿರುವ ಕಾನೂನು ವೃತ್ತಿ ಎಲ್ಲ ವರ್ಗಗಳಿಗೂ ಮುಕ್ತವಾಗಬೇಕು: ಸಿಜೆಐ ಚಂದ್ರಚೂಡ್

Bar & Bench

ದೇಶದಲ್ಲಿ ಪುರುಷಪ್ರಧಾನ ಮತ್ತು ಜಾತಿ ಆಧರಿತವಾಗಿರುವ ಕಾನೂನು ವೃತ್ತಿ ಪರಿವರ್ತನೆಗೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದರು.

ಭಾರತೀಯ ವಕೀಲರ ಪರಿಷತ್ (ಬಿಸಿಐ) ಶನಿವಾರ  ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಅಂತಹ ಬದಲಾವಣೆ ತರಲು ಮತ್ತು ವೃತ್ತಿಯನ್ನು ವಿವಿಧ ಸಮುದಾಯಗಳು ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ತಲುಪಿಸಲು ವಕೀಲರು ಕ್ರಮ ಕೈಗೊಳ್ಳಬೇಕು ಎಂದರು.

“ಪುರುಷ ಪ್ರಧಾನ ಮತ್ತು ಕೆಲ ಸಂದರ್ಭಗಳಲ್ಲಿ ಬಹಳಷ್ಟು ಜಾತಿ ಆಧಾರಿತವಾಗುವ ವಕೀಲ ವೃತ್ತಿಯ ವ್ಯವಸ್ಥೆಯು, ನ್ಯಾಯವಾದಿಗಳಾದ ನಾವು ನಮ್ಮ ಸಮಾಜದಲ್ಲಿ ವಿವಿಧ ಸಮುದಾಯಗಳು ಮತ್ತು ಸಮಾಜದ ಅಂಚಿನಲ್ಲಿರುವ ಜನರಿಗೆ ವಕೀಲ ವೃತ್ತಿ ತಲುಪುವಂತೆ ಮಾಡುವ ರೀತಿ  ಬದಲಾಗಬೇಕಿದೆ” ಎಂದರು.

ಮೆರಿಟ್‌ ಆಧಾರದಲ್ಲಿ ಕಿರಿಯ ವಕೀಲರನ್ನು ವೃತ್ತಿಗೆ ಆಯ್ಕೆ ಮಾಡುವ ವ್ಯವಸ್ಥೆ ಇಲ್ಲ ಎಂದ ಅವರು ನ್ಯಾಯಾಂಗ ಮತ್ತು ವಕೀಲ ಲೋಕಕ್ಕೆ ಹೊಸ ಪ್ರತಿಭೆಗಳನ್ನು ತರುತ್ತಿರುವ ರಾಷ್ಟ್ರೀಯ ಕಾನೂನು ಶಾಲೆಗಳನ್ನು ಶ್ಲಾಘಿಸಿದರು.

ಕೆಲ ವರ್ಷಗಳ ಹಿಂದೆ ಕಾನೂನು ಹೇಗೆ ಆದ್ಯತೆಯ ವೃತ್ತಿಯಾಗಿರಲಿಲ್ಲ ಎಂಬುದನ್ನು ಅವರು ನೆನೆದರು. "ಈಗ ಹಲವು ರಾಷ್ಟ್ರೀಯ ಕಾನೂನು ಶಾಲೆಗಳಿದ್ದು ಕೆಲವು ಉತ್ತಮವಾಗಿವೆ ಆದರೆ ಕೆಲವು ಹೆಸರಿಗೆ ಮಾತ್ರ ರಾಷ್ಟ್ರೀಯವಾಗಿವೆ" ಎಂದು ಅವರು ಹೇಳಿದರು.

ಈಗ ವಕೀಲ ವೃತ್ತಿ ಮತ್ತು ನ್ಯಾಯಧೀಶರ ಸಮುದಾಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು ತಿಳಿಸಿದ ಅವರು  “ರಾಜಸ್ಥಾನ ನ್ಯಾಯಾಂಗಕ್ಕೆ ಇತ್ತೀಚೆಗೆ ನಡೆದ ನೇಮಕಾತಿ ವೇಳೆ ಶೇ 60 ಮಂದಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಇದು ಬದಲಾಗುತ್ತಿರುವ ಕಾಲದ ಮತ್ತು ಮಹಿಳಾ ಶಿಕ್ಷಣ ಯಶಸ್ವಿಯಾಗಿ ತಲುಪುತ್ತಿರುವುದರ ಸ್ಪಷ್ಟ ಸಂಕೇತವಾಗಿದೆ” ಎಂದರು.