ವಕೀಲರ ಪ್ರತಿಭಟನೆಗೆ ರಿಜಿಜು ಬೇಸರ: ನ್ಯಾಯವಾದಿಗಳು ರಾಷ್ಟ್ರೀಯ ದೃಷ್ಟಿಯಿಂದ ಕೊಲಿಜಿಯಂ ನಿರ್ಧಾರ ನೋಡಲಿ ಎಂದ ಸಿಜೆಐ

ಪ್ರತಿಭಟನೆ ಗುಜರಾತ್ ಮಾತ್ರವಲ್ಲದೆ ತೆಲಂಗಾಣ, ಮದ್ರಾಸ್ ಹೈಕೋರ್ಟ್‌ಗಳಿಗೈ ಹಬ್ಬಿದ್ದು ಅಲ್ಲಿನ ಕೆಲ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ವಕೀಲರ ಪ್ರತಿಭಟನೆಗೆ ರಿಜಿಜು ಬೇಸರ:  ನ್ಯಾಯವಾದಿಗಳು ರಾಷ್ಟ್ರೀಯ ದೃಷ್ಟಿಯಿಂದ ಕೊಲಿಜಿಯಂ ನಿರ್ಧಾರ ನೋಡಲಿ ಎಂದ ಸಿಜೆಐ

ನ್ಯಾಯಮೂರ್ತಿಗಳ ವರ್ಗಾವಣೆ ಕುರಿತಂತೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ಧಾರಗಳನ್ನು ವಿರೋಧಿಸಿದ ವಕೀಲರ ಬಗ್ಗೆ ಕೇಂದ್ರ ಸಚಿವ ಕಿರೆನ್‌ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಇದೇ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಜೆಐ ಡಿ ವೈ ಚಂದ್ರಚೂಡ್‌, ಅವರು “ದಾವೆದಾರರ ಮೇಲೆ ವಕೀಲರ ಪ್ರತಿಭಟನೆ ಬಹಳಷ್ಟು ಪರಿಣಾಮ ಬೀರುತ್ತದೆ ಮತ್ತು ಕೊಲಿಜಿಯಂ ನಿರ್ಧಾರವನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಬೇಕು” ಎಂದು ಸಲಹೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ನೂತನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ಶನಿವಾರ  ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಇಬ್ಬರೂ ಈ ವಿಷಯ ತಿಳಿಸಿದರು.

ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ನಿಖಿಲ್‌ ಕರಿಯೆಲ್‌ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾಯಿಸಿದ ಕೊಲಿಜಿಯಂ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಲು ಸೋಮವಾರ ಸಿಜೆಐ ಅವರನ್ನು ಭೇಟಿಯಾಗುವುದಾಗಿ ಗುಜರಾತ್‌ ಹೈಕೋರ್ಟ್‌ ವಕೀಲರ ಸಂಘ  ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ರಿಜಿಜು ಅವರು “ಇಂತಹ ವಿಚಾರಗಳಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗುವುದು ಮರುಕಳಿಸಿದರೆ ಅದು ನ್ಯಾಯಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ” ಎಂದರು.

“ನಿನ್ನೆ ಕೆಲವು ವಕೀಲರು (ನ್ಯಾಯಮೂರ್ತಿಗಳ) ವರ್ಗಾವಣೆ ವಿಚಾರವಾಗಿ ಸಿಜೆಐ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂಬುದನ್ನು ಕೇಳಿದೆ. ಈಗ ಸಮಸ್ಯೆ ಒಂದೇ ಆಗಿರಬಹುದು ಅಥವಾ ಅದು ವಿವಿಧ ಸಮಸ್ಯೆಗಳಲ್ಲೊಂದಾಗಿರಬಹುದು. ಆದರೆ ಕೊಲಿಜಿಯಂ ತೆಗೆದುಕೊಳ್ಳುವ ಅಥವಾ ಸರ್ಕಾರ ಬೆಂಬಲಿಸುತ್ತಿರುವ ಪ್ರತಿಯೊಂದು ನಿರ್ಧಾರಕ್ಕೂ ಇದು ಪುನರಾವರ್ತನೆಯಾದರೆ ಆಗ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ. ನ್ಯಾಯಾಂಗವಷ್ಟೇ ಅಲ್ಲದೆ ಇಡೀ ಆಯಾಮ ಬದಲಾಗುತ್ತದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆ ಗುಜರಾತ್‌ ಮಾತ್ರವಲ್ಲದೆ ತೆಲಂಗಾಣ, ಮದ್ರಾಸ್‌ ಹೈಕೋರ್ಟ್‌ಗಳಿಗೂ ಹಬ್ಬಿದ್ದು ಅಲ್ಲಿನ ಕೆಲ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ʼಸಹಕಾರಕ್ಕೆ ದಾರಿಯಾಗಲಿʼ

ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾ. ಚಂದ್ರಚೂಡ್‌ “ವಸಾಹತುಶಾಹಿ ವ್ಯವಸ್ಥೆಯಲ್ಲಿ ಪ್ರತಿಭಟನೆ, ಮುಷ್ಕರ ಇತ್ಯಾದಿಗಳು ಸಾಧನವಾಗಿದ್ದವು. ಈಗ ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೇವೆ. ಹೀಗಾಗಿ ಪ್ರತಿಭಟನೆ ಇತ್ಯಾದಿಗಳು ಸಹಕಾರಕ್ಕೆ ದಾರಿ ಮಾಡಿಕೊಡಬೇಕು” ಎಂದರು.

ವಕೀಲರು ಮುಷ್ಕರಕ್ಕೆ ಮುಂದಾದರೆ ದಾವೆದಾರರೇ ತೊಂದರೆ ಅನುಭವಿಸುತ್ತಾರೆ ಎಂಬುದನ್ನು ನ್ಯಾಯವಾದಿಗಳು ಅರ್ಥಮಾಡಿಕೊಳ್ಳಬೇಕು ಎಂದ ಅವರು ಅನೇಕ ಬಾರಿ ಸರ್ವೋಚ್ಚ ನ್ಯಾಯಾಲಯ ಇಡೀ ದೇಶವನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ಗಳಲ್ಲಿ ಬದಲಾವಣೆ ತಂದಿರುತ್ತದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ನಿರ್ಧಾರಗಳನ್ನು ವಕೀಲರು ರಾಷ್ಟ್ರೀಯ ದೃಷ್ಟಿಕೋನದದಿಂದ ನೋಡಬೇಕು ಎಂದು ಅವರು ಕಿವಿಮಾತು ಹೇಳಿದರು.

Related Stories

No stories found.
Kannada Bar & Bench
kannada.barandbench.com